ಚಿಕ್ಕಮಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಇಂದು ಮಂಡಿಸಿರುವ ಬಜೆಟ್‌ನಲ್ಲಿ ಯುವ ಜನಾಂಗ, ಕೃಷಿ, ಮಹಿಳಾ ಕ್ಷೇತ್ರ ಮತ್ತು ಬಡತನ ನಿರ್ಮೂಲನೆಗೆ ಹೆಚ್ಚಿನ ಒತ್ತು ನೀಡಿರುವ ದೂರದೃಷ್ಟಿಯ ಬಜೆಟ್ ಎಂದು ಜಿಲ್ಲಾ ಬಿಜೆಪಿ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ಹೇಳಿದ್ದಾರೆ.
ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳ ಕ್ಷೇತ್ರಕ್ಕೆ 1.52 ಲಕ್ಷ ಕೋಟಿ .ಗಳನ್ನು ಮೀಸಲಿಟ್ಟಿದ್ದು, ನೈಸರ್ಗಿಕ ಕೃಷಿಗೆ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. ಗ್ರಾಮೀಣ ಪ್ರದೇಶದ ಭೂ ಸುಧಾರಣೆಗೂ ಒತ್ತು ನೀಡಿರುವ ಬಜೆಟ್‌ನಲ್ಲಿ ಅನ್ನದಾತನಿಗೆ ಹೆಚ್ಚಿನ ಮಣೆ ಹಾಕಿರುವುದನ್ನು ಜಿಲ್ಲಾ ಬಿಜೆಪಿ ಸ್ವಾಗತಿಸುತ್ತದೆ ಎಂದು ಅವರು ಮಂಗಳವಾರ ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬಜೆಟ್‌ನಲ್ಲಿ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ ಸಣ್ಣ ಮತ್ತು ಮಧ್ಯಮ ಉದ್ಯಮ ವಲಯಕ್ಕೆ ಮಹತ್ವ ನೀಡಲಾಗಿದೆ. ಒಂದು ಸಾವಿರ ಕೈಗಾರಿಕಾ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲು ಬಜೆಟ್‌ನಲ್ಲಿ ಭರವಸೆ ನೀಡಲಾಗಿದೆ. 12 ಕೈಗಾರಿಕಾ ಪಾರ್ಕ್‌ಗಳ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಅವಕಾಶ ನೀಡಲಾಗಿದೆ. ಬೆಂಗಳೂರು-ಹೈದರಾಬಾದ್ ಕಾರಿಡಾರ್ ಯೋಜನೆಗೆ ಹಣ ಮೀಸಲಿಡಲಾಗಿದ್ದು, ಈ ಯೋಜನೆಯಿಂದ ರಾಜಧಾನಿ ಬೆಂಗಳೂರು ಅಭಿವೃದ್ಧಿ ಜೊತೆಗೆ ಉದ್ಯೋಗ ಸೃಷ್ಟಿಯು ಆಗಲಿದೆ ಎಂದಿದ್ದಾರೆ.
ಯುವಜನರ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಒತ್ತು ನೀಡಿದ್ದು, 5 ವರ್ಷಗಳ ಅವಧಿಯಲ್ಲಿ 20 ಲಕ್ಷ ಯುಜನರಿಗೆ ಕೌಶಲ್ಯ ತರಬೇತಿ ನೀಡಲು ಅನುದಾನ ಮೀಸಲಿಡಲಾಗಿದೆ. ದೇಶದ ೫೦೦ ಕಂಪನಿಗಳಲ್ಲಿ ಒಂದು ಕೋಟಿ ಯುವಜನರಿಗೆ ತರಬೇತಿ ನೀಡಲು ಮತ್ತು ಇಂಟರ್ನ್‌ಶಿಪ್ ಅವಧಿಯಲ್ಲಿ ಯುವಜನರಿಗೆ ಪ್ರತಿ ತಿಂಗಳು ಐದು ಸಾವಿರ ರೂ.ಗಳ ಶಿಷ್ಯವೇತನ ನೀಡಲು ಭರವಸೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಗ್ರಾಮೀಣ ಅಭಿವೃದ್ಧಿಗೆ ಒತ್ತು ನೀಡಿರುವ ಕೇಂದ್ರ ಸರ್ಕಾರ 2.65 ಲಕ್ಷ ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ನರೇಗಾ ಯೋಜನೆಗೆ ಈ ಬಾರಿ 86 ಸಾವಿರ ಕೋಟಿ ರೂ.ಗಳನ್ನು ನಿಗಧಿಸಿದೆ ಎಂದು ಹೇಳಿರುವ ಅವರು, ಮಹಿಳಾ ಕ್ಷೇತ್ರಕ್ಕೂ ಹೆಚ್ಚಿನ ಒತ್ತು ನೀಡಲಾಗಿದೆ. ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಉದ್ದೇಶದಿಂದ ಮಹಿಳಾಯೆನ್ ಯೋಜನೆಯನ್ನು ಜಾರಿಗೆ ತರಲು ಭರವಸೆ ನೀಡಲಾಗಿದೆ ಎಂದು ವಿವರಿಸಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಅರ್ಥ ಸಚಿವೆ ನಿರ್ಮಲಾ ಸೀತರಾಮನ್ ಮಂಡಿಸಿರುವ ಬಜೆಟ್‌ನಲ್ಲಿ ನೌಕರರಿಗೆ ಬಂಪರ್ ಕೊಡುಗೆ ಕೊಡಲಾಗಿದೆ. ಚಿನ್ನ, ಬೆಳ್ಳಿ, ಪ್ಲಾಟಿನಂ, ಮೊಬೈಲ್ ಮತ್ತು ಮೊಬೈಲ್ ಚಾರ್ಜರ್, ಸೋಲಾರ್ ಪ್ಯಾನಲ್, ಚರ್ಮ ಉತ್ಪನ್ನಗಳು, ಕ್ಯಾನ್ಸರ್ ಔಷಧಿಗಳ ಬೆಲೆಗಳಲ್ಲಿ ಇಳಿಕೆ ಮಾಡಿರುವುದು ಸ್ವಾಗತಾರ್ಹವಾಗಿದ್ದು, ದೂರದೃಷ್ಟಿಯ ಬಜೆಟ್ ಮಂಡಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರವನ್ನು ಜಿಲ್ಲಾ ಬಿಜೆಪಿ ಅಭಿನಂದಿಸುತ್ತದೆ ಎಂದು ಹೇಳಿದ್ದಾರೆ.