ಶಿವಮೊಗ್ಗ: ಬೆಂಬಲ ಬೆಲೆಯಡಿ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಬೇಕೆಂದು ಒತ್ತಾಯಿಸಿ ಬಿಜೆಪಿ ವತಿಯಿಂದ ಇಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನೀಡಬೇಕು, ಖರೀದಿ ಕೇಂದ್ರ ತೆರೆಯಬೇಕು, ಎಪಿಎಂಸಿಯಲ್ಲಿ ಖರೀದಿಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿದ ಅವರು, ಶಿವಮೊಗ್ಗ ತಾಲ್ಲೂಕಿನಲ್ಲಿ ಸುಮಾರು ೧೩ ಸಾವಿರ ಹೆಕ್ಟೇರ್ ಖುಷ್ಕಿ ಜಮೀನಿನಲ್ಲಿ ಮಳೆಯಾಶ್ರಿತ ಭೂಮಿಯಲ್ಲಿ ಸುಮಾರು ೭೧ ಸಾವಿರ ಟನ್ ನಷ್ಟು ಮೆಕ್ಕೆಜೋಳ ಬೆಳೆಯಲಾಗಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ೧೪೨೫ ರೂ. ಬೆಂಬಲ ಬೆಲೆ ನಿಗದಿಪಡಿಸಿದೆ. ಖರೀದಿ ಕೇಂದ್ರ್ರ ಇಲ್ಲದ ಕಾರಣ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಮೆಕ್ಕೆಜೋಳ ಬೆಳೆದ ರೈತರ ಸ್ಥಿತಿ ಚಿಂತಾಜನಕವಾಗಿದೆ ಎಂದು ದೂರಿದರು.
ಕಷ್ಟಪಟ್ಟು ರೈತರು ಬೆಳೆದು ಸಂಗ್ರಹಿಸಿದ ಮೆಕ್ಕೆಜೋಳವನ್ನು ಮಧ್ಯವರ್ತಿಗಳು ಕೇವಲ ೧೦೦೦ ರೂ.ನಿಂದ ೧೧೦೦ ರೂ.ವರೆಗೆ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಲಾಭ ಪಡೆಯುತ್ತಿದ್ದಾರೆ. ಸರ್ಕಾರ ಖರೀದಿ ಕೇಂದ್ರ ತೆರೆಯಲು ಮೀನಾಮೇಷ ಎಣಿಸುತ್ತಿರುವುದರಿಂದ ಮಧ್ಯವರ್ತಿಗಳಿಗೆ ಅನುಕೂಲವಾಗಿದೆ ಎಂದರು.
ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್, ಗಿರೀಶ್ ಪಟೇಲ್, ಕೆ.ಜಿ. ಕುಮಾರಸ್ವಾಮಿ, ಜೆ.ಇ. ವಿರೂಪಾಕ್ಷಪ್ಪ, ಕೆ.ಎಸ್. ದೇವರಾಜ್, ಹಿರಣ್ಣಯ್ಯ ಮೊದಲಾದವರಿದ್ದರು.