ಸಚಿವ ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಆಗ್ರಹ: ಶಿವಪ್ಪನಾಯಕ ವೃತ್ತದ ಬಳಿ ಪ್ರತಿಭಟನೆ


ಶಿವಮೊಗ್ಗ: ಮಹರ್ಷಿ ವಾಲ್ಮೀಕಿ ಅಭಿವೃದ್ದಿ ನಿಗಮದ ಅಧೀಕ್ಷಕ ಚಂದ್ರಶೇಖರ್‌ ಆತ್ಮಹತ್ಯೆಗೆ ಪರಿಶಿಷ್ಟ ಕಲ್ಯಾಣ ಸಚಿವ ಬಿ. ನಾಗೇಂದ್ರ ಕಾರಣ ಎಂದುಆರೋಪಿಸಿ ಮತ್ತು ಅವರು ತಕ್ಷಣವೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬುಧವಾರ ನಗರದ ಶಿವಪ್ಪ ನಾಯಕ ವೃತ್ತದ ಬಳಿ ಬಿಜೆಪಿ ನಗರ ಘಟಕದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
 ಒಬ್ಬ ಪ್ರಾಮಾಣಿಕ ಅಧಿಕಾರಿಯಾಗಿದ್ದ ಚಂದ್ರಶೇಖರನ್‌ ಆತ್ಮಹತ್ಯೆಗೆ ಸರ್ಕಾರವೇ ನೇರಕಾರಣವಾಗಿದೆ. ಚಂದ್ರಶೇಖರನ್‌ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಬರೆದಿಟ್ಟ ಡೆತ್‌ ನೋಟ್‌ ನಲ್ಲಿ ಸಚಿವರು ಹಾಗೂ ಅಧಿಕಾರಿಗಳು ಇದಕ್ಕೆ ಕಾರಣ ಎಂದು ದೂರಿರುವುದು ಈ ಸರ್ಕಾರದ ಭ್ರಷ್ಟಾಚಾರಕ್ಕೆ ಕನ್ನಡಿದ ಹಿಡಿದಿದೆ. ತಕ್ಷಣವೇ ಸರ್ಕಾರ ಸಚಿವ. ಬಿ. ನಾಗೇಂದ್ರ ಅವರನ್ನು ಸಂಪುಟದಿಂದ ಕೈಬಿಡಬೇಕು, ಹಾಗೆಯೇ ಪ್ರಕರಣದ ಕುರಿತು ನಿಷ್ಪಾಕ್ಷಪಾತದ ತನಿಖೆ ನಡೆಯಬೇಕು, ಜತೆಗೆ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಇದೇ ವೇಳೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಸಚಿವ ಹಾಗೂ ಚಿಕ್ಕಮಗಳೂರು-ಉಡುಪಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ್‌ ಪೂಜಾರಿ ಮಾತನಾಡಿ, ಒಬ್ಬ ಪ್ರಾಮಾಣಿಕ ಅಧಿಕಾರಿಯೊಬ್ಬರ ಆತ್ಮಹತ್ಯೆ ಕುರಿತು ಬೀದಿಯಲ್ಲಿ ಪ್ರತಿಭಟನೆ ಮಾಡಬೇಕಾಗಿ ಬಂದಿರುವುದು ತುಂಬಾ ದುರಂತದ ವಿಷಯ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು, ಚಂದ್ರಶೇಖರನ್‌ ಆತ್ಮಹತ್ಯೆಗೆ ಕಾರಣವಾದವರ ಮೇಲೆ ಕಠಿಣ ಕ್ರಮ ಜರುಗಿಸಬೇಕೆಂಗು ಆಗ್ರಹಿಸಿದರು.

ಚಂದ್ರಶೇಖರನ್‌ ಕುಟುಂಬವನ್ನು ಭೇಟಿ ಮಾಡಿದ ನನಗೆ ತುಂಬಾ ನೋವುಂಟಾಗಿದೆ. ಮೃತರು ಇಬ್ಬರು ಮಕ್ಕಳು ಮತ್ತು ಮಡದಿಯನ್ನು ಆಗಲಿದ್ದಾರೆ. ಚಂದ್ರಶೇಖರ್‍ ಬೆಂಗಳೂರಿನಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದರೆ, ಮಡದಿ ಕವಿತಾ ಗುತ್ತಿಗೆ ಆಧಾರದಲ್ಲಿ ಶಿವಮೊಗ್ಗ ನಗರದಲ್ಲಿ ಕೆಲಸವೊಂದನ್ನು ನಿರ್ವಹಿಸುತ್ತಿದ್ದನ್ನು ನೋಡಿದರೆ ಚಂದ್ರಶೇಖರರ ಪ್ರಮಾಣಿಕತೆಗೆ ಇದು ಸಾಕ್ಷಿಯಾಗಿದೆ. ಇಂತಹ ನಿಷ್ಟಾವಂತ ಅಧಿಕಾರಿಗೆ ಸಚಿವರು ಹಣ ವರ್ಗಾವಣೆಗೆ ಮೌಖಿಕ ಆದೇಶ ನೀಡುವುದರ ಮೂಲಕ ಅವರ ಕರ್ತವ್ಯಕ್ಕೆ, ಪ್ರಮಾಣಿಕತೆಗೆ ಧಕ್ಕೆ ತಂದಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಒತ್ತಡವನ್ನು ತಾಳಲಾರದೆ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಇದರ ಹೊಣೆ ಹೊತ್ತು ಅವರ ರಾಜೀನಾಮೆ ಸಲ್ಲಿಸಬೇಕೆಂದು  ಒತ್ತಾಯಿಸಿದರು.

ಶಾಸಕ ಎಸ್.‌ ಎನ್.‌ ಚನ್ನಬಸಪ್ಪ ಮಾತನಾಡಿ, ವಾಲ್ಮೀಕಿ ಮಹರ್ಷಿಗೆ ಇತಿಹಾಸದಲ್ಲಿ ದೊಡ್ಡ ಹೆಸರಿದೆ. ಇಂತಹ ವ್ಯಕ್ತಿಯ ಹೆಸರಿನಲ್ಲಿರುವ ನಿಗಮದಲ್ಲಿ ವ್ಯಕ್ತಿ ಹಣ ವರ್ಗಾವಣೆ ಸಂಬಂಧ ಆತ್ಮಹತ್ಯೆ ಮಾಡಿಕೊಂಡಿರುವು ದುರಂತ. ಸಂಬಂಧಿಸಿದ ಇಲಾಖೆಯ ಸಚಿವರು ಇದಕ್ಕೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ.  ಸರಕಾರವು ಕೂಡಲೇ ಸಂತ್ರಸ್ತೆ ಕುಟುಂಬಕ್ಕೆ  ೨೫ ಲಕ್ಷ ರೂ. ಪರಿಹಾರವನ್ನು ಘೋಷಣೆ ಮಾಡಬೇಕು. ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆಯಬೇಕೆಂದು ಶಾಸಕ ಎಸ್.ಎನ್.ಚನ್ನಬಸಪ್ಪ ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸುರೇಖಾ ಮುರುಳಿಧರ್, ಜಿಲ್ಲಾ ಪ್ರಭಾರಿ ಗಿರೀಶ್ ಪಾಟೀಲ್‌, ನಗರಾಧ್ಯಕ್ಷ ಮೋಹನ್ ರೆಡ್ಡಿ,  ಮುಖಂಡರಾದ ಮಂಜುನಾಥ್‌, ನಾಗರಾಜ್‌ ಮುಂತಾದವರು ಉಪಸ್ಥಿತರಿದ್ದರು.

…………………………….
ಸಿದ್ದರಾಮಯ್ಯನವರು ನಿಗಮಕ್ಕೆ ಸಂಬಂಧಿಸಿದ ಸಚಿವರ ವಿರುದ್ಧ ಕ್ರಮಕೈಗೊಂಡಿಲ್ಲ. ಈ ಹಿಂದೆ ಸಚಿವರಾಗಿದ್ದ ಕೆ.ಎಸ್.ಈಶ್ವರಪ್ಪನವರ ಮೇಲೆ ಗುತ್ತಿಗೆದಾರರೊಬ್ಬರ ಆತ್ಮಹತ್ಯೆ ಸಂಬಂಧ ಕೇಳಿಬಂದ ಆರೋಪಕ್ಕೆ ಅವರ ರಾಜೀನಾಮೆ ಕೊಡುವವರಿಗೂ ಹೋರಾಟವನ್ನು ಮಾಡಿದ್ದ ಸಿದ್ದರಾಮಯ್ಯನವರು ಈಗ ಬಾಯಿ ಮುಚ್ಚಿಕೊಂಡಿರುವುದು ಏನನ್ನು ಸೂಚಿಸುತ್ತದೆ. ಈಶ್ವರಪ್ಪನವರಿಗೊಂದು ನ್ಯಾಯ, ಸಿದ್ದರಾಮಯ್ಯನವರಿಗೊಂದು ನ್ಯಾಯವೇ?

– ಎಸ್.‌ ಎನ್.‌ ಚನ್ನಬಸಪ್ಪ, ಶಾಸಕ