ಶಿವಮೊಗ್ಗ : ನಗರದ ಹೊಸಮನೆ ಬಡಾವಣೆಯಲ್ಲಿ ಗುರುವಾರ ಬೆಳಗಿನ ಜಾವ ಕೆಲವು ದುಷ್ಕರ್ಮಿಗಳು ಮನೆ ಎದುರುಗಡೆ ನಿಲ್ಲಿಸಿದ್ದ ವಾಹಗಳನ್ನು ಜಖಂ ಗೊಳಿಸಿ, ವಿಕೃತಿ ಮೆರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ಇಲಾಖೆ ಆರೋಪಿಗಳ ಪತ್ತೆಗೆ ಬಲೆ ಬೀಸಿದೆ. ಪ್ರಕರಣದಲ್ಲಿ ೪ ರಿಂದ ೫ ಮಂದಿ ದುಷ್ಕರ್ಮಿಗಳು ಇರುವ ಬಗ್ಗೆಯೂ ಇಲಾಖೆಗೆ ಮಾಹಿತಿ ಲಭ್ಯವಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಅವರು ಈ ಕುರಿತಂತೆ ಶುಕ್ರವಾರ ಮಾಧ್ಯಮದವರಿಗೆ ಮಾಹಿತಿ ನೀಡಿ, ಪ್ರಕರಣದಲ್ಲಿನ ಆರೋಪಿಗಳ ಪತ್ತೆ ಆಗಿದೆ. ೪ ರಿಂದ ೫ ಮಂದಿ ಇರುವುದನ್ನು ಖಚಿತ ಪಡಿಸಿಕೊಳ್ಳಲಾಗಿದೆ. ಆದರೆ ಅವರು ಈಗ ಭಯದಿಂದ ಹೊರ ರಾಜ್ಯದಲ್ಲಿ ತಲೆ ಮರೆಸಿಕೊಂಡಿದ್ದಾರೆ. ಪತ್ತೆಗೆ ಮೂರು ಪೊಲೀಸ್ ತಂಡಗಳನ್ನು ರಚಿಸಲಾಗಿದೆ.ಶೀಘ್ರವೇ ಅವರನ್ನುಪತ್ತೆ ಹಚ್ಚಿ ವಶಕ್ಕೆ ಪಡೆಯಲಿದ್ದೇವೆ ಎಂದು ತಿಳಿಸಿದರು.
ದುಷ್ಕರ್ಮಿಗಳು ಗಾಂಜಾ ಮತ್ತಿನಲ್ಲಿದ್ದು ವಾಹನಗಳನ್ನು ಜಖಂ ಗೊಳಿಸಿದ್ದಾರೆಂದು ಸ್ಥಳೀಯ ನಿವಾಸಿಗಳು ನೀಡಿದ ದೂರಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಅವರೆಲ್ಲ ನಿಶೆಯಲ್ಲಿದ್ದರು ಎನ್ನುವುದು ಮೇಲ್ನೋಟಕ್ಕೆ ತಿಳಿದು ಬಂದ ಮಾಹಿತಿ. ಉಳಿದಂತೆ ಅವರು ಗಾಂಜಾ ಹೊಡೆದಿದ್ದರಾ ಅಥವಾ ಮಧ್ಯಪಾನ ಮಾಡಿದ್ರಾ ಎನ್ನುವುದನ್ನು ನಾವಿನ್ನು ಪರಿಶೀಲಿಸಬೇಕಿದೆ. ಅದೆಲ್ಲವೂ ಅವರು ಪತ್ತೆಯಾದ ಮೇಲೆಯೇ ಗೊತ್ತಾಗಲಿದೆ. ಸುಮ್ನೇ ಯಾರೋ ದೂರಿದರು ಎನ್ನುವ ಕಾರಣಕ್ಕೆ ನಾವು ಉಹಾ ಪೋಹದ ಮಾಹಿತಿ ನೀಡಲಾಗುವುದಿಲ್ಲ ಎಂದರು.
ದುಷ್ಕರ್ಮಿಗಳು ಅವತ್ತು ಯಾವರೀತಿಯಲ್ಲಿದ್ದು ವಾಹನಗಳನ್ನು ಜಖಂ ಮಾಡಿದರೂ ಎನ್ನುವುದು ಅವರನ್ನು ಪರೀಕ್ಷೆಗೆ ಒಳಡಿಸಿದಾಗಲೇ ಗೊತ್ತಾಗಲಿದೆ. ಆರೋಪಿಗೂ ಪತ್ತೆಯಾದ ತಕ್ಷಣವೇ ನಾವು ಪರೀಕ್ಷೆಗೆ ಒಳಪಡಿಸಲಿದ್ದೇವೆ. ಅವರೆಲ್ಲ ಗಾಂಜಾ ಹೊಡೆದಿದ್ದರೂ ಎನ್ನುವುದಾದರೆ ಅದು ಪರೀಕ್ಷೆಯಲ್ಲಿ ಗೊತ್ತಾಗುತ್ತದೆ. ಆನಂತರವೇ ಆ ಬಗೆಗಿನ ಸತ್ಯಾಂಶ ಹೊರಬರಲಿದೆ. ಯಾರೇ ಆಗಲಿ ಒಮ್ಮೆ ಗಾಂಜಾ ಸೇವನೆ ಮಾಡಿದರೆ 15 ದಿನಗಳ ವರೆಗೆ ಅದನ್ನು ಪತ್ತೆ ಹಚ್ಚಬಹುದು ಎಂದು ತಿಳಿಸಿದರು.
ಶಿವಮೊಗ್ಗ ನಗರದಲ್ಲಿ ಗಾಂಜಾ ಪ್ರಕರಣ ಹೆಚ್ಚಾಗುತ್ತಿರುವ ಕುರಿತಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಗಾಂಜಾ ಮಾರಾಟ ಮತ್ತು ಸೇವೆನೆ ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗಿದೆ. ವಿಶೇಷವಾಗಿ ಶಿವಮೊಗ್ಗ ಮತ್ತು ಭದ್ರಾವತಿ ನಗರದಲ್ಲಿ ನಿಗಾ ಪ್ರಕರಣಗಳ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಸಾಗರದಲ್ಲೂ ಇತೀಚೆಗೆ ಗಾಂಜಾ ಪ್ರಕರಣದ ದೂರು ದಾಖಲಾಗಿದೆ. ನಿರಂತರವಾಗಿ ಹೀಗೆ ಗಾಂಜಾ ಮಾರಾಟ ಮತ್ತು ಸೇವೆನೆ ಮಾಡುವವರ ವಿರುದ್ದ ದಾಳಿ ನಡೆಯುತ್ತಲೇ ಇವೆ. ಅಲ್ಲದೆ, ಬಸ್ಟ್ಯಾಂಡ್ ಸೇರಿದಂತೆ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು ಪೊಲೀಸರ ಮೂಲಕ ಕಾರ್ಯಾಚರಣೆ ನಿರಂತರವಾಗಿ ನಡೆದಿದೆ ಎಂದು ಮಾಹಿತಿ ನೀಡಿದರು.
……………………..
ಗಾಂಜಾ ಮಾರಾಟ ಮತ್ತು ಸೇವನೆ ಸೇರಿದಂತೆ ಅಕ್ರಮ ಚಟುವಟಿಕೆಕೋರರ ಜತೆಗೆ ಪೊಲೀಸ್ ಇಲಾಖೆಯ ಯಾವುದೇ ಸಿಬ್ಬಂದಿ ಪಾಲ್ಗೊಂಡಿದ್ದರ ಬಗ್ಗೆ ಖಚಿತ ಮಾಹಿತಿ ಸಾರ್ವಜನಿಕರಿಗೆ ಅಥವಾ ಮಾಧ್ಯಮದವರಿಗೆ ಗೊತ್ತಾದರೆ ಇಲಾಖೆಗೆ ಮಾಹಿತಿ ನೀಡಬಹುದು. ಸಿಬ್ಬಂದಿಯ ಇಂತಹ ಕೃತ್ಯವನ್ನು ಇಲಾಖೆ ಸಹಿಸುವುದಿಲ್ಲ. ಆದರೆ ಸುಮ್ಮನೆ ಆರೋಪ ಮಾಡುವುದಕ್ಕಿಂತ, ಖಚಿತ ಮಾಹಿತಿ ಲಭ್ಯವಾದರೆ ಅದನ್ನು ತಿಳಿಸುವುದು ಸೂಕ್ತ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಅವರು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು