ಬೆಂಗಳೂರು: ಚಿಕನ್, ಫಿಶ್ ಕಬಾಬ್ ಗಳಿಗೆ ಕೃತಕ ಬಣ್ಣ ಬಳಕೆಗೆ ರಾಜ್ಯ ಸರ್ಕಾರ ನಿಷೇಧ ಹೇರಿದೆ.
ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ಈ ಹಿಂದೆ ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ಮಾದರಿಯನ್ನು ಸಂಗ್ರಹಿಸಿದ್ದು, ಇವುಗಳಲ್ಲಿ ಬಳಸುವ ಕೃತಕ ಬಣ್ಣಗಳಲ್ಲಿ ಹಾನಿಕಾರಕ ರಾಸಾಯನಿಕ ಇರುವುದು ಪತ್ತೆಯಾಗಿತ್ತು. ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ಮಾದರಿಯನ್ನ FSSAI ಸಂಗ್ರಹಿಸಿದ್ದು, ರಾಜ್ಯಾದ್ಯಂತ 170ಕ್ಕೂ ಹೆಚ್ಚು ಕಡೆ ಗೋಬಿ ಮಾದರಿ ಟೆಸ್ಟ್ ಮಾಡಲಾಗಿದೆ. ಟೆಸ್ಟಿಂಗ್ ವೇಳೆ ಕೃತಕ ಬಣ್ಣಗಳಲ್ಲಿ ಕ್ಯಾನ್ಸರ್ ಕಾರಕ ರಾಸಾಯನಿಕ ಇರೋದು ಪತ್ತೆಯಾಗಿತ್ತು.
ಕಾಟನ್ ಕ್ಯಾಂಡಿಯಲ್ಲಿ ಹಾನಿಕಾರಕ ರೋಡಮೈನ್-ಬಿ ರಾಸಾಯನಿಕ ಅಂಶ ಪತ್ತೆಯಾಗಿದ್ರೆ, ಇತ್ತ ಗೋಬಿ ಮಂಚೂರಿಯಲ್ಲಿ ಸನ್‌ಸೆಟ್ ಯೆಲ್ಲೊ ಬಣ್ಣ ಮತ್ತು ಟಾಟ್ರ್ರಾಜಿನ್ ಪತ್ತೆಯಾಗಿದೆ. ಕಾಟನ್ ಕ್ಯಾಂಡಿಯಲ್ಲಿ ಹಾನಿಕಾರಕ ‘ರೋಡಮೈನ್-ಬಿ’ ಹಾಗೂ ಗೋಬಿ ಮಂಚೂರಿಯಲ್ಲಿ’ಸನ್‌ಸೆಟ್ ಯೆಲ್ಲೊ’ ಬಣ್ಣ ಮತ್ತು ‘ಟಾಟ್ರ್ರಾಜಿನ್’ ರಾಸಾಯನಿಕ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ಕಲರ್ ಬಳಕೆಯನ್ನು ನಿಷೇಧಿಸಿದೆ.
ವೆಜ್/ಚಿಕನ್/ಫಿಶ್ ಕಬಾಬ್ ತಯಾರಿಕೆಯಲ್ಲಿ ಕೃತಕ ಬಣ್ಣಗಳ ಬಳಕೆ ಮಾಡಲಾಗುತ್ತಿರುವುದು ಪ್ರಯೋಗಾಲಯಗಳ ಮೂಲಕ ನಡೆಸಲಾದ ಪರೀಕ್ಷೆಯಿಂದ ದೃಢಪಟ್ಟಿದೆ. ಈ ಕೃತಕ ಬಣ್ಣಗಳು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವೆಜ್/ಚಿಕನ್/ಫಿಶ್ ಕಬಾಬ್ ತಯಾರಿಕೆ ವೇಳೆ ಕೃತಕ ಬಣ್ಣ ಬಳಕೆಯನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ ಎಂದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಉಲ್ಲಂಘನೆಯ ಪ್ರಕರಣಗಳು ಕಂಡುಬಂದಲ್ಲಿ ತಯಾರಿಸುವವರ ಮೇಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ನಿಯಮ 59ರಡಿ 7 ವರ್ಷಗಳಿಂದ ಜೀವಾವಧಿ ಅವಧಿಯವರೆಗೆ ಜೈಲು ಶಿಕ್ಷೆಯನ್ನು ಮತ್ತು ರೂ.10.00 ಲಕ್ಷಗಳವರೆಗೆ ದಂಡವನ್ನು ವಿಧಿಸಲು ನ್ಯಾಯಾಲಯದಲ್ಲಿ ಮೊಕದ್ದಮೆಗಳನ್ನು ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.