ಶಿವಮೊಗ್ಗ: ಎಳೆಯ ವಯಸ್ಸಿನಲ್ಲಿಯೇ ಮಕ್ಕಳಿಗೆ ಸಾಹಿತ್ಯದ ಅಭಿರುಚಿ ಬೆಳೆಸಬೇಕಿದೆ ಎಂದು ಶ್ರೀ ವರದಾಂಜನೇಯ ಸ್ವಾಮಿ ದೇವಾಲಯ ಸಮಿತಿ ಅಧ್ಯಕ್ಷ ವಿ.ಟಿ. ಅರುಣ್ ಹೇಳಿದರು.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಸ್ವಾಮಿ ವಿವೇಕಾನಂದ ಬಡಾವಣೆಯ ಶ್ರೀ ವರಂದಾಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಮುಂಗಾರು ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮಕ್ಕೆ ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಜಿಲ್ಲೆಯ ಮಣ್ಣಿನಲ್ಲೇ ಸಾಹಿತ್ಯದ ಗುಣ ಬೆರತುಹೋಗಿದೆ. ಕುವೆಂಪು, ಶಿವರುದ್ರಪ್ಪ ರಂತಹ ರಾಷ್ಟ್ರಕವಿಗಳು ಇಲ್ಲಿ ಹುಟ್ಟಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಇಂತಹ ಮಣ್ಣಿನ ಮಕ್ಕಳಿಗೆ ಸಾಹಿತ್ಯದ ಬಗ್ಗೆ ಸ್ವಲ್ಪ ಅಭಿರುಚಿ ಬೆಳೆಸಿದರೂ ಅವರು ಕನ್ನಡ ಕಟ್ಟುವ ಕೆಲಸಕ್ಕೆ ಮುಂದಾಗುತ್ತಾರೆ ಎಂದು ಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಪ್ರತಿ ಬಡಾವಣೆಯಲ್ಲಿ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಪ್ರತಿಯೊಂದು ಮನೆ ಮನವನ್ನು ತಲುಪುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳು ಇಂಗ್ಲಿಷ್ ಮಾದ್ಯಮದತ್ತ ಸಾಗುತ್ತಿರುವ ಯುವ ಪೀಳಿಗೆಯಲ್ಲಿ ಕನ್ನಡದ ಬಗ್ಗೆ ಆಸಕ್ತಿ ಮೂಡಿಸಲು ಸಹಕಾರಿ ಎಂದರು.
ಕಾರ್ಯಕ್ರಮದಲ್ಲಿ ಸುಮಿತ್ರಮ್ಮ ಸಂಗಡಿಗರಿಂದ ಭಜನೆ, ಉರ್ಮಿಳಾರಾವ್ ಕವನ ವಾಚಿಸಿದರು. ಶಿಕ್ಷಕ ಮೋಹನ್, ಅಭಿಷೇಕ್ ರಾಯಣ್ಣ ರಿಂದ ಏಕಪಾತ್ರಭಿನಯ ನಡೆಯಿತು. ಶೈಲಜಾ ಸತ್ಯನಾರಾಯಣ ಕಥೆ ಹೇಳಿದರು. ಶ್ರೀನಿವಾಸ್ ಗೋಪಾಲನಾಯಕ್ ಸ್ವಾಗತಿಸಿದರು. ಶಿವಪ್ಪ ಭೈರಾಪುರ ವಂದಿಸಿದರು.