ತಿರುನೆಲ್ವೇಲಿ: ಅಂತರ್ಜಾತಿ ವಿವಾಹಕ್ಕೆ ಅನುಕೂಲ ಮಾಡಿಕೊಟ್ಟಿದ್ದಕ್ಕಾಗಿ ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯಲ್ಲಿರುವ ಸಿಪಿಎಂ ಕಚೇರಿಯನ್ನು ಧ್ವಂಸ ಮಾಡಿದ ಘಟನೆ ವರದಿಯಾಗಿದೆ.
ಮೇಲ್ಜಾತಿಯ ಯುವತಿ ಮತ್ತು ದಲಿತ ಯುವಕನ ವಿವಾಹಕ್ಕೆ ಸಹಾಯ ಮಾಡಿದ್ದಾರೆಂದು ಆರೋಪಿಸಿ ಈ ದಾಳಿಯನ್ನು ಯುವತಿಯ ಕುಟುಂಬದವರು ನಡೆಸಿದ್ದಾರೆ ಎಂದು ವರದಿಯಾಗಿದೆ.
ಈ ಘಟನೆಗೆ ಸಂಬಂಧಿಸಿ ಇಲ್ಲಿಯವರೆಗೆ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪಾಲಯಂಗೊಟ್ಟೈನ ಅರುಂತಥಿಯಾರ್ ಜಾತಿಗೆ ಮದನ್ ಮತ್ತು ಪೆರುಮಾಳ್ಪುರಂನ ಪಿಳ್ಳೈ ಸಮುದಾಯದ ದಾಕ್ಷಾಯಿಣಿ ಆರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಹುಡುಗಿಯ ಕುಟುಂಬವು ಅವರ ಅಂತರ್ಜಾತಿ ವಿವಾಹವನ್ನು ಒಪ್ಪದ ಕಾರಣ, ಸಿಪಿಎಂ ಮುಂದೆ ಬಂದು ಜೋಡಿ ಸಹಕಾರ ಕೋರಿತ್ತು ಎನ್ನಲಾಗಿದೆ.
ಅವರ ವಿವಾಹದ ನಂತರ, ಧಾಕ್ಷಾಯಿಣಿ ಅವರ ಕುಟುಂಬವು ಸಿಪಿಎಂ ಕಚೇರಿಗೆ ದಾಳಿ ಮಾಡಿದೆ. ಘಟನೆಯ ನಂತರ ಪೊಲೀಸರು ಕೂಡಲೇ ಪಕ್ಷದ ಕಚೇರಿ ತಲುಪಿದರು. ಧಾಕ್ಷಾಯಿಣಿ ಕುಟುಂಬವು ಕಚೇರಿಯ ಬಾಗಿಲು ಮುರಿಯುತ್ತಿರುವ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇಲ್ಲಿ ಸಹ ಆರೋಪಿಗಳು ಪೊಲೀಸರೊಂದಿಗೆ ವಾಗ್ವಾದಕ್ಕಿಳಿಯುವುದನ್ನು ಕಾಣಬಹುದು.
ತಿರುನಲ್ವೇಲಿ ಉಪ ಪೊಲೀಸ್ ಆಯುಕ್ತರು ಠಾಣೆಯಲ್ಲಿ ಬಂಧಿತ ೮ ಮಂದಿ ಆರೋಪಿಗಳ ಪ್ರಾಥಮಿಕ ವಿಚಾರಣೆ ನಡೆಸಿದ್ದಾರೆ.
ಈ ಮಧ್ಯೆ ಯುವತಿಯ ಕುಟುಂಬವು ಪೆರುಮಾಳ್ಪುರಂ ಪೊಲೀಸ್ ಠಾಣೆಗೆ ಯುವತಿ ಕಾಣೆಯಾಗಿದ್ದಾಳೆಂದು ದೂರು ನೀಡಿತ್ತು. ನವವಿವಾಹಿತರು ಸಿಪಿಎಂ ಕಚೇರಿಯಲ್ಲಿದ್ದಾರೆ ಎಂಬ ಮಾಹಿತಿ ಪಡೆದ ಯುವತಿಯ ಕುಟುಂಬವು ಪಕ್ಷದ ಕಚೇರಿಗೆ ಧಾವಿಸಿ ಹುಡುಕಾಟ ನಡೆಸಿದ್ದಾರೆ. ಇದು ಬಾಲಕಿಯ ಕುಟುಂಬದ ಸದಸ್ಯರು ಮತ್ತು ಸಿಪಿಎಂ ಪದಾಧಿಕಾರಿಗಳ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ನಂತರ ಕಚೇರಿಯ ಧ್ವಂಸಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.