Wednesday, September 18, 2024
Google search engine
Homeಅಂಕಣಗಳುಲೇಖನಗಳುಬಿಜೆಪಿ ನಾಯಕರ ‘ಪರಿವರ್ತನೆ’ ಯಾವಾಗ?

ಬಿಜೆಪಿ ನಾಯಕರ ‘ಪರಿವರ್ತನೆ’ ಯಾವಾಗ?

ಬಿಜೆಪಿ ಈ ಹಿಂದೆ ಆಡಳಿತದಲ್ಲಿ ಇದ್ದಾಗ ಮಾಡಿದ ಅಕ್ರಮಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ -ಇದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೆಲವು ದಿನಗಳ ಹಿಂದೆ ನೀಡಿದ ಹೇಳಿಕೆ. ‘ಬಿಜೆಪಿಯವರು ಮಾಡಿದ ಅನ್ಯಾಯವನ್ನು ರಾಜ್ಯದ ಜನರು ಮರೆತಿಲ್ಲ’-ಇದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆ.
ಹಾಗಾದರೆ ಬಿಜೆಪಿಯವರು ಮಾಡಿದ ಅನ್ಯಾಯಗಳೇನು? ಅವರು ಆತ್ಮಾವಲೋಕನ ಏಕೆ ಮಾಡಿಕೊಳ್ಳಬೇಕು? ೨೦೦೮ ರಿಂದ ಐದು ವರ್ಷಗಳ ಘಟನಾವಳಿಗಳನ್ನು ನೆನಪಿಸಿಕೊಂಡರೆ ಉತ್ತರ ದೊರೆಯುತ್ತದೆ.
ಬಿಜೆಪಿ ನಾಯಕರು ಪರಸ್ಪರ ಕಚ್ಚಾಡಿದರು. ಪಕ್ಷವು ಮೂರು ಹೋಳಾಯಿತು. ಇದು ರಾಜಕಾರಣದ ಒಂದು ಭಾಗವೆಂದಾದರೆ ಇದನ್ನೂ ಮೀರಿದ ಅವಾಂತರಗಳು, ಅನಾಹುತಗಳು ನಡೆದವು. ನಾನಾ ರೀತಿಯ ಹಗರಣಗಳಲ್ಲಿ ಮಾಜಿ ಮುಖ್ಯಮಂತ್ರಿಗಳು, ಮಂತ್ರಿಗಳು ಸಾಲು ಸಾಲಾಗಿ ಜೈಲಿಗೆ ಹೋಗಿ ಬಂದರು. ಶಾಸಕರೊಬ್ಬರು ಲಂಚ ಸ್ವೀಕರಿಸುವಾಗ ರೆಡ್‌ಹ್ಯಾಂಡ್ ಆಗಿ ಸಿಕ್ಕಿಕೊಂಡರು. ಉಪಮುಖ್ಯಮಂತ್ರಿಯೊಬ್ಬರ ಮನೆಯಲ್ಲಿ ದುಡ್ಡು ಎಣಿಸುವ ಯಂತ್ರವೂ ಸಿಕ್ಕಿತು. ಕೆಲವರು ಲೈಂಗಿಕ ಹಗರಣಗಳಲ್ಲೂ ಸಿಲುಕಿಕೊಂಡರು.
ಬಂಡಾಯ ಶಾಸಕರನ್ನು ಅನರ್ಹಗೊಳಿಸಿ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸುವಾಗ ದೊಡ್ಡ ದಾಂಧಲೆಯೇ ನಡೆಯಿತು. ಅದನ್ನು ನಿಯಂತ್ರಿಸಲು ಪೊಲೀಸರು ಸದನಕ್ಕೆ ನುಗ್ಗಿದರು. ಬಂಡಾಯ ಶಾಸಕರ ಅನರ್ಹತೆಯನ್ನು ಸುಪ್ರೀಂ ಕೋರ್ಟ್ ಅಸಿಂಧುಗೊಳಿಸಿದಾಗ ಅದೇ ಶಾಸಕರೊಂದಿಗೆ ಅಧಿಕಾರವನ್ನು ಮುಂದುವರೆಸಿದ ಅನೈತಿಕ ರಾಜಕಾರಣವೂ ನಡೆಯಿತು. ಒಟ್ಟಿನಲ್ಲಿ ರಾಜ್ಯದ ರಾಜಕಾರಣ ಮತ್ತು ಆಡಳಿತ ಅಧೋಗತಿಗೆ ಇಳಿಯಿತು. ದೇಶದ ಮುಂದೆ ಕರ್ನಾಟಕ ತಲೆ ತಗ್ಗಿಸುವಂತಾಯಿತು.
ಬಿಜೆಪಿಯವರು ದೇಶ ಪ್ರೇಮಿಗಳು. ನೇಮ- ನಿಷ್ಠೆಯಿಂದ ಆಡಳಿತ ನಡೆಸುತ್ತಾರೆ.ತಮ್ಮ ನೆರಳಿಗೆ ಅಂಜಿ ನಡೆಯುತ್ತಾರೆ. ಎಂಬ ಭರವಸೆಯೊಂದಿಗೆ ಜನರು ಅಧಿಕಾರ ನೀಡಿದ್ದರು.ಆದರೆ ಜನರಿಗೆ ಭ್ರಮ ನಿರಸನ ಮಾಡಿದ್ದೇ ದೊಡ್ಡ ಸಾಧನೆಯಾಯಿತು.
ತೊಂಭತ್ತರ ದಶಕದ ನಂತರದ ಬಿಜೆಪಿಯ ನಾಗಾಲೋಟದಲ್ಲಿ ಗಣನೀಯ ಸಂಖ್ಯೆಯಲ್ಲಿ ಶಾಸಕರು ಆಯ್ಕೆಯಾದರು. ಆಗ ಅವರು ಭರವಸೆ ಮೂಡಿಸುವ ನಾಯಕರಂತೆ ಕಂಡು ಬಂದರು. ಆದರೆ ಈಗ ಅವರಲ್ಲಿ ಅನೇಕ ಮಂದಿ ಅಧಿಕಾರದೊಂದಿಗೆ ಬರುವ ಸಕಲ ರೋಗಗಳನ್ನೂ ಅಂಟಿಸಿಕೊಂಡಿರುವ, ಗನ್ ಮ್ಯಾನ್‌ಗಳ ರಕ್ಷಣೆಯಲ್ಲಿರುವ ನಾಯಕರು. ಪಶ್ಚಾತ್ತಾಪವಾಗಲೀ, ಆತ್ಮಾವಲೋಕನವಾಗಲೀ ಯಾವುದರ ಲಕ್ಷಣವೂ ಕಾಣಿಸುತ್ತಿಲ್ಲ. ‘ಲೆಕ್ಕ ಚುಕ್ತಾ ಮಾಡುವುದು ಇನ್ನೂ ಬಾಕಿಯಿದೆ’ ಎಂದು ಅವರಿಗೆ ಅನ್ನಿಸುತ್ತಿಲ್ಲ. ‘ಜನರು ನಮಗೆ ಒಮ್ಮೆ ಶಿಕ್ಷೆ ಕೊಟ್ಟು ಮರೆತು ಬಿಟ್ಟಿದ್ದಾರೆ.ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ’ ಅಂದು ಕೊಂಡಿದ್ದಾರೆ.
ಆದರೆ ಒಮ್ಮೆ ಮಾಡಿದ ತಪ್ಪಿಗೆ ಎರಡೆರಡು ಬಾರಿ ಶಿಕ್ಷೆ ನೀಡಿದ ಉದಾಹರಣೆಯೂ ಇದೆ. ಗುಂಡೂರಾವ್ ದುರಾಡಳಿತದಿಂದಾಗಿ ೧೯೮೩ ಮತ್ತು ೧೯೮೫ ಹೀಗೆ ಎರಡು ಬಾರಿ ರಾಜ್ಯ ಕಾಂಗ್ರೆಸ್ ನಾಯಕರಿಗೆ ಸೋಲಿನ ರುಚಿ ತೋರಿಸಿದ್ದರು. ೧೯೮೯ ರಲ್ಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ವೀರೇಂದ್ರ ಪಾಟೀಲ್ ‘ನಮಗೆ ಎರಡು ಬಾರಿ ಶಿಕ್ಷೆ ನೀಡಿದ್ದೀರಿ. ಮತ್ತೆ ನಾವು ತಪ್ಪು ಮಾಡುವುದಿಲ್ಲ. ಕ್ಷಮಿಸಿ’ಎಂದು ಚುನಾವಣಾ ಭಾಷಣ ಮಾಡಬೇಕಾಯಿತು. ವೀರೇಂದ್ರ ಪಾಟೀಲರಿಗಾದರೆ ನೈತಿಕ ಸ್ಥೈರ್ಯವಿತ್ತು.
ರಾಜ್ಯ ಬಿಜೆಪಿ ನಾಯಕರು ಪರಿವರ್ತನಾ ಯಾತ್ರೆ ಆರಂಭಿಸುತ್ತಿದ್ದಾರೆ.ಆಡಳಿತದಲ್ಲಿ ಪರಿವರ್ತನೆ ತರುವುದು ಈ ಯಾತ್ರೆಯ ಉದ್ದೇಶ. ಆದರೆ ಸ್ವತಃ ಬಿಜೆಪಿ ನಾಯಕರ ‘ಪರಿವರ್ತನೆ’ ಯಾವಾಗ.
ಸಿ.ರುದ್ರಪ್ಪ…

RELATED ARTICLES
- Advertisment -
Google search engine

Most Popular

Recent Comments