ಶಿವಮೊಗ್ಗ: ರಾಜ್ಯ ಸರ್ಕಾರದ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಗಳು ಆಗಿಲ್ಲ. ಶಿವಮೊಗ್ಗ ನಗರಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಯಾವುದೇ ಅಭಿವೃದ್ಧಿಯ ಹಾಗೂ ಹೊಸ ಯೋಜನೆಯ ಕೊಡುಗೆಯನ್ನು ನೀಡಿಲ್ಲ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆರೋಪಿಸಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವರ್ತುಲ ರಸ್ತೆ ಸರ್ವೇ ಆಗಿದ್ದು, ಆದರೆ ಕಾಮಗಾರಿ ನಡೆದಿಲ್ಲ. ಹೊಸ ಜೈಲು ನಿರ್ಮಾಣ ಆದರೂ ಹಳೇ ಜೈಲು ಶಿಫ್ಟ್ ಆಗಿಲ್ಲ, ಪ್ರವಾಸೋದ್ಯಮಕ್ಕೆ ಅವಕಾಶ ಇದ್ದರೂ ನೀಡಿಲ್ಲ . ಈ ಎಲ್ಲವುಗಳ ಬಗ್ಗೆ ಜಿಲ್ಲೆಗೆ ಆಗಮಿಸುತ್ತಿರುವ ಮುಖ್ಯಮಂತ್ರಿ ಸಿದ್ದ ರಾಮಯ್ಯ ಉತ್ತರ ನೀಡಲಿ ಎಂದರು.
ಕಳೆದ ೪ವರೆ ವರ್ಷದ ಕಾಂಗ್ರೆಸ್ ಆಡಳಿತದಲ್ಲಿ ಜಿಲ್ಲೆಯ ಅಭಿವೃದ್ಧಿಗೆ ರಾಜ್ಯ ಸರ್ಕಾರ ಎಷ್ಟು ಹಣ ಬಿಡುಗಡೆ ಮಾಡಿದೆ ಎಂದು ಮುಖ್ಯಮಂತ್ರಿಗಳು ಪಟ್ಟಿ ನೀಡಲಿ ಎಂದು ಆಗ್ರಹಿಸಿದ ಅವರು, ಈ ಬಾರಿಯ ಚುನಾವಣೆ ಯಲ್ಲಿ ಯಾವ ಪಕ್ಷದೊಂದಿಗೂ ಹೊಂದಾ ಣಿಕೆಯ ಅಗತ್ಯವಿಲ್ಲದೆ ಬಿಜೆಪಿ ೧೫೦ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದರು.
ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆಗೆ ಮುಂದಿನ ವರ್ಷ ೧೦೦ ವಸಂತಗಳು ಪೂರೈಸುತ್ತಿದೆ. ಇಂತಹ ಕಾರ್ಖಾನೆಯನ್ನು ಉಳಿಸಿ, ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಈಗಾಗಲೇ ಒಮ್ಮೆ ಕೇಂದ್ರದ ಉಕ್ಕು ಸಚಿವರೊಂದಿಗೆ ಚರ್ಚಿಸಲಾಗಿದೆ. ಪ್ರಸ್ತುತ ಕಾರ್ಖಾನೆಗೆ ೫೦೦ ಎಕರೆ ಗಣಿ ಮಂಜೂರಾಗಿದೆ. ಶೀಘ್ರದಲ್ಲೇ ಸಚಿವ ಅನಂತಕುಮಾರ್ ಮೂಲಕ ಮತ್ತೊಮ್ಮೆ ಉಕ್ಕು ಸಚಿವರೊಂದಿಗೆ ಮಾತುಕತೆ ನಡೆಸಿ ಕಾರ್ಖಾನೆಯ ಸಮಸ್ಯೆಗಳಿಗೆ ಇತಿಶ್ರೀ ಹಾಡಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಹೇಳಿದರು.
ಶಿವಮೊಗ್ಗಕ್ಕೆ ೧೦೦ ಹಾಸಿಗೆಗಳ ಇಎಸ್‌ಐ ಆಸ್ಪತ್ರೆ ಮಂಜೂರಾಗಿದ್ದು, ಇದಕ್ಕೆ ಬೇಕಾದ ಜಾಗವನ್ನು ಒದಗಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಬಿಜೆಪಿಯ ಪರಿವರ್ತನಾ ಯಾತ್ರೆಗೆ ಎಲ್ಲೆಡೆ ನಿರೀಕ್ಷೆಗೂ ಮೀರಿ ಜನ ಬೆಂಬಲ ವ್ಯಕ್ತವಾಗುತ್ತಿದೆ. ಬದಲಾವಣೆಗೆ ಜನ ಕಾಯುತ್ತಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಪ್ರಮು ಖರಾದ ಆಯನೂರು ಮಂಜುನಾಥ್, ಎಸ್. ರುದ್ರೇಗೌಡ, ಕುಮಾರ್ ಬಂಗಾರಪ್ಪ, ಸಿದ್ದರಾಮಣ್ಣ, ರವಿಕುಮಾರ್, ಬಿಳಕಿ ಕೃಷ್ಣಮೂರ್ತಿ, ಸುಭಾಷ್, ಡಿ.ಎಸ್. ಅರುಣ್, ಚನ್ನಬಸಪ್ಪ, ಕೆ.ಜಿ. ಕುಮಾರಸ್ವಾಮಿ, ರತ್ನಾಕರ್ ಶೆಣೈ ಮೊದಲಾದವರಿದ್ದರು.