ಶಿವಮೊಗ್ಗ: ಯುಜಿಡಿ ಸಮಸ್ಯೆ, ಹೊಸ ಬಡಾವಣೆಗಳಲ್ಲಿನ ಕುಡಿಯುವ ನೀರು , ರಸ್ತೆ, ನಾಯಿ- ಹಂದಿಗಳ ಕಾಟ, ಆಟೋ ಮೀಟರ್ ಕಡ್ಡಾಯ ಸೇರಿದಂತೆ ಶಿವಮೊಗ್ಗ ನಗರದ ಎಲ್ಲಾ ಸಾರ್ವಜನಿಕರ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲು ಸಿದ್ದನಿದ್ದೇನೆ ಎಂದು ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ಭರವಸೆ ನೀಡಿದ್ದಾರೆ.
ಶಿವಮೊಗ್ಗ ನಾಗರೀಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟವು ಸೋಮವಾರ ನಗರದ ಗೋಪಾಲ ಗೌಡ ಬಡಾವಣೆಯಲ್ಲಿನ ಬಂಟರ ಭವನದಲ್ಲಿ ನಗರದ ನಾಗರೀಕ ಸಮಸ್ಯೆಗಳ ಕುರಿತು ಶಾಸಕರೊಂದಿಗೆ ಏರ್ಪಡಿಸಿದ್ದ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಅವರು, ಸಾರ್ವಜನಿಕರ ಅಹವಾಲು ಆಲಿಸಿ, ಈ ಭರವಸೆ ನೀಡಿದರು.
ಪಾಲಿಕೆ ಸದಸ್ಯನಾಗಿ, ಸೂಡಾ ಅಧ್ಯಕ್ಷನಾಗಿಯೂ ನಗರದಲ್ಲಿ ತುಂಬಾ ಎಲ್ಲೆಲ್ಲಿ ಏನೆಲ್ಲ ಸಮಸ್ಯೆಗಳಿವೆ ಎನ್ನುವುದನ್ನು ನಾನು ಬಲ್ಲೆ. ಬಹು ಮುಖ್ಯವಾಗಿ ಇಂದು ಇಲ್ಲಿ ನನ್ನ ಮುಂದೆ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರು ಎದುರಿಸುತ್ತಿರುವ ಪ್ರಮುಖವಾದ 64 ಸಮಸ್ಯೆಗಳ ಬಗ್ಗೆ ದೂರುಗಳು ಬಂದಿವೆ ಇವೆಲ್ಲವನ್ನು ಮೂರು ವಿಧದಲ್ಲಿ ಬಗೆಹರಿಸಲು ಕ್ರಮ ಕೈಗೊಳ್ಳುವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪ್ರಮುಖರಾದ ಕೆ.ವಿ. ವಸಂತ್ ಕುಮಾರ್, ಟಿ.ಆರ್.ಅಶ್ವತ್ಥನಾರಾಯಣಶೆಟ್ಟಿ, ಡಾ. ಸತೀಶ್ ಕುಮಾರ್ ಶೆಟ್ಟಿ, ಪಾಲಿಕೆ ಮಾಜಿ ಸದಸ್ಯ ಡಿ.ಮೋಹನ್ ರೆಡ್ಡಿ, ಎಸ್.ಬಿ.ಅಶೋಕ್ ಕುಮಾರ್ ಮೊದಲಾದವರಿದ್ದರು.