ಸೊರಬ: ಶಿಕ್ಷಣದಿಂದ ಸಮಾಜದಲ್ಲಿ ಬದಲಾವಣೆ ಮತ್ತು ಹಿಂದುಳಿದ ಸಮುದಾಯಗಳ ಅಭಿವೃದ್ಧಿ ಸಾಧ್ಯ ಎಂದು ಮನಗಂಡು ಬ್ರಹ್ಮಶ್ರೀ ನಾರಾಯಣಗುರುಗಳು ಶಿಕ್ಷಣಕ್ಕೆ ಆದ್ಯತೆ ನೀಡಿದ್ದರು. ಈ ನಿಟ್ಟಿನಲ್ಲಿ ಹಿಂದುಳಿದ ಪ್ರದೇಶಗಳಲ್ಲಿ ಶಿಕ್ಷಣ ಸಂಸ್ಥೆಗಳು ಉದಯಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ನಿಟ್ಟೂರು ನಾರಾಯಣಗುರು ಮಠದ ಶ್ರೀ ರೇಣುಕಾನಂದ ಸ್ವಾಮೀಜಿ ಹೇಳಿದರು.
ತಾಲೂಕಿನ ಗುಂಡಶೆಟ್ಟಿಕೊಪ್ಪ ಗ್ರಾಮದಲ್ಲಿ ಜ್ಞಾನ ಸಹ್ಯಾದ್ರಿ ಇಂಟರ್‍ನ್ಯಾಷನಲ್ ಶಾಲೆಯ ಪ್ರಾರಂಭೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿದ ಅವರು, ಆಧುನಿಕ ಶಿಕ್ಷಣ ಪದ್ಧತಿಯಂತೆ ಹೆಚ್ಚಿನ ಜ್ಞಾನಾರ್ಜನೆ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಮಕ್ಕಳು ಬೆಳೆಯಲಿ ಎನ್ನುವ ಉದ್ದೇಶದಿಂದ ಶತಮಾನದ ಹಿಂದೆಯೇ ಇಂಗ್ಲೀಷ್ ಕಲಿಕೆಗೆ ಮಹತ್ವ ನೀಡಿದ್ದರು. ಹಿಂದುಳಿದ ತಾಲೂಕಿನಲ್ಲಿ ಉತ್ತಮ ಶಿಕ್ಷಣ ದೊರೆಯಬೇಕು, ಮಕ್ಕಳು ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಸ್ಪರ್ಧೆ ನೀಡುವಂತಾಗಲಿ ಎನ್ನುವ ಉದ್ದೇಶದಿಂದ ಶಿಕ್ಷಣ ಸಂಸ್ಥೆ ಪ್ರಾರಂಭವಾಗಿರುವುದು ಸ್ವಾಗತಾರ್ಹ ವಿಷಯವಾಗಿದೆ. ಸಂಸ್ಥೆಯಲ್ಲಿ ಶಿಕ್ಷಣ ಪಡೆದ ಮಕ್ಕಳು ಭವಿಷ್ಯದಲ್ಲಿ ಉನ್ನತ ಸ್ಥಾನಕ್ಕೇರುವ ಜೊತೆಗೆ ಸಂಸ್ಥೆಯು ಸಹ ರಾಷ್ಟ್ರ ಮಟ್ಟದಲ್ಲಿ ಖ್ಯಾತಿಗಳಿಸಲಿ ಎಂದು ಆಶಿಸಿದರು.
ಹಿಂದುಳಿದ ಸಮುದಾಯಗಳಿಗೆ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಮತ್ತು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಗಟ್ಟಿ ಧ್ವನಿಯಾಗುವ ಮೂಲಕ ಭೂರಹಿತರಿಗೆ ಉಳುವ ಭೂಮಿ ಕೊಡಿಸಿ ಸ್ವಾವಲಂಬಿಗಳನ್ನಾಗಿಸಿದರು. ಮಾತ್ರವಲ್ಲದೇ ಸುಮಾರು ನಾಲ್ಕು ದಶಕಗಳ ಹಿಂದೆಯೇ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆದು ವಿದ್ಯಾದಾನ ಮಾಡಿದರು. ಅಂತಹ ಸಂಸ್ಥೆಗಳಲ್ಲಿ ಕಲಿತ ಅನೇಕರು ಉನ್ನತ ಪದವಿ ಅಲಂಕರಿಸಿದ್ದು, ಇದೀಗ ಸಮಾಜದ ಋಣ ತೀರಿಸಲು ಮುಂದಾಗಿದ್ದಾರೆ ಎಂದು ಶ್ಲಾಘಿಸಿದರು.
ರಾಜ್ಯ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಜಿ.ಜಗದೀಶ್ ಪ್ರಾಸ್ತಾವಿಕ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿನ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಾಲ್ಯದಿಂದಲೇ ಗಮನಿಸಿದ್ದೇನೆ. ಅಂದಿನ ಅನೇಕ ತೊಡಕುಗಳ ನಡುವೆಯೂ ಸಾಧನೆ ಮಾಡಬೇಕು ಎನ್ನುವ ಹಂಬಲದಿಂದ ಉನ್ನತ ಹುದ್ದೆಯನ್ನು ಅಲಂಕರಿಸುವಂತಾಯಿತು. ಗ್ರಾಮೀಣ ಭಾಗದಲ್ಲಿ ಅನೇಕ ವಿದ್ಯಾರ್ಥಿಗಳಲ್ಲಿ ಕೌಶಲ್ಯಗಳಿದ್ದರೂ ಸಹ ಅವಕಾಶ ವಂಚಿತರಾಗಲಿದ್ದಾರೆ ಎಂಬುದನ್ನು ಗಮನಿಸಿ, ಸಮಾನ ಮನಸ್ಕರರು ಒಗ್ಗೂಡಿ ಸಂಸ್ಥೆಯನ್ನು ಆರಂಭಿಸಿದ್ದಾರೆ ಎಂದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಸಹ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸ್ಪರ್ಧೆ ನೀಡಬೇಕು ಎನ್ನುವ ಉದ್ದೇಶದಿಂದ ಅತ್ಯಾಧುನಿಕ ರೀತಿಯಲ್ಲಿ ಶಿಕ್ಷಣ ನೀಡುವ ಗುರಿ ಹೊಂದಲಾಗಿದೆ. ಸಂಸ್ಥೆಯ ಆರಂಭದಿಂದಲೇ ಪೋಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಂಸ್ಥೆಯ ಬೆಳವಣಿಗೆ ಮತ್ತು ವಿದ್ಯಾರ್ಥಿಗಳಿಗೆ ಸದಾ ಬೆಂಬಲ ನೀಡುವುದಾಗಿ ತಿಳಿಸಿದರು.
ಸೋಲುರು ಆರ್ಯ ಈಡಿಗ ಮಹಾಸಂಸ್ಥಾನದ ಶ್ರೀ ವಿಖ್ಯಾತನಂದ ಸ್ವಾಮೀಜಿ, ಶ್ರೀ ಕ್ಷೇತ್ರ ಸಿಗಂದೂರಿನ ಧರ್ಮದರ್ಶಿ ಶ್ರೀ ಡಾ. ರಾಮಪ್ಪ, ಸಾರಗನ ಜೇಡ್ಡು ಶ್ರೀ ಕ್ಷೇತ್ರ ಕಾರ್ತಿಕೇಯ ಶ್ರೀ ಯೋಗೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಎಂ.ಬಿ.ಶಂಕರ್, ಉಪಾಧ್ಯಕ್ಷ ಎಂ.ಪಿ.ಹರಿಚರಣ್, ಕಾರ್ಯದರ್ಶಿ ಆರ್.ಲಿಖಿತ್ ಪ್ರಕಾಶ್, ಪ್ರಾಂಶುಪಾಲ ನಿವೃತ್ತ ಮೇಜರ್ ರಾಜೇಶ್ ರಂಜಿತ್, ಶಾಸಕ ಬೇಳೂರು ಗೋಪಾಲ ಕೃಷ್ಣ, ಮಾಜಿ ಸಚಿವ ಹರತಾಳು ಹಾಲಪ್ಪ, ರಾಜ್ಯ ಗೃಹ ಸಚಿವರ ಆಪ್ತ ಕಾರ್ಯದರ್ಶಿ ಡಾ. ಚನ್ನಬಸಪ್ಪ, ಈಡಿಗ ಸಮಾಜದ ರಾಜ್ಯಾಧ್ಯಕ್ಷ ಡಾ. ಎಂ.ತಿಮ್ಮೇಗೌಡ, ದೇವರಾಜ ಅರಸು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಧ್ಯಕ್ಷ ಜಿ.ಹೆಚ್.ನಾಗರಾಜ್, ರಾಜು ಮಳಲಗದ್ದೆ, ತಬಲಿ ಬಂಗಾರಪ್ಪ, ಹೆಚ್.ಗಣಪತಿ, ಶ್ರೀಧರ್ ಹುಲ್ತಿಕೊಪ್ಪ, ಕೆ.ಮಂಜುನಾಥ್, ನಾಗರಾಜಗೌಡ ಚಿಕ್ಕಾವಲಿ, ನಾಗರಾಜ ಚಿಕ್ಕಸವಿ, ನಾಗರಾಜ ಗುತ್ತಿ ಸೇರಿದಂತೆ ಇತರರಿದ್ದರು.