ಕೋರ್ಸ್ ಆರಿಸುವ ಮುನ್ನ

ಲೇಖನ : ಸೌಮ್ಯ ಗಿರೀಶ್

ಕೋರ್ಸ್ ಆರಿಸುವ ಮುನ್ನ

ವೃತ್ತಿ ಎಂದರೆ ಡಾಕ್ಟರ್ ಅಥವಾ ಇಂಜಿನಿಯರ್ ಎನ್ನುವ ಕಾಲ ಈಗ ಉಳಿದಿಲ್ಲ. ಹಲವಾರು ಕ್ಷೇತ್ರಗಳಲ್ಲಿ ಸಾವಿರಾರು ಹುದ್ದೆಗಳು ಸೃಷ್ಟಿಯಾಗಿದ್ದು ಉದ್ಯೋಗಾವಕಾಶಗಳು ಎಲ್ಲಾ ಆಯಾಮದ ಕೋರ್ಸ್‌ಗಳಿಗೂ ಇದೆ. ಆದರೆ ಕೋರ್ಸ್ ಆರಿಸುವ ಮೊದಲು ನೀವು ಯಾವ ವೃತ್ತಿ ಅಥವಾ ಉದ್ಯಮದತ್ತ ಹೋಗಬೇಕು ಎನ್ನುವ ಖಚಿತ ನಿರ್ಧಾರದಿಂದ ಕೋರ್ಸ್ ಆರಿಸಿಕೊಳ್ಳಿ. ಎಂಬಿಎ ಮಾಡಿ ಮ್ಯಾನೇಜ್‌ಮೆಂಟ್‌ನತ್ತ ಚಿತ್ತ ಇರಿಸಿಕೊಂಡವರು ಇಂಜಿನಿಯರಿಂಗ್ ಮಾಡಿ, ಎಂಬಿಎ ಕಡೆಗೆ ಹೊರಳುವುದಕ್ಕಿಂತ ಪಿಯುಸಿಯಲ್ಲೇ ಕಾಮರ್ಸ್ ಆರಿಸಿ ಕೊಂಡು ಮ್ಯಾನೇಜ್‌ಮೆಂಟ್‌ನತ್ತ ಹೋಗುವುದು ಹೆಚ್ಚು ಅರ್ಥಪೂರ್ಣ. ಇದು ಕೇವಲ ಒಂದು ಉದಾಹರಣೆಯಷ್ಟೆ

ಕೆರಿಯರ್ ಮತ್ತು ಕೋರ್ಸ್:
ಸೈನ್ಸ್ ಆರಿಸಿಕೊಂಡ ಮಾತ್ರಕ್ಕೆ ಇಂಜಿನಿಯರಿಂಗ್ ಒಂದೇ ಗುರಿಯಲ್ಲ. ಇಂದು ಅತ್ಯಂತ ಯಶಸ್ವಿ ಉದ್ಯಮವಾದ ಬಯೋ ಟೆಕ್ನಾಲಜಿ, ಮೈಕ್ರೊ ಬಯಾ ಲಜಿ ಕ್ಷೇತ್ರಗಳು ಹಲವಾರು ಹುದ್ದೆಗಳನ್ನು ಸೃಷ್ಟಿಸಿದೆ. ಉದಾಹರಣೆಗೆ ಎಂಎಸ್ಸಿ ಮೈಕ್ರೊಬಯಾಲಜಿ ಮಾಡಿದವರು ಬಯೋಟೆಕ್ನಾಲಜಿ ಲ್ಯಾಬ್‌ಗಳಲ್ಲಿ ಉನ್ನತ ಹುದ್ದೆ ಅಲಂಕರಿಸಬಹುದು. ಇಲ್ಲವೇ ಫಾರ್ಮಾಸ್ಸುಟಿಕಲ್ ಕಂಪನಿಗಳೂ ಕೂಡ ಎಂಎಸ್ಸಿ ವಿದ್ಯಾರ್ಥಿಗಳಿಗೆ ಹಲವಾರು ಉದ್ಯೋಗಾವಕಾಶಗಳನ್ನು ನೀಡುತ್ತದೆ. ಹಾಗಾಗಿ ಕೋರ್ಸ್ ಆರಿಸುವ ಮುನ್ನ ಹೋಗಬೇಕಾದ ಕ್ಷೇತ್ರ ಯಾವುದು, ನಿಮ್ಮ ಇಷ್ಟದ ಕ್ಷೇತ್ರ ಯಾವುದು ಎನ್ನುವುದನ್ನು ಮೊದಲು ನಿರ್ಧರಿಸಿಕೊಳ್ಳಿ.

ಆರಿಸಿಕೊಳ್ಳುವ ಮುನ್ನ ನಿಮ್ಮನ್ನು ನೀವು ಪ್ರಶ್ನಿಸಿಕೊಳ್ಳಿ

೧.ಹಣವೇ ಎಲ್ಲ ಎನ್ನುವುದು ನಿಮ್ಮ ನಿರ್ಧಾರವೇ?
ಹಣ ಸಂಪಾದನೆಯೊಂದೇ ಮುಖ್ಯ ಎಂದಾದಲ್ಲಿ ಹೆಚ್ಚಿನ ಸಂಪಾದನೆ ನೀಡುವ ಉದ್ಯೋಗದತ್ತ ನಿಮ್ಮ ಒಲವನ್ನು ತೋರಬಹುದು. ಸಾಫ್ಟ್‌ವೇರ್ ಉದ್ಯಮ, ವೈದ್ಯಕೀಯ ಉದ್ಯಮಗಳು ಈ ಆವೃತ್ತಿಗೆ ಬರುತ್ತವೆ. ಹಣ ಸುಲಭವಾಗಿ ಬರುವುದಲ್ಲ ವಾರದ ೫ ದಿನದಲ್ಲಿ ೧೫ ದಿನಗಳ ಶ್ರಮವಿದ್ದೇ ಇರುತ್ತದೆ. ಹಣ ವೊಂದೇ ಅಲ್ಲ ಆತ್ಮತೃಪ್ತಿಯೂ ಮುಖ್ಯ ಎಂದಾದರೆ ಪತ್ರಿಕೋದ್ಯಮ, ಪ್ರೌಢ ಶಾಲಾ ಅಥವಾ ಕಾಲೇಜು ಶಿಕ್ಷಕ ವೃತ್ತಿಯತ್ತ ಚಿತ್ತ ಹರಿಸಬಹುದು. ಶಿಕ್ಷಕರೇ ಕಡಿಮೆಯಾಗುತ್ತಿರುವ ಈ ಸಮಯದಲ್ಲಿ ಶಿಕ್ಷಕ ವೃತ್ತಿಗೆ ಬೇಡಿಕೆಯೂ ಹೆಚ್ಚಿದೆ.

೨.ಉದ್ಯೋಗದ ಘನತೆ ನಿಮ್ಮ ಚಿಂತೆಯೇ?
ಘನತೆವೆತ್ತ ಉದ್ಯೋಗ ಎನ್ನುವುದು ಯಾವುದೂ ಇಲ್ಲ, ಎಲ್ಲ ಕೆಲಸವೂ ಕೆಲಸವೇ ಎನ್ನುವವರು ಕೆಲವರಾದರೆ ಬಹಳಷ್ಟು ಮಂದಿ ಈ ಕೆಲಸ ಮೇಲು ಆ ಕೆಲಸ ಕೀಳು ಎನ್ನುವುದೂ ಉಂಟು. ಆದರೆ ನೀವು ಆಯ್ಕೆ ಮಾಡುವಾಗ ನಿಮ್ಮ ಗಮನ ದೀರ್ಘಕಾಲಿಕ ಹಾದಿಯ ಬಗೆಗೆ ಇರಲಿ. ಉದಾಹರಣೆಗೆ ಹೋಟೆಲ್ ಉದ್ಯಮ. ಇಂದು ಹೋಟೆಲ್ ಉದ್ಯಮ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಉದ್ಯಮ. ಹೋಟೆಲ್ ಮ್ಯಾನೇಜ್‌ಮೆಂಟ್ ಮಾಡಿದ ಎಷ್ಟೋ ಮಂದಿ ಕ್ರೂಸ್ (ಹಡಗು)ಗಳಲ್ಲಿನ ಹೋಟೆಲ್ ನಿಭಾಯಿಸುತ್ತಾ ಭರಪೂರ ದುಡಿಯುತ್ತಿರುವ ಉದಾಹರಣೆಗಳೂ ಇವೆ. ಟ್ರಾವೆಲ್ ಅಂಡ್ ಟೂರಿಸಂ ಕೂಡ ಹಲ ವಾರು ಅವಕಾಶಗಳ ಬಾಗಿಲನ್ನು ತೆರೆದಿದೆ. ಟ್ರಾವೆಲ್ ಕನ್ಸಲ್ಟೆಂಟ್ ಇಂದ ಹಿಡಿದು ಟ್ರಾವೆಲ್ ಏಜೆಂಟ್ ಆಗುವವರೆಗೂ ಬೆಳೆಯುವ ಅವಕಾಶವಿದೆ. ಹಾಗಾಗಿ ಉದ್ಯೋಗಕ್ಕಿರುವ ಘನತೆ ಹೆಸರಿನಿಂದ ಮಾತ್ರ ಅಲ್ಲ ಅದು ಮುಂದೆ ನೀಡಬಲ್ಲ ಬೆಳವಣಿಗೆಯಿಂದಲೂ ಕೂಡಿರುತ್ತದೆ ಎಂಬ ಎಚ್ಚರಿಕೆ ಇರಲಿ.

೩.ಶಿಕ್ಷಣದ ವೆಚ್ಚ ನಿಮ್ಮ ಆಯ್ಕೆಯ ಮೇಲೆ ಪರಿಣಾಮ ಬೀರುವುದೇ?
ಇಂದು ಶಿಕ್ಷಣದ ವೆಚ್ಚ ಸುಲಭ ಸಾಧ್ಯವಲ್ಲ. ಆರಿಸುವ ಕೋರ್ಸ್ ಕಿಸೆಗೆ ಹೆಚ್ಚಿನ ಭಾರವೆನಿಸಿದರೆ, ಕಡಿಮೆ ಖರ್ಚಿನಲ್ಲಿ ಉತ್ತಮ ಉದ್ಯೋಗಾವಕಾಶ ಕೊಡಬಲ್ಲ ಹಲವಾರು ಕೋರ್ಸ್‌ಗಳಿವೆ. ನಿಮ್ಮ ಆರ್ಥಿಕ ಸ್ಥಿತಿಯನ್ನೂ ಕೂಡ ಪರಿಗಣಿಸಿ. ಇಂದು ಶಿಕ್ಷಕ ವೃತ್ತಿಗೆ ಹೋಗುವವರೇ ಕಡಿಮೆ, ಅದರಲ್ಲೂ ಭಾಷಾ ಶಿಕ್ಷಕರ ಕೊರತೆ ಎಲ್ಲೆಡೆ ಕಾಡಿದೆ. ಹಾಗಾಗಿ ಯಾವುದೇ ಭಾಷೆಯಲ್ಲಿ ಮಾಸ್ಟರ್ಸ್ ಪದವಿ ಮಾಡಿ ಪ್ರೌಢ ಶಾಲೆ ಅಥವಾ ಕಾಲೇಜು ಶಿಕ್ಷಕರಾಗುವ ಉದ್ಯೋಗಾವಕಾಶ ಪಡೆಯಬಹುದು. ಇದು ಕಡಿಮೆ ಖರ್ಚಿನಲ್ಲಿ ಘನತೆವೆತ್ತ ಉದ್ಯೋಗ ನೀಡುವ ಒಂದು ಉದಾಹರಣೆಯಷ್ಟೆ.

೪.ಕೋರ್ಸ್‌ನ ಕಾಲಾವಧಿ ಎಷ್ಟಿದೆ?
ಪಿ.ಯು.ಸಿ ನಂತರ ಸಾಧಾರಣ ಪದವಿ, ಇಂಜಿನಿಯರಿಂಗ್ ಪದವಿಗಳು ೩ ವರ್ಷದ ಅವಧಿ ತೆಗೆದುಕೊಂಡರೆ ೧೦ನೇ ತರಗತಿ ನಂತರ ಡಿಪ್ಲೊಮಾಗಳು ೧ ರಿಂದ ೩ ವರ್ಷದ ಅವಧಿ ಇರುತ್ತದೆ. ವೈದ್ಯರು, ಚಾರ್ಟರ್ಡ್ ಅಕೌಂಟೆಂಟ್ (ಸಿ.ಎ.), ಎಲ್‌ಎಲ್‌ಬಿಗಳಿಗಾದರೆ ಕೇವರ ಕೋರ್ಸ್ ಮುಗಿದರೆ ಸಾಲದು ಅನುಭವದ ಅವಧಿಯೂ ಲೆಕ್ಕವಾಗುತ್ತದೆ. ಹಾಗಾಗಿ ಎಷ್ಟು ವರ್ಷಗಳ ನಂತರ ದುಡಿಯುವ ಅನಿವಾರ್ಯತೆ ಇದೆ ಎನ್ನುವ ಲೆಕ್ಕಾಚಾರವನ್ನು ಮನಸ್ಸಿನಲ್ಲಿಟ್ಟುಕೊಂಡು ಕೋರ್ಸ್ ಆರಿಸಬೇಕು. ಕೋರ್ಸ್ ಆರಿಸಿದ ನಂತರ ಅವಧಿಗೆ ಮುಂಚೆ ಅನಿ ವಾರ್ಯತೆಗಳಿಂದ ಕೋರ್ಸ್ ತೊರೆಯು ವಂತಾಗಬಾರದು.

ಕೋರ್ಸ್‌ಗಳ ಆಯ್ಕೆ ಪಿ.ಯು.ಸಿ. ಮಟ್ಟ ದಲ್ಲೇ ಮಾಡುವುದು ಒಳಿತು.

ಸದ್ಯದಲ್ಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಬರುತ್ತಿವೆ. ಈಗ ಮಕ್ಕಳು ತಮ್ಮ ಕೋರ್ಸ್ ನಿರ್ಧಾರ ಮಾಡುವ ಸಮಯ. ಪೋಷಕರ ಮೆಚ್ಚಿನ ಕೋರ್ಸ್‌ಗಿಂತ ತಮ್ಮ ಮನಸ್ಸಿಗೆ ಹಿಡಿಸುವ ಮತ್ತು ಆಸಕ್ತಿ ಇರುವ ವಿಷಯವನ್ನು ಆಧರಿಸಿ ಕೋರ್ಸ್ ತೆಗೆದುಕೊಳ್ಳುವುದು ಉತ್ತಮ.
ಗುರಿಯನ್ನು ಮೊದಲು ನಿರ್ಧರಿಸಿ. ನಂತರ ನಿಮ್ಮ ಆಯ್ಕೆಯ ಕೋರ್ಸ್ ಮಾಡಿ. ವಿಜ್ಞಾನಿ, ತಂತ್ರಜ್ಞಾನಿ, ಶಿಕ್ಷಕರು, ನರ್ಸ್‌ಗಳು, ಡಿಪ್ಲೊಮೊ ಮಾಡಿ ಕೊಂಡ ಟೆಕ್ನಿಷಿಯನ್‌ಗಳಿಗೆ ಇಂದು ಹಲವಾರು ಉದ್ಯೋಗ ಸೃಷ್ಟಿಯಾಗಿದೆ.ಕಲೆಯಲ್ಲಿ ಆಸಕ್ತಿ ಇರುವವರಿಗೆ ಇಂದು ಟಿವಿ ಮಾಧ್ಯಮದ ರಿಯಾಲಿಟಿ ಶೋಗಳು, ನಾಟಕ ರಂಗದಲ್ಲಿ ಹಲವಾರು ಕ್ರಿಯಾತ್ಮಕ ಅವಕಾಶ ಗಳನ್ನೂ ಒದಗಿ ಸುತ್ತಿದೆ. ಹಾಗಾಗಿ ನಿಮ್ಮ ಆಯ್ಕೆ, ಹಣಕಾಸಿನ ಪರಿಸ್ಥಿತಿ, ನೀವು ಆಯ್ದುಕೊಂಡ ಕೋರ್ಸ್ ನಿಮ್ಮ ಗುರಿ ಮುಟ್ಟುವಲ್ಲಿ ಹೇಗೆ ನೆರವಾಗಬಲ್ಲದು, ನಿಮ್ಮ ಕೋರ್ಸ್ ನಿಮಗೆ ಮುಂದೆ ನೀಡಬಹುದಾದ ಉದ್ಯೋಗಾವಕಾಶ ಎಲ್ಲವನ್ನೂ ಪರಿಗಣಿಸಿ ಕೋರ್ಸ್ ಆರಿಸಿ.