Sunday, September 8, 2024
Google search engine
Homeಅಂಕಣಗಳುಲೇಖನಗಳುಮಾನವೀಯತೆ ಕಾಣೆಯಾಗಿದೆ - ‘ಕೈಂ’ ವೈಭವೀಕರಣ ಬೇಕೆ?

ಮಾನವೀಯತೆ ಕಾಣೆಯಾಗಿದೆ – ‘ಕೈಂ’ ವೈಭವೀಕರಣ ಬೇಕೆ?

ಲೇಖನ : ಸೌಮ್ಯ ಗಿರೀಶ್

ಮಾನವೀಯತೆ ಕಾಣೆಯಾಗಿದೆ – ‘ಕೈಂ’ ವೈಭವೀಕರಣ ಬೇಕೆ?

PC : Internet

ಹಾಡಹಗಲೇ ಒಬ್ಬರನ್ನೊಬ್ಬರು ನಡು ರಸ್ತೆಯಲ್ಲಿ ಹೆತ್ತವರ ಮುಂದೆಯೇ ಕೊಚ್ಚಿ ಹಾಕುವ, ದೊಡ್ಡವರ ದ್ವೇಷಕ್ಕೆ ಏನೂ ಅರಿಯದ ಕಂದಮ್ಮಗಳನ್ನು ಬರ್ಬರವಾಗಿ ಹತ್ಯೆ ಮಾಡುವ, ಸಿಗದ ನಿಧಿಯಾಸೆಗೆ ತಾವು ಹೆತ್ತ ಕುಡಿಗಳ ಕುತ್ತಿಗೆ ಕೊಯ್ಯುವ ಹೀನಾಯ ಪರಿಸ್ಥಿತಿಗೆ ಇಂದು ಸಮಾಜ ಬಂದು ನಿಂತಿದೆ. ಇದು ಆಘಾತಕಾರಿ ಮಾತ್ರವಲ್ಲ ಕಳವಳ ಮೂಡಿಸಿ ಭೀತಿ ಹುಟ್ಟಿಸುವ ಪರಿಸ್ಥಿತಿಯಲ್ಲದೆ ಮತ್ತೇನು. ಇಂತಹ ಪರಿಸ್ಥಿತಿಯಲ್ಲಿ ಮೂಡುವ ಮೊಟ್ಟ ಮೊದಲ ಪ್ರಶ್ನೆ ಮಾನವೀಯತೆ ಎಲ್ಲಿ ಕಳೆದುಹೋಗಿದೆ?

ಮೀಸೆ ಚಿಗುರುವ ವಯಸ್ಸಿಗೆ ಪೆನ್ನು, ಪೇಪರ್ ಹಿಡಿಯುವುದನ್ನು ಬಿಟ್ಟು ಮಚ್ಚು, ಲಾಂಗು ಹಿಡಿದು ಹೀರೋಯಿಸಂ ಎಂದು ಬಿಂಬಿಸುವ ದುರಂತ ಪರಿಸ್ಥಿತಿಗೆ ಸಮಾಜ ಬಂದು ನಿಂತಿರುವುದರ ಹಿಂದೆ ನಾವು ಯುವಪೀಳಿಗೆಯನ್ನು ಎತ್ತ ಕೊಂಡೊಯ್ಯುತ್ತಿದ್ದೇವೆ ಎಂಬ ಪ್ರಶ್ನೆ ಮೂಡುತ್ತದೆ. ಮಗು ಬಿದ್ದಾಗ ನಿನ್ನ ನಡಿಗೆಯ ತಪ್ಪಿಂದ ನೀನು ಎಡವಿದೆ, ಜೋಪಾನವಾಗಿರು ಎನ್ನುವ ಬದಲು ಯಾವುದೋ ಒಂದು ವಸ್ತು ಅದಕ್ಕೆ ಕಾರಣ ಎಂದು ಬಿಂಬಿಸಿ “ಅದಕ್ಕೆ ಪೆಟ್ಟು ಕೊಡೋಣ ಬಿಡು” ಎನ್ನುವುದರಲ್ಲೇ ನಾವು ಮಕ್ಕಳ ಮನಸ್ಸಿನಲ್ಲಿ ಕ್ರೌರ್ಯದ ಮೊದಲ ಬಿತ್ತನೆ ಮಾಡುತ್ತೇವೇನೋ.

ಅಂಕಗಳ ಫ್ಯಾಕ್ಟರಿಗಳಾಗಿ ಪರಿಣಮಿಸುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಇಂದು ನೈತಿಕ ಶಿಕ್ಷಣ ಕೂಡ ಅಂಕಪಟ್ಟಿಗೆ ಸೇರಿರುವುದು ವಿಪರ್ಯಾಸ. ನೈತಿಕತೆಯ ಬೀಜ ಶಾಲೆಯಿಂದಲೇ ಬಿತ್ತನೆಯಾದರೆ ಮಾತ್ರ ಒಬ್ಬ ವ್ಯಕ್ತಿ ಸತ್ಪ್ರಜೆಯಾಗಿ ರೂಪುಗೊಳ್ಳಲು ಸಾಧ್ಯ. ಆದರೆ ಇಂದು ‘ಕ್ರೈಂ’ ಎನ್ನುವುದು ಎಷ್ಟು ವೈಭವೀಕೃತವಾಗಿದೆ ಎಂದರೆ ಅದು ಅಪರಾಧ ಎನ್ನುವುದಕ್ಕಿಂತ ‘ಹೀರೋಯಿಸಂ” ಪ್ರತಿರೂಪವಾಗಿ ಬೆಳೆದು ನಿಂತಿದೆ.
ಒಂದೆಡೆ ಚಲನಚಿತ್ರಗಳಲ್ಲಿ ಗುಂಪು, ಗುಂಪು ರೌಡಿಗಳ ಅಟ್ಟಹಾಸ, ಥಳ ಥಳಿಸುವ ಲಾಂಗು, ಮಚ್ಚುಗಳು, ದೊಡ್ಡ ದೊಡ್ಡ ಕಾರುಗಳಲ್ಲಿ ಬಂದಿಳಿಯುವ ಡಾನ್‌ಗಳು, ಕೊನೆಗೆ ಅವರನ್ನು ಮಟ್ಟ ಹಾಕುವ ನಾಯಕ ಕೂಡ ಕ್ರೌರ್ಯದ ಹಾದಿ ತುಳಿಯುತ್ತಾನೆ. ಈ ನಾಯಕನನ್ನು ಅನುಸರಿಸುವ ಲಕ್ಷಾಂತರ ಯುವಕರು ಹೆದರಿಸಿ ಬೆದರಿಸುವವನೇ ನಾಯಕ ಎಂಬ ಋಣಾತ್ಮಕ ಸಂದೇಶವನ್ನು ಮೈಗೂಡಿಸಿ ಕೊಳ್ಳುತ್ತಾ, ವೇಷ ಭೂಷಣದ ಜೊತೆಗೆ ಕ್ರೌರ್ಯವನ್ನೂ ಮೈಗೂಡಿಸಿಕೊಳ್ಳಲು ಪ್ರಾರಂಭಿಸುತ್ತಾರೆ.

ಇನ್ನು ದೃಶ್ಯ ಮಾಧ್ಯಮಗಳು ಕ್ರೈಂ ಸ್ಟೋರಿಗಳನ್ನು ದಿನವಿಡೀ ವೈಭವೀಕರಿಸುವುದು ಎಷ್ಟು ಸಮಂಜಸ ಎನ್ನುವ ಪ್ರಶ್ನೆ ಮೂಡುತ್ತದೆ. ಟಿಆರ್‌ಪಿ ಮುಖ್ಯ ಆದರೆ ಸಮಾಜದ ಕಳಕಳಿಯೂ ಅಷ್ಟೇ ಮುಖ್ಯ. ಇಂದು ಕ್ರೈಂ ಸ್ಟೋರಿಗಳು ಹತ್ತು ಜನರಲ್ಲಿ ಜಾಗೃತಿ ಮೂಡಿಸಿದರೆ ನೂರಾರು ಜನರಿಗೆ ಕ್ರೈಂ ತರಬೇತಿ ಕಾರ್ಯಕ್ರಮಗಳಾಗುತ್ತಿವೆಯೇನೋ ಎನಿಸುತ್ತದೆ. ಹೊಸ, ಹೊಸ ಐಡಿಯಾಗಳನ್ನು ಪಡೆಯುತ್ತಿದೆ ಯುವ ಜನಾಂಗ. ಮನೆಯಲ್ಲಿ ಅಪ್ಪ-ಅಮ್ಮ ಈ ಕ್ರೈಂ ಸ್ಟೋರಿ ವೀಕ್ಷಿಸುವಾಗ ಜೊತೆಯಲ್ಲಿ ಮಕ್ಕಳೂ ಇರುತ್ತಾರೆ. ಆ ರಕ್ತಪಾತಗಳು, ಕಾಮುಕರ ಅಟ್ಟಹಾಸಗಳು ಮಕ್ಕಳ ಮನಸ್ಸಿನಲ್ಲಿ ಭಯ ಮಾತ್ರವಲ್ಲ ಕೆಟ್ಟ ಕುತೂಹಲಗಳನ್ನೂ ಮೂಡಿಸುವ ಸಾಧ್ಯತೆಗಳೂ ಹೆಚ್ಚು. “ನಾನು ಏಟಿಎಂನಲ್ಲಿ ಜ್ಯೋತಿಯವರಿಗೆ ಹೊಡೆದ ದೃಶ್ಯಾವಳಿಗಳನ್ನು ದಿನವಿಡೀ ನೋಡಿ ಮಜಾ ಪಡೆಯುತ್ತಿದ್ದೆ” ಎಂಬ ಆ ಅಪರಾಧಿಯ ವಿಕೃತ ಭಾವನೆಯೇ ಇದಕ್ಕೊಂದು ಹಿಡಿದ ಕನ್ನಡಿ.

ಹೀಗಾಗಿ ಇನ್ನಾದರೂ ನೈತಿಕ ಶಿಕ್ಷಣದತ್ತ ಮತ್ತು ಉತ್ತಮ ಪ್ರಜೆಗಳನ್ನು ರೂಪಿಸುವತ್ತ ಶಾಲೆಗಳು, ಪೋಷಕರು ಗಮನ ಹರಿಸುವುದರ ಜೊತೆಗೆ ಮಾಧ್ಯಮಗಳು ಮತ್ತು ಚಲನಚಿತ್ರರಂಗವೂ ಹೆಚ್ಚು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಕ್ರೈಂ ವೈಭವೀಕರಿಸುವುದಕ್ಕಿಂತ ಅವನಿಗಾದ ಶಿಕ್ಷೆಯನ್ನು ವೈಭವೀಕರಿಸಿ, ಮುಂದೆ ಅಪರಾಧ ಮಾಡುವವರಿಗೆ ತಮಗಾಗುವ ಶಿಕ್ಷೆಯ ಭಯ ಕಾಡುವಂತಾಗಲಿ. ಅಪರಾಧಿಗಳಲ್ಲಿ ಹುಟ್ಟಸಬೇಕಾದ ಭಯ ಇಂದು ನೋಡುಗರಲ್ಲಿ ಹುಟ್ಟುತ್ತಿದೆ ಎನ್ನುವುದೇ ವಿಷಾದಕರ.

RELATED ARTICLES
- Advertisment -
Google search engine

Most Popular

Recent Comments