ಶಿವಮೊಗ್ಗ: ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ಶಿವಮೊಗ್ಗದ ಅಧಿಕಾರಿ ಚಂದ್ರಶೇಖರ್ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಅತ್ಯಂತ ಖಂಡನೀಯ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಆಕ್ರೋಶ ವ್ಯಕ್ತಪಡಿಸಿದ್ದು,ಹಗರಣದ ಪ್ರಮುಖ ರೂವಾರಿ ಆಗಿರುವ ಸಚಿವ ಬಿ ನಾಗೇಂದ್ರ ಅವರು ನೈತಿಕ ಹೊಣೆ ಹೊತ್ತು ಕೂಡಲೇ ರಾಜೀನಾಮೆ ನೀಡಬೇಕು ಹಾಗೂ ಸಿದ್ದರಾಮಯ್ಯ ಅವರು ತಮ್ಮ ಆಪ್ತರೆಂದು ರಕ್ಷಣೆ ಮಾಡುವ ಬದಲು ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಕರಣದ ಕುರಿತಂತೆ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಂದ್ರಶೇಖರ್ ಅವರ ಆತ್ಮಹತ್ಯೆ ಕೊಲೆಗಡುಕ ಸರ್ಕಾರ ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರಿಗಳು ಕೆಲಸ ಮಾಡುವುದೇ ಕಷ್ಟವಾಗಿದೆ. ಹೀಗೆ ಮುಂದುವರೆದರೆ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಕಾಲ ದೂರವಿಲ್ಲ. ಇದು ಸಾವಿನ ಸರ್ಕಾರ ಎಂದು ದೂರಿದರು.
ಗ್ಯಾರೆಂಟಿ ಎಂಬ ನಾಟಕದೊಂದಿಗೆ ಕಳೆದ ಒಂದು ವರ್ಷದಿಂದ ಕರ್ನಾಟಕವನ್ನು ಲೂಟಿ ಮಾಡಿಕೊಂಡು ಬಂದಿರುವ ಎಟಿಎಂ ಕಾಂಗ್ರೆಸ್ ಸರ್ಕಾರ, ಲೂಟಿಯ ಜೊತೆಗೆ ಅಧಿಕಾರಿಗಳ ಜೀವವನ್ನು ಬಲಿ ಪಡೆಯಲು ಆರಂಭಿಸಿರುವುದು ಕಾಂಗ್ರೆಸ್ ಸರ್ಕಾರದ ಆಡಳಿತದ ಅಸಲಿ ಸಾಧನೆಯಾಗಿದೆ ಎಂದು ಕಿಡಿಕಾರಿದರು..
ಈಗಾಗಲೇ ಕರ್ನಾಟಕದ ಆರ್ಥಿಕತೆಯನ್ನು ದಿವಾಳಿಯನ್ನಾಗಿಸಿ ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಿರುವ ಕಾಂಗ್ರೆಸ್, ಹಗರಣಗಳನ್ನೇ ತಮ್ಮ ಹೊಸ ಗ್ಯಾರಂಟಿ ಎಂದು ಸಾರಿ ಸಾರಿ ಹೇಳಲು ಪ್ರಾರಂಭಿಸಿದೆ. ಇದಕ್ಕೆ ಹೊಸ ಉದಾಹರಣೆ ಎಂಬಂತೆ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದ ಸುಮಾರು 80-85 ಕೋಟಿ ರೂ. ಹಣವನ್ನು ಕಾನೂನು ಬಾಹಿರವಾಗಿ ವರ್ಗಾವಣೆ ಮಾಡಿರುವುದರ ಜೊತೆಗೆ ಈ ಹಗರಣದಲ್ಲಿ ಪರಿಶಿಷ್ಟ ಕಲ್ಯಾಣ ಇಲಾಖೆಯ ಸಚಿವರಾದ ಬಿ ನಾಗೇಂದ್ರ ಸೇರಿದಂತೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಿರಿಯ ಅಧಿಕಾರಿಗಳ ಹೆಸರು ಬರೆದಿಟ್ಟು ಅಕೌಂಟೆಂಟ್ ಸೂಪರಿಡೆಂಟ್ ಚಂದ್ರಶೇಖರ್ ನೇಣಿಗೆ ಶರಣಾಗಿದ್ದಾರೆಂದು ದೂರಿದರು.
ನಿಗಮದಲ್ಲಿದ್ದ ಸುಮಾರು ೧೮೭.೩೩ ಕೋಟಿ ರೂ.ಗಳನ್ನು ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಲು ಹಿರಿಯ ಅಧಿಕಾರಿಗಳಿಂದ ಆದೇಶ ಬಂದಿತ್ತು. ಈ ಹಿನ್ನಲೆಯಲ್ಲಿ ಅವರು ಬೇರೆ ಬೇರೆ ದಿನಾಂಕಗಳಲ್ಲಿ ಬೇರೆ ಬೇರೆ ಇಲಾಖೆಗಳಿಗೆ ಸುಮಾರು ೧೭೭.೩೫ ಕೋಟಿ ರೂ. ವರ್ಗಾವಣೆ ಮಾಡಬೇಕಾಯಿತು. ಈ ವರ್ಗಾವಣೆ ಮಾಡಲು ಸಚಿವರೊಬ್ಬರಿಂದ ಮೌಖಿಕ ಆದೇಶ ಬಂದಿತ್ತು ಎಂದು ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರ್ ತಮ್ಮ ಡೆತ್ ನೋಟ್ ನಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದರು.
ಎಂಡಿ ಜೆ.ಜೆ. ಪದ್ಮನಾಭ್ ಮತ್ತು ಸಂಗಡಿಗರು, ಲೆಕ್ಕಾಧಿಕಾರಿ ಪರಶುರಾಮ್, ಬ್ಯಾಂಕ್ ನ ಅಧಿಕಾರಿ ಸುಚಿತ್ ಸ್ಮಿತಾ ಮುಂತಾದವರ ಹೆಸರನ್ನು ಡೆತ್ ನೋಟ್ ನಲ್ಲಿ ದಾಖಲಿಸಲಾಗಿದೆ. ಆದ್ದರಿಂದ ಮೃತರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಉನ್ನತಮಟ್ಟದ ತನಿಖೆಯಾಗಬೇಕು. ಸಚಿವ ನಾಗೇಂದ್ರ ಅವರನ್ನು ವಜಾ ಮಾಡಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದ ಅವರು, ಈ ಬಗ್ಗೆ ರಾಜ್ಯಪಾಲರಿಗೂ ಪತ್ರ ಬರೆಯುತ್ತೇವೆ. ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳದಿದ್ದರೆ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಪ್ರಮುಖರಾದ ಶಿವರಾಜ್, ಎನ್.ಜೆ. ರಾಜಶೇಖರ್, ಚಂದ್ರಶೇಖರ್, ಕೆ.ವಿ. ಅಣ್ಣಪ್ಪ, ಜಗದೀಶ್, ಶ್ರೀನಾಗ್ ಇದ್ದರು.
……………………………
ಸಚಿವರು ಎಂದರೆ ನಾಗೇಂದ್ರ ಅವರೇ ಎನ್ನುವುದು ಸ್ಪಷ್ಟವಾಗುತ್ತದೆ. ಅವರ ಹೆಸರನ್ನು ನೇರವಾಗಿ ಬರೆಯದಿದ್ದರೂ ಇಲಾಖೆಗೆ ಸಂಬಂಧಪಟ್ಟ ಸಚಿವರು ಅವರೇ ಆಗಿರುವುದರಿಂದ ರಾಜ್ಯ ಸರ್ಕಾರ ಅವರನ್ನು ತಕ್ಷಣವೇ ಸಂಪುಟದಿಂದ ವಜಾ ಮಾಡಬೇಕು. ಚಂದ್ರಶೇಖರ್ ಅವರು ತಮ್ಮ ಡೆತ್ ನೋಟ್ ನಲ್ಲಿ ಎಲ್ಲಾ ವಿವರಗಳನ್ನು ಬರೆದಿಟ್ಟಿದ್ದಾರೆ. ಸುಮಾರು ೮೭ ಕೋಟಿ ಅವ್ಯವಹಾರ ಆಗಿದೆ ಎಂದು ಅವರೇ ಹೇಳಿದ್ದಾರೆ. ಆದರೆ ಇಡೀ ಘಟನೆಯನ್ನು ಮತ್ತು ಹಣದ ವರ್ಗಾವಣೆಗಳನ್ನು ನೋಡಿದರೆ ೧೮೭ ಕೋಟಿಯೂ ಅವ್ಯವಹಾರವಾಗಿದೆ ಎಂಬ ಸಂಶಯ ಉಂಟಾಗುತ್ತದೆ. ಆದ್ದರಿಂದ ಈ ಘಟನೆಯನ್ನು ಉನ್ನತ ತನಿಖೆಗೆ ಒಳಪಡಿಸಬೇಕು.
– ಎಸ್. ಎನ್. ಚನ್ನಬಸಪ್ಪ, ಶಾಸಕ