ಮತ ಎಣಿಕೆಗೆ ಕ್ಷಣಗಣನೆ: ಸಹ್ಯಾದ್ರಿ ಕಾಲೇಜು ಸಜ್ಜು;  523 ಸಿಬ್ಬಂದಿ, ೧ ಸಾವಿರ ಪೊಲೀಸ್‌  ನಿಯೋಜನೆ

ಶಿವಮೊಗ್ಗ : ಲೋಕಸಭಾ ಚುನಾವಣೆಯ ಮತ ಎಣಿಕೆಗೆ ಶಿವಮೊಗ್ಗ ಸಹ್ಯಾದ್ರಿ ಕಲಾ ಕಾಲೇಜು ಸಿದ್ದವಾಗಿದೆ. ಮತ ಎಣಿಕೆಗೆ ಜಿಲ್ಲಾಡಳಿತ ಸಕಲ ರೀತಿಯ ಸಿದ್ದತೆ ನಡೆಸಿದ್ದು, ಬೆಳಗ್ಗೆ  8 ಗಂಟೆಯಿಂದಲೇ ಮತ ಎಣಿಕೆ ಕಾರ್ಯ ಶುರುವಾಗಲಿದೆ.ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಒಟ್ಟು 1752885 ಮತದಾರರಿದ್ದು, ಇದರಲ್ಲಿ ಒಟ್ಟು 1372949 ಮತ ಚಲಾವಣೆಯಾಗಿದೆ. ಮತ ಎಣಿಕೆಗೆ ಒಟ್ಟು 523 ಸಿಬ್ಬಂದಿಗಳನ್ನು ನೇಮಿಸಲಾಗಿದೆ.  

ಮತ ಎಣಿಕೆಯ ಭದ್ರತೆಗಾಗಿಯೇ ಜಿಲ್ಲಾ ಪೊಲೀಸ್‌ ಇಲಾಖೆಯು  ೧ ಸಾವಿರಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿ ನಿಯೋಜನೆ ಮಾಡಿದೆ. ಸಹ್ಯಾದ್ರಿ ಕಾಲೇಜು ಮಾರ್ಗದ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧಿಸಿದ್ದು ಮಾತ್ರವಲ್ಲದೆ, ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ  ಮತ ಎಣಿಕೆ ಆವರಣದ ಸುತ್ತಮುತ್ತ ಸೆಕ್ಷನ್ 144 ನ್ನು ಜಾರಿ ಮಾಡಲಾಗಿದೆ .ಹಾಗೆಯೇ ಸೂಕ್ಷ್ಮ ಪ್ರದೇಶಗಳ ಮೇಲೆ ಪೊಲೀಸ್‌ ಕಣ್ಗಾವಲು ಇರಿಸಲಾಗಿದೆ.

ಮತ ಎಣಿಕೆ ಬೆಳಗ್ಗೆ ೮ ಗಂಟೆಗೆ ಶುರುವಾಗಲಿದೆ., ಅದಕ್ಕೂ ಮುನ್ನವೇ ಅಂದರೆ ೭ ಗಂಟೆಗೆ ಮತ ಎಣಿಕೆಗೆ ನಿಯೋಜನೆಗೆ ಗೊಂಡ ಸಿಬ್ಬಂದಿ ಮಾತ್ರವಲ್ಲದೆ, ಅಭ್ಯರ್ಥಿಗಳು ಅಥವಾ ಚುನಾವಣಾ ಏಜೆಂಟರು ಮತ ಎಣಿಕೆ ಕೇಂದ್ರದ ಭದ್ರತಾ ಕೊಠಡಿಯ ಆವರಣಕ್ಕೆ ಆಗಮಿಸಲು ತಿಳಿಸಲಾಗಿದೆ. ಬೆಳಿಗ್ಗೆ 7 ಗಂಟೆಗೆ ಭದ್ರತಾ ಕೊಠಡಿಯ ಬಾಗಿಲನ್ನು ತೆರೆಯಲು ಕ್ರಮವಹಿಸುವ ಮಾಹಿತಿಯನ್ನು ಅಭ್ಯರ್ಥಿಗಳ ಗಮನಕ್ಕೆ ತರಲಾಗಿದೆ. ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ 14 ಮತ ಎಣಿಕೆ ಟೇಬಲ್ ಗಳು ಇರುತ್ತದೆ. ಮತ ಎಣಿಕೆ ಟೆಬಲ್ ಕೌಂಟರ್‍ಗಳಿಗೆ ಸ್ಪರ್ಧಿಸುವ ಅಭ್ಯರ್ಥಿಗಳು ಮತ್ತು ಚುನಾವಣಾ ಏಜೆಂಟರು ಹಾಗೂ ಮತ ಎಣಿಕೆ ಏಜೆಂಟರು ಪ್ರವೇಶಿಸಲು ಅವಕಾಶವಿರುತ್ತದೆ.

ಮತ ಎಣಿಕೆ ನಡೆಯುವುದು ಹೇಗೆ?
ಬೆಳಗ್ಗೆ8 ಗಂಟೆಗೆ ಅಂಚೆ ಮತಪತ್ರಗಳನ್ನು  ಚುನಾವಣಾಧಿಕಾರಿಗಳ ಮೇಜಿನಲ್ಲಿ ಆರಂಭಿಸಲಾಗುವುದು. ಅಂಚೆ ಮತಪತ್ರಗಳ ಎಣಿಕೆ ಆರಂಭವಾದ 30 ನಿಮಿಷಗಳ ನಂತರ ಕಂಟ್ರೋಲ್ ಯೂನಿಟ್ ಮೂಲಕ ಮತ ಎಣಿಕೆಯನ್ನು ಆರಂಬಿಸಲಾಗುವುದು. ಪ್ರತೀ ಮತ ಎಣಿಕೆ ಟೇಬಲ್ ಗೆ ಒಬ್ಬರು ಮೇಲ್ವಿಚಾರಕರು, ಒಬ್ಬರು ಸಹಾಯಕರು ಮತ್ತು ಒಬ್ಬರು ಮೈಕ್ರೋ ಅಬ್ಸರ್ವರ್ ಗಳನ್ನು ನೇಮಕಗೊಳಿಸಿ ತರಬೇತಿ ನೀಡಲಾಗಿದೆ. ಇ.ವಿ.ಎಂ ಮತ ಎಣಿಕೆಗಳು ಪೂರ್ಣಗೊಂಡ ನಂತರ ಪ್ರತೀ ವಿಧಾನಸಭಾ ಕ್ಷೇತ್ರದಿಂದ ಐದು ವಿವಿಪ್ಯಾಟ್‍ಗಳ ಎಣಿಕೆಯನ್ನು ಒಂದಾದ ಮೇಲೆ ಒಂದರಂತೆ ಎಣಿಕೆ ಕಾರ್ಯ ಮಾಡಲಾಗುತ್ತದೆ. ವಿಧಾನಸಭಾ ಕ್ಷೇತ್ರವಾರು 18ರಿಂದ21 ಸುತ್ತಿನ ಎಣಿಕೆ ನಡೆಯಲಿದ್ದು ಪ್ರತಿಯೊಂದು ಸುತ್ತಿನ ಫಲಿತಾಂಶವನ್ನು ಚುನಾವಣಾ ವೀಕ್ಷಕರ ಸಹಿ ಹಾಕಿದ ನಂತರ ಮಾಧ್ಯಮ ಹಾಗೂ ಮೈಕ್ ಮೂಲಕ ತಿಳಿಸಲಾಗುತ್ತದೆ.