ಶಿವಮೊಗ್ಗ : ಭಾರತ್ ಸಂಚಾರ ನಿಗಮದ ಸುಧಾರಣೆಗೆ ಏನೇನು ಸೌಲಭ್ಯಗಳು ಬೇಕೆಂಬುದರ ಬಗ್ಗೆ ಗಮನಕ್ಕೆ ತಂದರೆ ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಿ ಸೌಲಭ್ಯ ದೊರಕಿಸಿ ಕೊಡಲಾಗುತ್ತದೆ ಎಂದು ಸಂಸದ ಬಿ.ಎಸ್. ಯಡಿಯೂರಪ್ಪ ಹೇಳಿದರು.
ನಗರದ ಭಾರತ್ ಸಂಚಾರ್ ನಿಗಮ ಕಚೇರಿಯಲ್ಲಿ ಇಂದು ಏರ್ಪಡಿಸಿದ್ದ ದೂರ ಸಂಪರ್ಕ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇದು ಮಲೆ ನಾಡು ಜಿಲ್ಲೆಯಾಗಿರುವುದರಿಂದ ಸಂಪರ್ಕ ಅತೀ ಮುಖ್ಯವಾಗಿದೆ. ಇದರಿಂದಾಗಿ ಲ್ಯಾಂಟ್ ಲೈನ್ ಸಂಪರ್ಕ ಇಲ್ಲದಿರುವ ಕಡೆ ಗಳಲ್ಲಿ ವೈರ್‌ಲೆಸ್ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಎಲ್ಲೆಲ್ಲಿ ವೈಫೈ ಹಾಗೂ ಮೊಬೈಲ್ ಟವರ್‌ಗಳ ಅಗತ್ಯವಿದೆ ಎಂಬುದನ್ನು ಸಮೀಕ್ಷೆ ಮಾಡಿ ಅಂತಹ ಕಡೆಗಳಲ್ಲಿ ಟವರ್ ನಿರ್ಮಾಣಕ್ಕೆ ಮುಂದಾಗಬೇಕು. ಸಾಧನ ಸಲಕರಣೆಗಳನ್ನು ತರಿಸಿಕೊಳ್ಳುವ ನಿಟ್ಟಿನಲ್ಲಿ ಸಂಪರ್ಕದಲ್ಲಿರುವಂತೆ ಸೂಚಿಸಿದ ಅವರು, ಜನರಿಗೆ ಅಗತ್ಯ ಸೇವೆ ಒದಗಿಸಲು ಮುಂದಾಗುವಂತೆ ಹೇಳಿದರು.
ಸಲಹಾ ಸಮಿತಿ ಸದಸ್ಯ ಬಿಳಕಿ ಕೃಷ್ಣಮೂರ್ತಿ ಮಾತನಾಡಿ, ನಿಗಮದ ಅಧಿಕಾರಿಗಳು ಸಲಹಾ ಸಮಿತಿ ಸದಸ್ಯರ ಸಂಪರ್ಕದಲ್ಲಿದ್ದರೆ ಹಾಗೂ ಟವರ್ ನಿರ್ಮಾಣಕ್ಕೆ ಎಲ್ಲೆಲ್ಲಿ ಜಾಗದ ಅಗತ್ಯವಿದೆ ಎಂಬುದನ್ನು ತಿಳಿಸಿದರೆ ಸ್ಥಳೀಯ ಸಂಸ್ಥೆಯೊಂದಿಗೆ ಮಾತನಾಡಿ ಜಾಗದ ವ್ಯವಸ್ಥೆ ಮಾಡಲಾಗುತ್ತದೆ ಎಂದ ಅವರು, ಇಲ್ಲಿನ ಗೋಪಾಲಗೌಡ ಬಡಾವಣೆ ಹಾಗೂ ಸಿದ್ಧೇಶ್ವರ ನಗರದಲ್ಲಿ ಮೊಬೈಲ್ ಟವರ್‌ಗಳ ಅಗತ್ಯವಿದ್ದು ಈ ಸಂಬಂಧ ಸ್ಥಳ ಪರಿಶೀಲನೆ ಮಾಡುವಂತೆ ಹೇಳಿದರು.
ಸಾಲೆಕೊಪ್ಪ ರಾಮಚಂದ್ರ ಮಾತನಾಡಿ, ತೀರ್ಥಹಳ್ಳಿ ತಾಲೂಕು ನಕ್ಸಲ್ ಪೀಡಿತವಾ ಗಿದ್ದು, ಲ್ಯಾಂಡ್ ಲೈನ್ ಹಾಗೂ ಮೊಬೈಲ್ ಟವರ್ ಸಂಪರ್ಕ ಸಾಕಷ್ಟು ಇರುವುದಿಲ್ಲ. ಬಹುತೇಕ ಗ್ರಾಮಗಳು ದೂರಸಂಪರ್ಕದಿಂದ ಹೊರಗುಳಿಯುವಂತಾಗಿವೆ. ಹೀಗಾಗಿ ಈ ತಾಲೂಕಿಗೆ ಸುಮಾರು ೧೫ ರಿಂದ ೨೦ ಮೊಬೈಲ್ ಟವರ್‌ಗಳ ಅಗತ್ಯವಿದೆ ಎಂದರು.
ದೇವಾನಂದ ಮಾತನಾಡಿ, ಹೊಸನಗರ ತಾಲೂಕಿನಲ್ಲಿ ಹೊಸ ಟವರ್‌ಗಳ ನಿರ್ಮಾಣಕ್ಕೆ ಈಗಾಗಲೇ ಯೋಜನೆ ರೂಪಿಸಲಾಗಿತ್ತಾದರೂ ಇನ್ನೂ ಆಗಿಲ್ಲ. ವರದಹಳ್ಳಿಯಂತಹ ಧಾರ್ಮಿಕ ಕ್ಷೇತ್ರ ಇರುವ ಗ್ರಾಮದಲ್ಲಿಯೂ ಸರಿಯಾಗಿ ದೂರವಾಣಿ ವ್ಯವಸ್ಥೆ ಇಲ್ಲ. ದೂರವಾಣಿ ವ್ಯವಸ್ಥೆ ಸುಧಾರಣೆಗೆ ಈ ತಾಲೂಕಿನಲ್ಲಿಯೂ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಸಭೆಗೆ ಮಾಹಿತಿ ನೀಡಿದ ಅಧಿಕಾರಿಗಳು ಹೊಸದಾಗಿ ಮೊಬೈಲ್ ಸಿಮ್ ಪಡೆಯುತ್ತಿರುವ ಗ್ರಾಹಕರಿಗೆ ಬಯೋ ಮೆಟ್ರಿಕ್ ಮೂಲಕವೇ ಸಿಮ್ ನೀಡಲಾಗುತ್ತಿದೆ. ಈ ವೃತ್ತ ವ್ಯಾಪ್ತಿಯಲ್ಲಿ ೪ ಲಕ್ಷ ಬಿಎಸ್‌ಎನ್‌ಎಲ್ ಗ್ರಾಹಕರಿದ್ದು, ಇವ ರಲ್ಲಿ ೫೭,೭೦೫ ಗ್ರಾಹಕರು ಆಧಾರನೊಂದಿಗೆ ಜೋಡಣೆ ಮಾಡಿಕೊಂಡಿದ್ದಾರೆ. ಹೆಸರು ಅಥವಾ ವಿಳಾಸ ತಪ್ಪಾಗಿದ್ದರೂ ಕೂಡ ಈಗ ಅದನ್ನು ಸರಿಪಡಿಸುವುದು ಸುಲಭವಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಮುಖ್ಯಪ್ರಬಂಧಕ ಜನಾರ್ಧನ ರಾವ್, ಸಲಹಾ ಸಮಿತಿ ಸದಸ್ಯರಾದ ಕೆ.ಪಿ. ಪುರುಷೋತ್ತಮ, ರವೀಂದ್ರನಾಥ, ಕೃಷ್ಣಕುಮಾರ್, ರೇವಣಪ್ಪ ಮೊದಲಾದವರು ಇದ್ದರು.