ಚನ್ನಗಿರಿ ಠಾಣೆಯಲ್ಲಿ ಲಾಕಾಪ್ ಡೆತ್ ಆರೋಪ: ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ : 11 ಪೊಲೀಸರಿಗೆ ಗಾಯ


ದಾವಣಗೆರೆ : ಮಟ್ಕಾ ಆಡಿಸಿದ ಆರೋಪದಡಿ  ಪೊಲೀಸ್‌ ವಿಚಾರಣೆಗೆ ಕರೆ ತಂದಿದ್ದ  ವ್ಯಕ್ತಿಯೊಬ್ಬರು ಠಾಣೆಯಲ್ಲಿ ಮೃತಪಟ್ಟಿದ್ದು, ಅದು  ಲಾಕಪ್ ಡೆತ್ ಎನ್ನುವ  ಆರೋಪದಡಿ ಮೃತನ ಸಂಬಂಧಿಕರು ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದ ಹಿನ್ನೆಲೆಯಲ್ಲಿ 11 ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿರುವ ಘಟನೆ ಜಿಲ್ಲೆಯ  ಚನ್ನಗಿರಿ ಪಟ್ಟಣದಲ್ಲಿ  ನಡೆದಿದೆ.ಅಷ್ಟು ಮಾತ್ರವಲ್ಲದೆ, ತಡರಾತ್ರಿ ಉದ್ರಿಕ್ತ ಗುಂಪು ಪೊಲೀಸ್‌  ಜೀಪ್ ಹಾನಿಗೊಳಿಸಿದ್ದು, ಈ ಗುಂಪು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಸ್ಥಳದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಮೊಕ್ಕಾಂ ಹೂಡಿದ್ದು, ಸದ್ಯಕ್ಕೆ ಪರಿಸ್ಥಿತಿ ಶಾಂತವಾಗಿದೆ. ಆದರೂ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಇಡೀ ಪಟ್ಟಣ ಘಟನೆಯಿಂದ ಆತಂಕಕ್ಕೆ ಸಿಲುಕಿದೆ.

ಚನ್ನಗಿರಿಯ ಟಿಪ್ಪು ನಗರದ ವಾಸಿ ಆದಿಲ್(30) ರನ್ನು ಮಟ್ಕಾ ಆಡಿಸುತ್ತಿದ್ದ ಆರೋಪದಡಿ ಪೊಲೀಸರು ವಶಕ್ಕೆ ಪಡೆದಿದ್ದರು. ಸಂಜೆ ಠಾಣೆಗೆ ಕರೆದುಕೊಂಡು ಬಂದಾಗ ಕಡಿಮೆರಕ್ತದೊತ್ತಡ ಆಗಿ ಆದಿಲ್ ಕುಸಿದು ಬಿದ್ದದ್ದ ಕೂಡಲೇ ಆಸ್ಪತ್ರೆಗೆ ಸಾಗಿಸಲು ಮುಂದಾದೆವು. ಅಷ್ಟರಲ್ಲೇ ಆತ ಸಾವನ್ನಪಿದ್ದಾನೆ ಎಂದು ಪೊಲೀಸರು ಹೇಳುತ್ತಿದ್ದಾರೆ.
ಆದರೆ, ಆದಿಲ್ ನ ಕುಟುಂಬದವರು, ಸಂಬಂಧಿಕರು ಪೊಲೀಸರ ವಾದವನ್ನು ಒಪ್ಪುತ್ತಿಲ್ಲ. ಆದಿಲ್ ಆರೋಗ್ಯವಾಗಿದ್ದ ಅವನು ಸಾವನ್ನಪ್ಪಲು ಪೊಲೀಸರೇ ಕಾರಣ. ಹಾಗಾಗಿ ಪೊಲೀಸರ ಮೇಲೆ ಲಾಕಪ್‌ ಡೆತ್‌ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.
 
ಈ ವಿಷಯವಾಗಿ ಆದಿಲ್‌ ಸಂಬಂಧಿಕರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ಪೊಲೀಸರು ಸುಳ್ಳು ಹೇಳುತ್ತಿದ್ದಾರೆ ಎಂದು ವಾಗ್ವಾದಗಳು ನಡೆದು  ಪೊಲೀಸರಿಗೂ ಮತ್ತು ಸಂಬಂಧಿಕರಿಗೂ ಘರ್ಷಣೆ ಆಗಿದೆ. ಒಂದು ಹಂತದಲ್ಲಿ ಚನ್ನಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆದಿದೆ, ಆಕ್ರೋಶಗೊಂಡ ಗುಂಪು ಪೊಲೀಸ್ ಜೀಪ್ನ ಗಾಜು ಪುಡಿ ಪುಡಿ ಮಾಡಿದೆ. ಪೊಲೀಸರು ಗುಂಪು ಚದುರಿಸಲು ಲಾಠಿ ಚಾರ್ಜ್ ಮಾಡಿದ್ದಾರೆ. ಉದ್ರಿಕ್ತಗೊಂಡ ಜನರು ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸಪಡುವಂತಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿರುವ ವಿಚಾರ ಗೊತ್ತಾಗುತ್ತಿದ್ದಂತೆ ಎಸ್ಪಿ ಉಮಾ ಪ್ರಶಾಂತ್ ಅವರು ಚನ್ನಗಿರಿ ಪೊಲೀಸ್ ಠಾಣೆಗೆ ಆಗಮಿಸಿದರು. ಪರಿಸ್ಥಿತಿ ನಿಯಂತ್ರಿಸುವಲ್ಲಿ ಸಫಲರಾದರು. ಘಟನೆ ಹಿನ್ನೆಲೆಯಲ್ಲಿ ಹತ್ತಕ್ಕೂ ಹೆಚ್ಚು ಕೆಎಸ್ ಆರ್ ಪಿ ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುನ್ನಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.