ರಾಹುಲ್ ವರ್ತನೆ ಅಪ್ರಬುದ್ಧತೆಯ ಸಂಕೇತ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಬಿ.ಎಸ್.ಯಡಿಯೂರಪ್ಪ

ಶಿವವಗ್ಗ : ಸಂಸತ್ತಿನಲ್ಲಿ ನಿನ್ನೆ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಅಪ್ಪಿಕೊಂಡು ನಂತರ ತಮ್ಮ ಆಸನದಲ್ಲಿ ಕೂತಾಗ ಕಣ್ಣು ಮಿಟುಕಿಸಿರುವುದು ಪ್ರೌಢತೆ ಇಲ್ಲದ ಜವಾಬ್ದಾರಿ ಇಲ್ಲದ ನಾಯಕನ ವರ್ತನೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಇಂದು ನಗರದ ಶುಭಮಂಗಳ ಸಮುದಾಯ ಭವನದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಒಂದು ಜವಾಬ್ದಾರಿ ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿರುವ ರಾಹುಲ್‌ಗಾಂಧಿ, ಸಂಸತ್ತಿನಲ್ಲಿ ಅಪ್ರಬುದ್ಧತೆಯಿಂದ ನಡೆದುಕೊಂಡಿದ್ದಾರೆ ಎಂದು ಟೀಕಿಸಿದರು.
ಸಂಸತ್ತಿನಲ್ಲಿ ಕಾಂಗ್ರೆಸ್ ಹಾಗೂ ಇತರೇ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯದ ಸಂದರ್ಭದಲ್ಲಿ ವಿರೋಧ ಪಕ್ಷದ ವಿವಿಧ ನಾಯಕರು ಮಾತನಾಡಿದ ನಂತರ, ಅದಕ್ಕೆ ಉತ್ತರವಾಗಿ ಸತತ ಒಂದೂವರೆ ಗಂಟೆಗಳ ಕಾಲ ಕಳೆದ ನಾಲ್ಕುವರೆ ವರ್ಷಗಳ ಆಡಳಿತಾವಧಿಯಲ್ಲಿ ತಾವುಮಾಡಿದಂತಹ ಅಭಿವೃದ್ಧಿ ಕಾರ್ಯಗಳನ್ನು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ದಿಟ್ಟತನವನ್ನು ಪ್ರದರ್ಶಿಸಿದರು ಎಂದರು.
ಕಳೆದ ೨೦೧೪ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ನಾನು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಅತೀ ಹೆಚ್ಚು ಮತಗಳ ಅಂತರದಿಂದ ಜಯಶಾಲಿಯಾದಾಗ ಪ್ರಧಾನಿ ನರೇಂದ್ರ ಮೋದಿಯವರ ಹವಾ ಮತ್ತು ಅವರ ಅಲೆಯ ಮೇಲೆ ಇಷ್ಟೊಂದು ಮತ ಬಂದಿದೆ ಎಂಬ ಅಭಿಪ್ರಾಯ ಎಂಬ ನಮ್ಮ ಕಾರ್ಯಕರ್ತರಲ್ಲಿ ಇದೆ. ಪ್ರಧಾನಿ ನರೇಂದ್ರ ಮೋದಿಯವರ ಹವಾ ಮತ್ತು ಅಲೆಯ ಬಗ್ಗೆ ಎರಡು ಮಾತಿಲ್ಲ. ಆದರೆ ಕಳೆದ ಕೆಲ ತಿಂಗಳ ಹಿಂದೆ ರಾಜ್ಯವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರವೂ ಸೇರಿದಂತೆ ೮ ಕ್ಷೇತ್ರಗಳಲ್ಲಿ ೭ ರಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಿರುವುದರ ಹಿಂದೆ ಕಾರ್ಯಕರ್ತರ ಶ್ರಮ ಎಷ್ಟಿ ಎಂಬುದನ್ನು ಪ್ರತಿಯೊಬ್ಬ ನಮ್ಮ ಮುಖಂಡರು ಅರ್ಥ ಮಾಡಿಕೊಳ್ಳಬೇಕೆಂದರು.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ೧೫೦ ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಹೇಳಿದಾಗ ಇದರ ಬಗ್ಗೆ ನಮ್ಮ ಪಕ್ಷದವರೇ ಕೆಲವರು ಅನುಮಾನದ ಮಾತುಗಳನ್ನಾಡಿದರು. ಆದರೆ ಪರಿವರ್ತನಾ ಯಾತ್ರೆ ಸಂದರ್ಭದಲ್ಲಿ ಮತ್ತು ಚುನಾವಣೆ ಸಂದರ್ಭದಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಕಂಡಂತಹ ಜನಬೆಂಬಲ ರಾತ್ರಿ ೧೧ ಗಂಟೆಯಾದರೂ ಸಹ ಕುಗ್ಗದ ಜನರ ಉತ್ಸಾಹ ನಮ್ಮ ಗುರಿಯನ್ನು ಮತ್ತಷ್ಟು ಹೆಚ್ಚಿಸುತ್ತಿತ್ತು ಎಂದರು.
ರಾಜ್ಯದ ಬೆಂಗಳೂರು, ಬಳ್ಳಾರಿ, ಬೆಳಗಾಂ, ಬಿಜಾಪುರ ಜಿಲ್ಲೆಗಳಲ್ಲಿ ನಮ್ಮ ಪಕ್ಷಕ್ಕೆ ಹಿನ್ನೆಡೆಯಾಯಿತು. ಆದರೆ ಕಾರ್ಯಕರ್ತರು ಧೃತಿಗೆಡ ಬೇಕಾಗಿಲ್ಲ. ದೇವರ ಮೇಲೆ ನಂಬಿಕೆ ಇಡೋಣ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಳು ತ್ತೇನೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಮತ್ತು ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ಅತೀ ಹೆಚ್ಚು ಅಂತರದಿಂದ ಜಯಗಳಿಸುವ ನಿಟ್ಟಿನಲ್ಲಿ ಶ್ರಮಿಸೋಣ ಎಂದರು.
ಕಾರ್ಯಕ್ರಮದಲ್ಲಿ ಶಾಸಕರು ಗಳಾದ ಆಯನೂರು ಮಂಜುನಾಥ್, ಕುಮಾರ್‌ಬಂಗಾರಪ್ಪ, ಅಶೋಕ್ ನಾಯಕ್, ಹರತಾಳು ಹಾಲಪ್ಪ, ಮಾಜಿ ಸಚಿವರುಗಳಾದ ಕೆ.ಜಿ. ಕುಮಾರಸ್ವಾಮಿ, ಆರ್.ಕೆ. ಸಿದ್ದರಾಮಣ್ಣ ಸೇರಿದಂತೆ ಮೊದಲಾದವರಿದ್ದರು.