Tuesday, November 5, 2024
Google search engine
Homeಇ-ಪತ್ರಿಕೆಅಜೀಂ ಪ್ರೇಮ್ ಜೀ ಫೌಂಡೇಶನ್ ಸಹಭಾಗಿತ್ವ: ಶಾಲಾ ಮಕ್ಕಳಿಗೆ 4 ದಿನ ಮೊಟ್ಟೆ; 6 ದಿನ...

ಅಜೀಂ ಪ್ರೇಮ್ ಜೀ ಫೌಂಡೇಶನ್ ಸಹಭಾಗಿತ್ವ: ಶಾಲಾ ಮಕ್ಕಳಿಗೆ 4 ದಿನ ಮೊಟ್ಟೆ; 6 ದಿನ ಪೂರಕ ಪೌಷ್ಟಿಕ ಆಹಾರ

ಬೆಂಗಳೂರು: ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿನ ಎಲ್ಲಾ ಮಕ್ಕಳಿಗೂ ಮುಂದಿನ ಮೂರು ವರ್ಷಗಳವರೆಗೆ ವಾರದ ನಾಲ್ಕು ದಿನಗಳ ಕಾಲ ಉಚಿತ ಮೊಟ್ಟೆ ನೀಡಲು ಅಜೀಂ ಪ್ರೇಮ್ಜಿ ಫೌಂಡೇಶನ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿಂದು ಅಜೀಂ ಪ್ರೇಮ್ಜಿ ಫೌಂಡೇಶನ್ ಸಹಭಾಗಿತ್ವದಲ್ಲಿ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮಕ್ಕಳಿಗೆ ವಾರದಲ್ಲಿ ಆರು ದಿನ ಪೂರಕ ಪೌಷ್ಟಿಕ ಆಹಾರ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಜೀಂಪ್ರೇಮ್ಜಿ ಯವರು  1,500 ಕೋಟಿ ರೂ. ವೆಚ್ಚದಲ್ಲಿ ನಾಲ್ಕು ದಿನಗಳ ಕಾಲವೂ ಮಕ್ಕಳಿಗೆ ಉಚಿತವಾಗಿ ಮೊಟ್ಟೆ ನೀಡಲು ಮುಂದೆ ಬಂದಿದ್ದಾರೆ. ಇದರಿಂದ ರಾಜ್ಯದ 55 ಲಕ್ಷ ಮಕ್ಕಳಿಗೆ ಅನುಕೂಲವಾಗಲಿದೆ. ಮಕ್ಕಳ ಮಾನಸಿಕ ಆರೋಗ್ಯ ಮತ್ತು ಉತ್ತಮ ಶಿಕ್ಷಣಕ್ಕೆ ಗುಣಮಟ್ಟದ ಆಹಾರ ಅತ್ಯಗತ್ಯ. ಬಡವರ ಮಕ್ಕಳಿಗೆ ಉತ್ತಮ ಶಿಕ್ಷಣದ ಅವಕಾಶಗಳನ್ನು ಸೃಷ್ಟಿಸುವುದು ನಮ್ಮ ಆಶಯವಾಗಿದೆ ಎಂದರು.

ಅನೇಕ ಕಡೆಗಳಲ್ಲಿ ಮಕ್ಕಳು ಹಲವು ಕಾರಣಗಳಿಂದ ಬೆಳಗ್ಗೆ ತಿಂಡಿ ತಿನ್ನದೆ ಶಾಲೆಗೆ ಬರುವುದನ್ನು ನಾನು ನೋಡಿದ್ದೇನೆ. ಅಂತಹ ಮಕ್ಕಳು ಮಧ್ಯಾಹ್ನದವರೆಗೆ ಊಟವಿಲ್ಲದೆ ಉಪವಾಸ ಇರುತ್ತಾರೆ. ಹೊಟ್ಟೆ ಹಸಿದುಕೊಂಡು ತರಗತಿಯಲ್ಲಿ ಕುಳಿತು ಪಾಠ ಕೇಳುವುದು ಕಷ್ಟ. ಹೀಗಾಗಿ ವಾರದಲ್ಲಿ ಎರಡು ದಿನ ಊಟ ಮತ್ತು ಮೊಟ್ಟೆ ನೀಡಲು ನಮ್ಮ ಸರ್ಕಾರ ನಿರ್ಧರಿಸಿತು ಎಂದರು.

ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ, ವಿಪ್ರೋ ಅಧ್ಯಕ್ಷ ಅಜೀಂ ಪ್ರೇಮ್ಜಿ ದಂಪತಿ, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್. ಅತೀಕ್ ಅಹಮದ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಖಾತರಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಮೆಹರೂಜ್ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular

Recent Comments