ಶಿವಮೊಗ್ಗ : ಅಧಿಕಾರಿಗಳು ಸಭೆಯಲ್ಲಿ ನೀಡುವ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇಲ್ಲಿ ನೀಡುವ ಸೂಚನೆಯನ್ನು ಕೆಳ ಹಂತದ ಅಧಿಕಾರಿಗಳಿಗೆ ರವಾನೆ ಮಾಡುವ ಕೆಲಸ ಆಗಬಾರದು ಎಂದು ಜಿ.ಪಂ. ಸಿಇಓ ರಾಕೇಶ್‌ಕುಮಾರ್ ತಾಕೀತು ಮಾಡಿದರು.
ಇಂದು ಜಿ.ಪಂ. ಸಭಾಂಗಣದಲ್ಲಿ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಸಭೆಯಲ್ಲಿ ನೀಡುವ ಸೂಚನೆಯನ್ನು ಕೆಳಹಂತದ ಅಧಿಕಾರಿಗಳಿಗೆ ರವಾನೆ ಮಾಡುವಂತಹ ಕೆಲಸವಾಗುತ್ತಿದೆ. ಇದಕ್ಕೆ ನೀವುಗಳು ಬೇಕಾಗಿಲ್ಲ. ಕಂಪ್ಯೂಟರ್ ಸಾಕಾಗುತ್ತದೆ. ಇಲ್ಲಿ ನೀಡುವ ಸೂಚನೆಯನ್ನು ಸಂಪೂರ್ಣ ಅನುಷ್ಠಾನಗೊಳಿಸಬೇಕೆಂದು ಹೇಳಿದರು.
ಸ್ವಚ್ಛ ಭಾರತ್ ಅಭಿಯಾನ ಯೋಜನೆ ಯಡಿಯಲ್ಲಿ ಜಿಲ್ಲೆ ಬಯಲು ಬಹಿರ್ದೆಸೆ ಮುಕ್ತ ಗೊಂಡಿದೆ. ಈಗಾಗಲೇ ಎಲ್ಲಾ ಮನೆಗಳಲ್ಲಿ ಶೌಚಾಲಯ ನಿರ್ಮಾಣ ಕಾರ್ಯ ಪೂರ್ಣ ಗೊಂಡಿದ್ದು, ಶಿಥಿಲಗೊಂಡಿರುವ ಶೌಚಾಲಯ ಗಳನ್ನೂ ಕೂಡಾ ದುರಸ್ತಿಗೊಳಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗಿದೆ ಎಂದು ಸಿಇಓ ರಾಕೇಶ್ ಕುಮಾರ್ ಅಧ್ಯಕ್ಷರಿಗೆ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ೨೧೧೮ ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆ, ಈ ಬಾರಿ ೧೬೩೮ ಮಿ.ಮೀ. ಮಳೆಯಾಗಿದೆ. ಇದರಿಂದಾಗಿ ಶೇ. ೩೫ರಷ್ಟು ಮಳೆ ಕೊರತೆಯಾಗಿದೆ. ಕಳೆದ ಬಾರಿ ೧೩೭೭ ಮಿ.ಮೀ. ಮಳೆಯಾಗಿತ್ತು. ಶೇ. ೩೫ ರಷ್ಟು ಮಳೆ ಕೊರತೆಯಾಗಿತ್ತು ಎಂದು ಜಂಟಿ ಕೃಷಿ ನಿರ್ದೇಶಕ ಮಧುಸೂದನ್ ಸಭೆಗೆ ಮಾಹಿತಿ ನೀಡಿದರು.
ಈ ಬಾರಿ ಜಿಲ್ಲೆಯಲ್ಲಿ ಸೊರಬ ತಾಲೂಕಿನಲ್ಲಿ ಶೇ.೪೧ ರಷ್ಟು ಮಳೆಯ ಕೊರತೆ ಉಂಟಾಗಿದೆ ಎಂದ ಅವರು, ಪ್ರಸ್ತುತ ವರ್ಷದ ಹಂಗಾಮಿನಲ್ಲಿ ೭೭೧೭೫ ಹೆಕ್ಟೇರ್ ಪ್ರದೇಶದಲ್ಲಿ ಭತ್ತ, ೭೧೮೨೭ ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳವನ್ನು ಬೆಳೆಯಲಾಗಿದೆ. ೬೦೦೦ ಕ್ಕೂ ಹೆಚ್ಚು ಹೆಕ್ಟೇರ್ ಏಕದಳ, ದ್ವಿದಳ ಧಾನ್ಯ ಸೇರಿದಂತೆ ಎಣ್ಣೆ ಕಾಳು ಬೀಜಗಳನ್ನು ಬಿತ್ತನೆ ಮಾಡಲಾಗಿದ್ದು, ಒಟ್ಟು ೧,೫೪,೮೪೬ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಮಾಡಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿ.ಪಂ. ಉಪಾಧ್ಯಕ್ಷೆ ವೇದಾ ವಿಜಯ್‌ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ರೇಖಾ ಮೊದಲಾದವರು ಉಪಸ್ಥಿತರಿದ್ದರು.