ಆಯನೂರು ಮಂಜುನಾಥ್‌ಗೆ ವಿವಿಧ ಪದವೀಧರ ಒಕ್ಕೂಟಗಳ ಬೆಂಬಲ

ಶಿವಮೊಗ್ಗ : ನೈರುತ್ಯ ಪದವೀಧರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಆಯನೂರು ಮಂಜುನಾಥ್‌ಗೆ ಗ್ರಾಮೀಣ ಪದವೀಧರರ ಒಕ್ಕೂಟ, ಹಿರಿಯ ಪದವೀಧರರ ವೇದಿಕೆ, ಸಹ್ಯಾದ್ರಿ ನಿರುದ್ಯೋಗಿ ಪದವೀಧರರ ಒಕ್ಕೂಟಗಳು ಬೆಂಬಲ ವ್ಯಕ್ತಪಡಿಸಿವೆ.
ಹೋರಾಟದ ತಳಹದಿಯ ಮೇಲೆ ರಾಜಕೀಯ ಜೀವನಕ್ಕೆ ಪ್ರವೇಶಿಸಿರುವ ಆಯನೂರು ಮಂಜುನಾಥ್, ತಮ್ಮ ಜೀವನದುದ್ದಕ್ಕೂ ನಿರುದ್ಯೋಗಿ ಪದವೀ ಧರರ ಸರ್ಕಾರಿ ನೌಕರರ, ಕಾರ್ಮಿಕ ವರ್ಗದ ಪರವಾಗಿ ನಿರಂತರವಾಗಿ ಹೋರಾಟವನ್ನು ನಡೆಸುತ್ತಾ ಬಂದಿದ್ದಾರೆ. ಇಂತವರು ಪರಿಷತ್‌ನ್ನು ಪ್ರವೇಶಿಸು ವುದರಿಂದ ಈ ವರ್ಗದ ಜನರ ಧ್ವನಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಒಕ್ಕೂಟ ಅಭಿಪ್ರಾಯ ಪಟ್ಟಿದೆ.
ಈಗಾಗಲೇ ಲೋಕಸಭೆ, ರಾಜ್ಯಸಭೆ, ವಿಧಾನಸಭೆ ಯನ್ನು ಪ್ರವೇಶಿಸಿ ಮೂರೂ ಸದನಗಳಲ್ಲಿ ರಾಜ್ಯದ, ರಾಷ್ಟ್ರದ ಹಾಗೂ ಶ್ರಮಿಕ ವರ್ಗದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ಮೂಲಕ ಈ ಸದನಗಳ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಆಯನೂರು ಮಂಜುನಾಥ್ ಪರಿಷತ್‌ನಲ್ಲಿ ನಿರುದ್ಯೋಗಿ ಪದವೀಧರರ ಸರ್ಕಾರಿ ನೌಕರರ, ಅತಿಥಿ ಉಪನ್ಯಾಸಕರ ಮತ್ತು ಹೊಸ ಪಿಂಚಣಿ ಯೋಜನೆಗೆ ಒಳಪಡುವ ಸರ್ಕಾರಿ ನೌಕರರ ಸಮಸ್ಯೆಗಳ ಬಗ್ಗೆ ಪರಿಷತ್ತಿನಲ್ಲಿ ಧ್ವನಿ ಎತ್ತುವ ಮೂಲಕ ಸರ್ಕಾರದ ಗಮನವನ್ನು ಸೆಳೆದು ಈ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸುತ್ತಾರೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಪದವೀಧರರ ಒಕ್ಕೂಟ ಈ ಬಾರಿ ಆಯ ನೂರು ಮಂಜುನಾಥ್‌ರನ್ನು ಅತ್ಯಮತ ಅಧಿಕ ಮತಗಳಿಂದ ಆಯ್ಕೆ ಮಾಡುವ ಮೂಲಕ ವಿಧಾನಪರಿಷತ್‌ಗೆ ಕಳುಹಿಸಿಕೊಡಲು ನಿಶ್ಚಯಿಸಿದೆ.
ಒಕ್ಕೂಟದ ಪದಾಧಿಕಾರಿಗಳಾದ ಜಗದೀಶ್, ಸುನೀಲ್, ಮಲ್ಲಿಕಾರ್ಜುನ್, ತೀರ್ಥೇಶ್ ಇನ್ನು ಹಲವರು ಆಯನೂರು ಮಂಜುನಾಥ್ ಬಗ್ಗೆ ಉತ್ತಮ ಅಭಿಪ್ರಾ ಯವನ್ನು ವ್ಯಕ್ತಪಡಿಸಿದ್ದು, ಗ್ರಾಮೀಣ ನಿರುದ್ಯೋಗ ಯುವಕರ ಸಮಸ್ಯೆಯ ಬಗ್ಗೆ ಹಿಂದಿನ ಬಿಜೆಪಿ ಸರ್ಕಾರ ಹಲವಾರು ಕಾರ್ಯಕ್ರಮ ಗಳನ್ನು ಹಮ್ಮಿಕೊಂಡಿತ್ತು. ಅದೇ ಪಕ್ಷದ ಪ್ರತಿನಿಧಿಯಾಗಿರುವ ಮತ್ತು ಹೋರಾಟದ ಕಿಚ್ಚನ್ನು ಮೈಗೂಡಿಸಿಕೊಂಡಿರುವ ಆಯನೂರುಮಂಜುನಾಥ್ ನಮ್ಮ ಪ್ರತಿನಿಧಿಯಾಗುವುದು ಅತ್ಯಂತ ಸೂಕ್ತ ಎಂಬ ಅಭಿಪ್ರಾಯವನ್ನು ಇವರುಗಳು ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಬಿಜೆಪಿ ಅಭ್ಯರ್ಥಿಯಾಗಿರುವ ಆಯನೂರು ಮಂಜುನಾಥ್‌ರವರು ಮತ್ತು ಅವರ ಪಕ್ಷದ ಕಾರ್ಯಕರ್ತರು ಪದವೀಧರರನ್ನು ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದ ಪದವೀಧರರನ್ನು ಮುಖತಃ ಭೇಟಿ ಮಾಡಿ ಮತ ನೀಡಿ ಎಂದು ಕೋರಿದ್ದಾರೆ. ಅಲ್ಲದೆ, ನಮ್ಮ ಸಮಸ್ಯೆಗಳನ್ನೂ ಕೂಡಾ ಆಲಿಸಿದ್ದಾರೆ. ಇದು ನಮಗೆ ಅತ್ಯಂತ ಸಂತೋಷವನ್ನುಂಟು ಮಾಡಿದೆ. ನಮ್ಮ ಕ್ಷೇತ್ರದ ಪ್ರತಿನಿಧಿಯಾಗಲು ಇಚ್ಚಿಸಿದವರು ನಮ್ಮನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಕೇಳಿರುವುದು ನಮಗೆ ಆನಂದ ಉಂಟು ಮಾಡಿದ್ದು, ಆಯನೂರುರವರು ಈ ಬಾರಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುವುದರಲ್ಲಿ ಸಂದೇಹವಿಲ್ಲ. ಆದ್ದರಿಂದ ಅವರನ್ನು ಬೆಂಬಲಿಸಿ ಎಂದು ಒಕ್ಕೂಟದ ಪ್ರಮುಖರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.