ತೆರವು

ಮನುಷ್ಯನಿಂದ ತಾಸುಗಟ್ಟಲೆ ಹಿಡಿಯುವ ಕೆಲಸವನ್ನು ಯಂತ್ರ ಒಂದು ಕ್ಷಣದಲ್ಲಿ ಸಾಧಿಸಿಕೊಳ್ಳುತ್ತಿತ್ತು. ನಿಂತವರು ಆ ಯಂತ್ರದಕಾಯಶಕ್ತಿಯನ್ನು ಬೆರಗಿ ನಿಂದ ನೋಡುತ್ತಿದ್ದಂತೆ ನೆಲದ ಮೇಲಿನ ಪದಾರ್ಥಗಳನ್ನು ಯಾವುದೇ ಮುಲಾಜಿ ಲ್ಲದೆ ಕಸ ಮಾಡಿತು. ಎಷ್ಟೋ ವರ್ಷಗಳಿಂದ ಈ ಫುಟ್‌ಪಾತ್ ಮೇಲೆ ಜನೋ ಪಯೋಗಿ ಸರಕುಗಳನ್ನಿಟ್ಟುಕೊಂಡು ವ್ಯಾಪಾರ ಮಾಡಿ, ಹೊಟ್ಟೆ ತುಂಬಿಸಿಕೊಳ್ಳುತ್ತಿ ದ್ದವರಿಗೆ ಇದೊಂದು ಆಘಾತವಾಗಿತ್ತು. ಜನದಟ್ಟಣೆಯ ನಡುವೆ ಸಂಚರಿಸು ವವರೂ ಒಂದು ಕ್ಷಣ ನಿಂತು ಕಣ್ಸೆಳೆದ ವಸ್ತುಗಳ ಬಗ್ಗೆ ಕುತೂಹಲಕ್ಕಾದರೂ ಬೆಲೆ ಕೇಳುತ್ತಿದ್ದರು. ಹಣ್ಣು, ಹೂವು, ಚಪ್ಪಲಿ, ಬಟ್ಟೆ, ಗೃಹೋಪಯೋಗಿ ಸಾಮಾನು, ಸರಂಜಾಮುಗಳು ಗುಡ್ಡೆಯಲ್ಲಿ ಬಿದ್ದು ಖರ್ಚಾಗುತ್ತಿದ್ದವು.
ನಗರದ ಮುಖ್ಯ ರಸ್ತೆಯ ಬದಿಗಳಲ್ಲಿ ತೆರೆದ ಈ ಸಣ್ಣ -ಪುಟ್ಟ ಅಂಗಡಿಗಳು ಇಕ್ಕಟ್ಟಿನಲ್ಲೇ ಒಟ್ಟೊಟ್ಟಿಗಿದ್ದವು. ನಡೆದಾಡುವ ಜನರಿಗೆ ಈ ಮುಕ್ತ ಮಾರುಕಟ್ಟೆಯಂ ತಹ ಫುಟ್‌ಪಾತ್ ವ್ಯಾಪಾರ ಚೌಕಾಸಿಯೊಂದಿಗೆ ಜಗ್ಗಾಟ ನಡೆಸಿ ಮುಗಿಯು ತ್ತಿತ್ತು. ಇದನ್ನೇ ಮೂಲವಾಗಿಸಿಕೊಂಡು ಒಂದಷ್ಟು ಕುಟುಂಬಗಳು ತಮ್ಮ ಪಾಲಿನ ದುಡಿಮೆ ಗಳಿಸುತ್ತಿದ್ದದ್ದೂ ಇಲ್ಲೇ. ಗುರುತಿರದವರನ್ನು ವ್ಯಾಪಾರದ ದೃಷ್ಟಿಯಿಂದ ಕರೆದು ಮಾತಾಡಿಸಿ, ವಸ್ತುಗಳನ್ನು ತೋರಿಸುತ್ತಾ ವ್ಯಾಪಾರ ಕುದುರಿಸುವ ಅಪ್ಪಟ ಮಾರಾಟಗಾರರು ಮಾತನ್ನೂ ತಮ್ಮ ಬಂಡವಾಳವಾಗಿ ದುಡಿಸಿಕೊಳ್ಳುತ್ತಿದ್ದರು. ಈ ಫುಟ್‌ಪಾತ್‌ಗಳ ಮೇಲೆ ಜನರ ಸಂಚಾರ ಚುರುಕುಗೊಳ್ಳುತ್ತಿದ್ದಂತೆ ವ್ಯಾಪಾ ರವೂ ಒಮ್ಮೆಲೇ ಕಳೆಗಟ್ಟುತ್ತಿತ್ತು. ಪಕ್ಕದ ಬಸ್‌ಸ್ಟ್ಯಾಂಡ್, ಎದುರಿನ ಮಾರುಕಟ್ಟೆ ಎಲ್ಲವೂ ವ್ಯವಹಾರಕ್ಕೆ ಪೂರಕವಾಗಿತ್ತು. ಬಂದವರೆಲ್ಲರೂ ಈ ರಸ್ತೆಗೆ ಬಾರದೇ ಹೋಗುತ್ತಿರಲಿಲ್ಲ. ಅಗತ್ಯ ವಸ್ತುಗಳೆಲ್ಲವೂ ರಸ್ತೆಯ ಬದಿಯಲ್ಲಿ ವಿಶಿಷ್ಟ ರೀತಿಯಲ್ಲಿ ಜೋಡಿಸಲ್ಪಟ್ಟಿದ್ದರಿಂದ ಎಲ್ಲರನ್ನೂ ಕೈ ಬೀಸಿ ಕರೆಯುತ್ತಿದ್ದವು. ಬಹುತೇಕ ಮಧ್ಯಮ ವರ್ಗದ ಜನರು ಇಲ್ಲಿ ಹೆಚ್ಚಾಗಿ ವಸ್ತುಗಳನ್ನು ಖರೀದಿ ಮಾಡುತ್ತಿದ್ದರು. ಸೂರ್ಯ ಮುಳುಗಿದರೂ ಅಲ್ಲಿನ ವಿದ್ಯುತ್ ಬೆಳಕು ಇನ್ನೊಂದು ಹೊಸ ಪ್ರಪಂಚ ವನ್ನೇ ಸೃಷ್ಟಿಸಿದಂತೆ ಅಲಂಕಾರ ಗೊಂಡು, ಕೊಳ್ಳುವವರನ್ನು ಬೆರಗುಗೊಳಿಸುತ್ತಿ ದ್ದವು. ಇನ್ನು ಮಕ್ಕಳ ಆಟಿಕೆ, ಕಾಲು ಚೀಲ, ಇತರೆ ಸಣ್ಣ-ಪುಟ್ಟ ವಸ್ತುಗಳನ್ನು ಕೈಯಲ್ಲಿ ಹಿಡಿದು ವಿವಿಧ ರೀತಿಗಳಲ್ಲಿ ಅವುಗಳನ್ನು ತಿರುಗಿಸಿ, ಕುಣಿಸುತ್ತಾ ವ್ಯವಹಾರ ನಡೆಸುತ್ತಿದ್ದರು. ಭಾಷೆ, ಜನಾಂಗ, ರಾಜ್ಯ , ಗಡಿ, ದೇಶಗಳೆಲ್ಲಾ ಒಂದೆಡೆ ಮಿಳಿತವಾದಂತೆ ವ್ಯಾಪಾರವೇ ಒಂದು ಧರ್ಮವಾಗಿತ್ತು.
ರಸ್ತೆ ಬದಿ ವ್ಯಾಪಾರ ಮಾಡುತ್ತಿದ್ದವರಲ್ಲಿ ೭೦ ವರ್ಷದ ಕಲೀಂ ಕೂಡ ತನ್ನ ದೊಂದು ಪುಟ್ಟ ಸೆಕೆಂಡ್‌ಹ್ಯಾಂಡ್ ಪುಸ್ತಕದ ಅಂಗಡಿ ತೆರೆದಿದ್ದ ಅದೊಂದು ಸಂಪೂರ್ಣ ತೆರೆದಮಳಿಗೆ, ಜಗತ್ತಿನ ಮುಖ್ಯ ಲೇಖಕರ ಪುಸ್ತಕಗಳೆಲ್ಲವೂ ಅಲ್ಲಿ ಸಾಲಾಗಿ ಕುಳಿತು, ಅದರ ಮುಂದೆ ಹಾದು ಹೋಗುವವರನ್ನು ಕೊಳ್ಳು ತ್ತಾರೇನೋ ಎನ್ನುವಂತೆ ನೋಡುತ್ತಿದ್ದವು. ಆತ ಹೊಸ ಪುಸ್ತಕಗಳನ್ನು ಮಾರುವುದಲ್ಲದೆ ಹಳೆಯ ಪುಸ್ತಕಗಳನ್ನೂ ಕೊಳ್ಳುತ್ತಿದ್ದುದರಿಂದತಮ್ಮ ವಿದ್ಯಾಭ್ಯಾಸ ಮುಗಿಸಿದ ಮಂದಿ ತಮ್ಮ ಪಾಲಿನ ಪುಸ್ತಕದ ಹೊರೆ ಇಳಿಸಿಕೊಳ್ಳಲು ಇವನಲ್ಲಿಗೆ ಧಾವಿಸುತ್ತಿದ್ದರು. ಕಾಲದಿಂದಲೂ ಕಲೀಂ ಪುಸ್ತಕ ವ್ಯಾಪಾರವನ್ನೇ ತನ್ನ ಕಸುಬು ಮಾಡಿಕೊಂಡವನು. ಅದರಲ್ಲಿ ಸಾಕಷ್ಟು ನುರಿತಿದ್ದವನು. ಪುಸ್ತಕ ಮಾರಲು ಬಂದವರನ್ನು ಕಂಡು ತನ್ನ ವ್ಯಾಪಾರೀ ದೃಷ್ಟಿಯಿಂದ ನಾಜೂಕಾಗಿ ಮಾತನಾಡಿ, ಅದಕ್ಕೆ ಬೆಲೆ ನಿಗದಿಪಡಿಸುತ್ತಿದ್ದ, ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್ , ಇನ್ನೂ ಹೆಚ್ಚೆಂದರೆ ಕೆಲ ಮೆಡಿಕಲ್ ಅಧ್ಯಯನದ ಪುಸ್ತಕಗಳು ಕೊಳ್ಳು-ಮಾರು ಪ್ರಕ್ರಿಯೆಯಲ್ಲಿರುತ್ತಿದ್ದವು. ಉಳಿದಂತೆ ಬೇರೆ ರೀತಿಯ ಸಾಹಿತ್ಯ, ತರ್ಕ, ಸಮಾಜಶಾಸ್ತ್ರ, ತತ್ವಶಾಸ್ತ್ರ, ಇತಿಹಾಸ ಸಂಬಂದಿ ಇತರೆ ಎಲ್ಲಾ ರೀತಿಯ ಇಂಗ್ಲಿಷ್ ಪುಸ್ತಕಗಳು ಒಂದೇ ಸೂರಿನಲ್ಲಿದ್ದವು. ವ್ಯಾಪಾರ ಅಂಥಾ ಲಾಭದಾಯಕವಲ್ಲದೆ ಹೋದರೂ ನಷ್ಟ ಎನ್ನುವುದು ಇರಲಿಲ್ಲ.
ಕಲೀಂಗೆ ಪುಸ್ತಕಗಳ ಮೇಲೆ ಅಪಾರ ಪ್ರೀತಿ ಮತ್ತು ವಿಶ್ವಾಸ. ಮೊದಲಿಗೆ ಹೊಟ್ಟೆ ಪಾಡಿಗೆ ಆರಂಭಿಸಿದ ವೃತ್ತಿಯನ್ನು ವರ್ಷಗಳು ಉರುಳಿದಂತೆ ಇವುಗಳನ್ನು ಹೊಸ ಸೃಷ್ಟಿಯೊಂದರ ಹಾದಿ ಅಥವಾ ಬುನಾದಿಯೆಂದು ನಂಬಿದ್ದ. ಯುವಕರು ಓದಬೇಕಾದ ಪುಸ್ತಕಗಳನ್ನು ತಾನೇ ಆರಿಸಿ ಮೇಲಿಡುತ್ತಿದ್ದ. ಅವರ ಗಮನ ಇತ್ತ ಇರದೆ ಹೋದಾಗ ಅವರನ್ನು ತಾನೇ ಕರೆದು ಮಾತಾಡಿಸಿ, ಆ ಪುಸ್ತಕವನ್ನು ಅವರ ಕೈಗಿಟ್ಟು ಅದರ ಬಗ್ಗೆ ಅವರಿಗೆ ಅರಿವು ಮೂಡಿಸಲು ಚಿಕ್ಕ ಭಾಷಣ ಮಾಡುತ್ತಿದ. ಬಹುಶಃ ಇವನೊಬ್ಬನೇ ಇರಬೇಕು. ಒಂದು ಪುಸ್ತಕದ ಓದಿನಿಂದ ಆಗಬಹು ದಾದ ಪ್ರಯೋಜನಗಳ ಪಟ್ಟಿ ಮಾಡಿ ನೀಡುತ್ತಿದ್ದವನು. ಇವರ ವರ್ತನೆಯೇ ಕೆಲವರಿಗೆ ಸಂಶಯಾಸ್ಪಾದವಾಗಿ, ಇವನೊಬ್ಬ ಹುಚ್ಚನಿರಬೇಕೆಂಬ ಅನುಮಾನ ಮೂಡಿಸುತ್ತಿತ್ತು. ಇವನ ಈ ವರ್ತನೆಗೆ ಕೆಲ ಹುಡುಗರು ರಸ್ತೆಯಲ್ಲಿ ಇವನ ಹಾಜರಿ ಕಂಡು ಹಾದಿ ಬದಲಿಸಿಕೊಂಡು ಹೋಗುತ್ತಿದ್ದರು. ಮತ್ತು ಕೆಲವರು ಇವನ ಕೈಗೆ ಸಿಕ್ಕಿ, ತಲೆ ತಿನ್ನಿಸಿಕೊಳ್ಳುತ್ತ, ಇತರರಿಗೆ ಮನರಂಜನೆ ನೀಡುತ್ತಿದ್ದರು. ಆದರೆ, ಕಲೀಂಗೆ ಇದ್ಯಾವುದೂ ಲೆಕ್ಕಕ್ಕಿರಲಿಲ್ಲ. ಅವನ ಅಂತಿಮ ಗುರಿ ಎಂದರೆ, ಒಳ್ಳೆಯ ಪುಸ್ತಕಗಳನ್ನು ಯುವ ಜನತೆಗೆ ತಲುಪಿಸಿ, ಪ್ರeವಂತರನ್ನಾಗಿಸಿ, ಹೊಸ ಕನಸುಗಳನ್ನು ಕಾಣಿಸುವುದು. ಆದರೆ ಇದು ಸಾಕಾರ ಕಂಡಿದ್ದು ಮಾತ್ರ ಕಡಿಮೆಯೇ. ವಯಸ್ಸಾಗುತ್ತಲೇ ಅವನೊಳಗೆ ಜಾಗೃತವಾದ ಶಿಕ್ಷಣದಿಂದಲೇ ಆ ಪುಸ್ತಕಗಳನ್ನು ತಾನೇ ಓದುತ್ತ ಅವುಗಳ ರಚನೆಗೆ ಬೆರಗಾಗುತ್ತಾ, ಬರೆದವನ ಮನಸ್ಥಿತಿ ಮತ್ತು ದೇಶ, ಕಾಲಗಳ ಬಗ್ಗೆ ಚಿಂತಿಸುತ್ತಿದ್ದ, ಮನೆ, ಸಂಸಾರವೆಂದರೆ ಈಗ ಅವನ ಪಾಲಿಗೆ ಈ ಪುಸ್ತಕದ ವ್ಯಾಪಾರವಷ್ಟೇ. ಸಂಗ್ರಹ ಯೋಗ್ಯ ಬೆಲೆ ಬಾಳುವ ಪುಸ್ತಕಗಳೆಲ್ಲವೂ ಅವನ ಖಜಾನೆಯೊಳಗೆ ಧೂಳಿಡಿಯುತ್ತಿದ್ದವು. ಮಾಸಿದ ಬಟ್ಟೆ, ಕಿತ್ತೊಲೆಸಿದ ಚಪ್ಪಲಿಯೊಂದಿಗೆ ಫುಟ್‌ಪಾತ್ ಮೇಲೆ ಪುಸ್ತಕಗಳ ಮಾರಲು ಓಡಾಡುತ್ತಿದ್ದ. ಎಲ್ಲಾ ಹಳೇ ಪುಸ್ತಕಗಳು ಅರ್ಧ ಬೆಲೆ . ಓದುಗ ತುಸು ಪ್ರೀತಿ ತೋರಿದರೆ ಇನ್ನೂ ರಿಯಾಯಿತಿಗೆ ಮಾರುತ್ತಿದ್ದ. ಆದರೆ , ಇದು ಅಕ್ಕ ಪಕ್ಕದ ಬೇರೆ ವ್ಯಾಪಾರಿಗಳಿಗೆ ತೀರ ಸಂಕಟ ತಂದೊಡ್ಡಿದರೂ ಕಲೀಂ ವಿರುದ್ಧ ಏನೂ ಮಾಡುವಂತಿರಲಿಲ್ಲ.
ಈ ಫುಟ್‌ಪಾತ್‌ಜನನಿಬಿಡ ಪ್ರದೇಶ, ವಾಹನಗಳು ರಸ್ತೆಯಲ್ಲಿ ಬಿಡುವಿರದಂತೆ ಚಲಿಸುತ್ತಿದ್ದರೆ ಇತ್ತ ರಸ್ತೆ ಬದಿಗಳಲ್ಲೂ ಅಷ್ಟೇ ಜನ. ಒಳ ಹೊಕ್ಕವರು ಹೊರ ಬರುವುದರೊಳಗೆಯಾವುದಾದರೊಂದು ವಸ್ತು ಕೈಯಲ್ಲಿ ಹಿಡಿದು ಬರುತ್ತಿದ್ದರು. ಕಲೀಂನ ಪುಸ್ತಕದ ವ್ಯಾಪಾರಕ್ಕೆ ಗಿರಾಕಿಗಳು ಕಡಿಮೆಯಾದರೂ ಇವನು ಮಾತ್ರ ಕಸುಬು ನಿಲ್ಲಿಸದೆ ಹುಂಬನಂತೆ ಯುವಕರನ್ನು ಪುಸ್ತಕಗಳತ್ತ ಸೆಳೆಯುತ್ತಲೇ ಇದ್ದ . ಪುಸ್ತಕಗಳು ಮಾಡ ಬಹುದಾದ ಬಹು ದೊಡ್ಡ ಕ್ರಿಯೆ ಯೊಂದನ್ನು ಏಕೋ ಎಲ್ಲಾ ಮರೆತ ವರಂತೆ ಕಾಣುತ್ತಿದ್ದರು. ಇತ್ತ ಇವನ ಆರೋಗ್ಯವೂ ಅಷ್ಟಕ್ಕಷ್ಟೇ ಎನ್ನುವ ಸ್ಥಿತಿಗೆ ಬಂದರೂ ಕೆಲ ಹೊತ್ತಿನ ಕೊರತೆಗಳ ಹೊರತು ಅವನ ಉತ್ಸಾಹ ನಂದಲೇ ಯಿಲ್ಲ. ಪುಸ್ತಕ ಗಳೇ ನೀಡಿದ ಧಾರಾಳ eನದೊಂದಿಗೆ ತನ್ನ ವಿವೇಕ ಬಳಸಿ ಸರ್ಕಾರಕ್ಕೆ ಸಾರ್ವಜನಿಕರ ಕುಂದು ಕೊರತೆಗಳ ಬಗ್ಗೆ ಪತ್ರಗಳನ್ನು ಬರೆಯುತ್ತಿದ್ದ. ಅದು ಅನಾಮಿಕನ ಹೆಸರಿನಲ್ಲಿ, ಇವನ ಈ ಪತ್ರದ ದೆಸೆಯಿಂದಲೇ ಈ ಪುಟ್ ಪಾತ ಮೇಲೆ ಸ್ವಲ್ಪ ಸ್ವಚ್ಛತೆ ಕಾಣುವಂತಾಗಿದ್ದು, ದಿನನಿತ್ಯ ಇಲ್ಲಿ ಕಸ ಗುಡಿಸಲು ಶುರು ಮಾಡಿದ್ದು, ಅಂತಹ ಸುದೀರ್ಘ ಪತ್ರಗಳ ಸಲುವಾಗಿಯೇ ಶೌಚಾ ಲಯವೊಂದು ಬಹಳ ಬಳಲಿಕೆಯಿಂದ ಸ್ಥಾಪನೆಗೊಂಡು, ಬಹುದೊಡ್ಡ ವ್ಯಸನ ವಾದ ಜನರ ಖಾಲಿ ಜಾಗದಲ್ಲಿನ ಮೂತ್ರ ವಿಸರ್ಜನೆಯನ್ನು ನಿಲ್ಲಿಸಿತ್ತು. ಹೀಗೇ ಕಲೀಂ ತನಗೆ ಅನಿಸಿದ್ದಕ್ಕೆಲ್ಲಾ ಆಡಳಿತದ ತಲೆ ಏರುತ್ತಿದ್ದ. ಅವು ಮೊಂಡು ಮಾಡಿದಷ್ಟು ಇವನ ಹಠ ಮುಂದುವರಿ ಸುತ್ತಿದ್ದ ಅ ಅನಾಮಿಕ ಕಾಗದದ ರೂವಾರಿ ಇವನೆಂದು ತಿಳಿದಾಗ ಕೆಲ ಅಧಿಕಾರಿಗಳು ಇವನನ್ನು ತರಾಟೆಗೆ ತೆಗೆದು ಕೊಳ್ಳುತ್ತಿದ್ದರು. ಆದರೆ ಇವನ ವಾದಗಳನ್ನು ಕೇಳಿದ್ದೇ ತೆಪ್ಪಗಾಗಿ ದ್ದರು. ಕೆಲವೊಮ್ಮೆ ಇವನನ್ನು ಆ ಫುಟ್‌ಪಾತ್‌ನಿಂದಲೇ ಖಾಲಿ ಮಾಡಿಸುವ ಪ್ರಯತ್ನನಡೆಸಿದರಾದರೂ ಅಲ್ಲಿ ಗೆದ್ದಿದ್ದು ಇವನ ಅಹಿಂಸಾತ್ಮಕ ಪ್ರತಿಭಟನೆಯೇ.
ಬಹುವಾಗಿ ಬೆಳೆದ ಫುಟ್‌ಪಾತ್ ವ್ಯಾಪಾರ ಪಾಲಿಕೆಗೆ ಸಣ್ಣ ವರಮಾನದ ಮೂಲವಾಗಿತ್ತು. ವಾಹನಗಳ ದಟ್ಟಣೆ ಹೆಚ್ಚಿದಂತೆ ಪಾಲಿಕೆಯ ಮೇಲೆ ಒತ್ತಡ ಆರಂಭವಾಗಿತ್ತು. ‘ರಸ್ತೆಗಳ ಅಗಲೀಕರಣಕ್ಕೆ ಫುಟ್‌ಪಾತ್ ವ್ಯಾಪಾರಿಗಳ ತೆರವು’ ಇದು ಇಬ್ಬರ ಪಾಲಿಗೂ ತುಂಬಾ ಹಳೆಯ ವಿಷಯವಾಗಿದ್ದರಿಂದ ಒಗ್ಗಟ್ಟಿನಲ್ಲಿ ಮುಷ್ಕರಕ್ಕಿಳದಂತೆ, ಆಡಳಿತ ವರ್ಗ ಇವರ ಬೇಡಿಕೆಗಳನ್ನು ಪೂರೈಸಲಾಗದೆ ಬದಲಿ ಕ್ರಮ ಅನುಸರಿಸಿಯೋ, ಕೆಲ ಬದಲಾವಣೆಗಳನ್ನು ಮಾಡಿಯೋ ಸುಮ್ಮ ನಾಗುತ್ತಿತ್ತು. ಕಲೀಂ ಇಂಥಾ ಸಮಯದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿದ್ದ. ಆದರೆ, ಪಾಲಿಕೆ ಮತ್ತು ಇವರ ನಡುವಿನ ತಿಕ್ಕಾಟ ಮಾತ್ರ ನಿಂತಿರಲಿಲ್ಲ. ಎಲ್ಲಾ ಸಣ್ಣ -ಪುಟ್ಟ ಬಂಡವಾಳಗಾರರು ಬಹು ದೊಡ್ಡ ಬಂಡವಾಳಿಗರ ಜೊತೆ ಸೆಣ ಸಾಟ ನಡೆಸುವಂತೆ ಪಾಲಿಕೆಗೆ ಇವರ ಒತ್ತಡವೂ ಬಿದ್ದಿತ್ತು. ಇದನ್ನು ಸೂಕ್ಷ್ಮ ವಾಗಿಯೇ ಗಮನಿಸಿದ್ದ ಕಲೀಂ ವ್ಯವಸ್ಥೆಯ ಈ ಮತಿಹೀನತೆಗೆ ಬೇಸರಿಸುತ್ತಿದ್ದ.
ಆದರೆ, ಬೇರೆ ದಾರಿಯಿರಲಿಲ್ಲ. ಫುಟ್‌ಪಾತ್ ತೆರವು ಪಾಲಿಕೆಗೆ ಆನಿವಾರ್ಯ ವಾಯಿತು. ಯಾವುದೇ ಮುನ್ಸೂಚನೆಗಳನ್ನು ಕೊಡದೆ ಒಮ್ಮೆಲೆ ಬೆಳ್ಳಂಬೆಳಿಗ್ಗೆ ಪೊಲೀಸ್ ಪಡೆಯೊಂದಿಗೆ ಕಾರ್ಯಾಚರಣೆಗೆ ಶುರು ಮಾಡಿತ್ತು. ಯಾರು ಎಷ್ಟೇ ವಿರೋಧಿಸಿದರೂ ಅದಕ್ಕೆ ಬೆಲೆಯಿರಲಿಲ್ಲ. ಧರಣಿ, ಪ್ರತಿಭಟನೆ ಮಾಡಿದರೂ ತಮಗಾದ ಸ್ಥಿತಿಗೆ, ಕಣ್ಣೀರಿನೊಂದಿಗೆ ಬೀದಿ ಪಾಲಾದ ತಮ್ಮ ಬದುಕಿಗೆ, ವ್ಯಾಪಾರಕ್ಕೆ ಬಾಯಿ ಬಡಿದರು. ಆದರೆ, ಯಂತ್ರಗಳಿಗೆ ಹೃದಯ ವೆಂಬು ದಾದರೂ ಎಲ್ಲಿ…? ಅವು ತಮ್ಮ ಪಾಡಿಗೆ ಇನ್ನೊಬ್ಬರ ಕೈ ಆಳಿನಂತೆ ದುಡಿ ಯುತ್ತಿ ದ್ದೆವು. ಒಟ್ಟಾರೆ, ಸರಿ-ಸುಮಾರು ವ್ಯಾಪಾರಸ್ಥರು ತಮ್ಮ ಮುಂದಿನ ದಾರಿಗಳ ಬಗ್ಗೆ ತಲೆ ಮೇಲೆ ಕೈ ಹೊತ್ತವರೇ, ತಮ್ಮನ್ನು ಈ ರೀತಿ ತುಳಿದ ವ್ಯವಸ್ಥೆಗೆ ಹಿಡಿ ಶಾಪವಿಕ್ಕುತ್ತಾ, ಕುಂತಲ್ಲೇ ಕುಂತರೂ ಪೊಲೀಸರು ಅವರ ಎಲ್ಲಾ ಕ್ರಿಯೆಗಳನ್ನು ತಮ್ಮ ಅಧಿಕಾರದಿಂದ ಮೆಟ್ಟುತ್ತಲೇ ವ್ಯಾಪಾರಿಗಳ ಪೆಟ್ಟಿಗೆ ಸೇರಿದಂತೆಇತರೆ ವಸ್ತುಗಳಿಂದ ತುಂಬಿದ್ದ ಫುಟ್‌ಪಾತ್ ಕ್ಷಣ, ಕ್ಷಣಕ್ಕೂ ಖಾಲಿಯಾಗುತ್ತಾ ಬಂದಿತ್ತು. ಅದರಲ್ಲಿ ಕಲೀಂನ ಜಾಗವೂ ತೆರವಿಗೆ ಒಳಗಾಗಿತ್ತು. ಅವನು ಅಂದು ಬೆಳಿಗ್ಗೆ ತಂದ ಪುಸ್ತಕಗಳನ್ನು ಹಾಗೆಯೇ ಕೈಯಲ್ಲಿ ಹಿಡಿದವನೆ, ತಾನು ಜೋಡಿಸಲು ಉಪಯೋಗಿಸುತ್ತಿದ್ದ ಮೆಟ್ಟಿಲುಗಳು ಧ್ವಂಸಗೊಂಡ ಪರಿಣಾಮ ಅವನಿಗೆ ಬೇರೆ ಮಾರ್ಗ ಕಾಣಲಿಲ್ಲ.
ಈ ಆತಂಕಕಾರಿ ಬೆಳವಣಿಗೆಯಿಂದ ರಸ್ತೆ ಬದಿ ವ್ಯಾಪಾರಿಗಳಿಗೆ ತಮ್ಮ ಅಸಹಾ ಯಕತೆಯ ಹೊರತು ಬೇರೆಯಿರಲಿಲ್ಲ. ಬಹಳ ದಿನಗಳಿಂದ ನಡೆದಿದ್ದ ಮುಸುಕಿನ ಗುದ್ದಾಟದಲ್ಲಿ ಕೊನೆಗೆ ವ್ಯವಸ್ಥೆ ತನ್ನ ಪಾಲಿನ ವಿಜಯ ಪತಾಕೆಯನ್ನು ಹಾರಿಸಿತ್ತು. ಅವಕಾಶವೇ ಇರದಂತೆ ನಡೆಸಿದ ದಾಳಿಯಿಂದ ಅಲ್ಲಿನವರು ಮತ್ತೊಂದೆಡೆ ಸ್ಥಳ ಹುಡುಕುತ್ತ ನಡೆದರು. ಇನ್ನಿಲ್ಲಿ ಈ ಹಿಂದೆ ಸದಾ ಜನಜಂಗುಳಿಯಿಂದ ತುಂಬಿ ರುತ್ತಿದ್ದ ಈ ರಸ್ತೆಯನ್ನು ಕಂಡವರಿಗೆ ಈಗ ಅಕ್ಷರಶಃ ಶೂನ್ಯವೇ ತುಂಬಿಕೊಂಡಿತ್ತು.
ಕಲೀಂ ಇವನ್ನೆಲ್ಲಾ ನೋಡುತ್ತಲೇ ಸಹಿಸಿಕೊಂಡಿದ್ದ, ತನ್ನ ಹಳೇ ಸೈಕಲ್ ಮೇಲೆ ತಂದ ಪುಸ್ತಕಗಳ ರಾಶಿಯನ್ನು ಅಲ್ಲೇ ಕೆಳಿಗಿಳಿಸಿದ್ದೆ. ಕೆಲ ಕ್ರಾಂತಿಕಾರಿ ಪುಸ್ತಕಗಳನ್ನು ಕೈಯಲ್ಲಿ ಹಿಡಿದು ಮಾರತೊಡಗಿದ. ಕೆಲವರಿಗೆ ಇದು ವಿಲಕ್ಷಣವಾಗಿ ಕಂಡರೆ ಇನ್ನೂ ಕೆಲವರಿಗೆ ಬದುಕಿನ ಆತ್ಮವಿಶ್ವಾಸದ ಪ್ರತೀಕದಂತೆ ಕಾಣುತ್ತಲೇ ಕಲೀಂ ತಲೆಯ ಮೇಲೆ ಹಳೇ ಟೋಪಿಯೊಂದನ್ನು ಹಾಕಿಕೊಂಡು ‘ಜನರಿಗೆ ಬೇಕಾದ್ದನ್ನು ಜನರಿಂದ ಬೇರೆ ಮಾಡೋದು ಆಡಳಿತ ಅಲ್ಲಾ….’ ಎಂದು ಆ ಅಧಿಕಾರಿಗಳ ಮುಂದೆ ಕೂಗಲು ಅವರ ಕಿವಿಗಳು ಕಿವುಡಾಗಿದ್ದವು. ಕೈಯಲ್ಲಿ ಹಿಡಿದಿದ್ದ ಗಾಂಧಿ, ಮಾರ್ಕ್ಸ್, ಚೆಗ್ವಾರ, ಲೆನಿನ, ಟಾಲ್‌ಸ್ಟಾಯ್, ಮಾವೋ, ಲೋಹಿಯಾರ ಪುಸ್ತಕಗಳನ್ನು ತೋರಿಸುತ್ತಾ ಆ ಗುಂಪಿನಲ್ಲಿ ನಿಂತ ಕೆಲ ಯುವಕರಿಗೆ ‘ಯೂ ಮಸ್ಟ್ ರೀಡ್… ಯೂ ಮಸ್ಟ್ ರೀಡ್… ಎಂದು ಜೋರಾಗೇ ಕಿರುಚುತ್ತಿದ್ದ. ಕಲೀಂ ಪ್ರತಿ ರೋಧವು ಹೀಗೆ ಬಯಲಲ್ಲಿ ಧ್ವನಿಯಾಗಿದ್ದು ಕಂಡ ಎಲ್ಲರಿಗೂ ಅವನ ವರ್ತನೆಯೇ ವಿಚಿತ್ರವಾಗಿ ತೋರುತ್ತಿತ್ತು.