ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸುಗಮವಾಗಿ ನಡೆಸಲು ಸರ್ವ ಸಿದ್ಧತೆ: ಸಿಇಓ

ಶಿವಮೊಗ್ಗ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಕೇಶ್ ಕುಮಾರ್ ಅವರು ತಿಳಿಸಿದರು.
ಅವರು ಶುಕ್ರವಾರ ಸರ್ಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ನಡೆಸಿದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಮುಖ್ಯ ಅಧೀಕ್ಷಕರ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ೪೪ಸರ್ಕಾರಿ, ೩೦ ಅನುದಾನಿತ ಮತ್ತು ೮ ಅನುದಾನ ರಹಿತ ಒಟ್ಟು ೮೨ ಪರೀಕ್ಷಾ ಕೇಂದ್ರಗಳಿದ್ದು, ಇದರಲ್ಲಿ ಎರಡು ಕೇಂದ್ರಗಳು ಖಾಸಗಿ ಅಭ್ಯರ್ಥಿಗಳ ಕೇಂದ್ರವಾಗಿದೆ. ಈ ವರ್ಷ ಒಟ್ಟು ೨೫೯೩೪ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇವರಲ್ಲಿ ೧೧೧೫೪ ಹುಡುಗರು, ೧೧೫೭೮ ಹುಡುಗಿಯರು ಇದ್ದು, ೧೮೦೭ ಹುಡುಗರು ಮತ್ತು ೮೮೩ ಹುಡುಗಿಯರು ಪುನರಾವರ್ತಿತ ಅಭ್ಯರ್ಥಿಗಳಾಗಿದ್ದಾರೆ ಎಂದು ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಮಚಾದೋ ಅವರು ಮಾಹಿತಿ ನೀಡಿದರು.
ಪರೀಕ್ಷೆಯನ್ನು ಪಾರದರ್ಶಕವಾಗಿ, ಎಲ್ಲಾ ಪೂರ್ವ ಸಿದ್ಧತೆ ಹಾಗೂ ಪರೀಕ್ಷಾ ಕೇಂದ್ರಗಳಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಮಾಡಬೇಕು. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಈಗಾಗಲೇ ಎಲ್ಲರಿಗೂ ಸುತ್ತೋಲೆ ಹೊರಡಿಸಲಾಗಿದೆ. ಭದ್ರಾವತಿ ಮತ್ತು ಸೊರಬ ತಾಲೂಕು ಹೊರತುಪಡಿಸಿದರೆ ಬಹುತೇಕ ತಾಲೂಕುಗಳಲ್ಲಿ ಇನ್ನೂ ಸಿಸಿಟಿವಿ ಅಳವಡಿಸಿಲ್ಲ. ಆದಷ್ಟು ಬೇಗನೇ ಅಳವಡಿಸಲು ಕ್ರಮ ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.