ರಾಜ್ಯ ಸರ್ಕಾರ ಭ್ರಷ್ಟರನ್ನು ಪೋಷಿಸುತ್ತಿದೆ : ಓಬಿಸಿ ಮೋರ್ಚಾ ಸಭೆಯಲ್ಲಿ ಆಯನೂರು ಆರೋಪ

ಶಿವಮೊಗ್ಗ : ರಾಜ್ಯ ಸರ್ಕಾರ ಭ್ರಷ್ಟಾಚಾರವನ್ನು ಪೋಷಿಸುತ್ತಿದೆ ಎಂದು ಮಾಜಿ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಆರೋಪಿಸಿದರು.
ಇಂದು ನಗರದ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಓಬಿಸಿ ಮೋರ್ಚಾದ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ಧರಾಮಯ್ಯ ತಮ್ಮ ಸಚಿವ ಸಂಪುಟದಲ್ಲಿನ ಭ್ರಷ್ಟ ಸಚಿವರನ್ನು ರಕ್ಷಣೆ ಮಾಡುವ ಮೂಲಕ ಭ್ರಷ್ಟಾಚಾರವನ್ನು ಪೋಷಿಸುತ್ತಿದ್ದಾರೆ ಎಂದು ದೂರಿದರು.
ಹಿಂದುಳಿದ ವರ್ಗದ ನಾಯಕರೆಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ಆ ವರ್ಗದ ಜನತೆಗೆ ಯಾವುದೇ ಕಾರ್ಯಕ್ರಮವನ್ನು ರೂಪಿಸುತ್ತಿಲ್ಲ. ಬದಲಾಗಿ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ಇಂದಿರಾ ಕ್ಯಾಂಟೀನ್‌ನಲ್ಲಿ ಈಗಾಗಲೇ ಭ್ರಷ್ಟಾಚಾರದ ವಾಸನೆ ಆರಂಭವಾಗಿದೆ. ಯಾವುದೇ ಪೂರ್ವ ತಯಾರಿ ಇಲ್ಲದೆ ತರಾತುರಿಯಲ್ಲಿ ಇದನ್ನು ಆರಂಭಿಸಿದ್ದಾರೆ. ಕಡು ಬಡವರು,ಕೂಲಿ ಕಾರ್ಮಿಕರು ಈ ಕ್ಯಾಂಟೀನ್‌ನಲ್ಲಿ ಊಟ, ಉಪಹಾರ ಸೇವಿಸುತ್ತಾರೆ. ಆದರೆ ಇಲ್ಲಿ ಸ್ವಚ್ಛತೆ ಎಂಬುದೇ ಇಲ್ಲವಾಗಿದೆ. ಗಣ್ಯರು ಬಂದಾಗ ಸಿಗುವಂತಹ ಸೇವೆ ಈ ಕ್ಯಾಂಟೀನ್‌ನಲ್ಲಿ ಬಡವರಿಗೆ ಸಿಗುತ್ತಿಲ್ಲ ಎಂದರು.
ರಾಜ್ಯದ ಮುಖ್ಯಮಂತ್ರಿಯಾಗಿ ೬.೫ ಕೋಟಿ ಜನರ ಪ್ರತಿನಿಧಿಯಾಗಿ ಸಭೆ, ಸಮಾರಂಭಗಳಲ್ಲಿ ಮೈಕ್ ಮುಂದೆ ಅತ್ಯಂತ ಗಂಭೀರತೆಯಿಂದ ಮಾತನಾಡಬೇಕು. ಆದರೆ ಸಿದ್ಧರಾಮಯ್ಯ ಅವರು, ಯಕ್ಷಗಾನದ ಕಲಾವಿದನಂತೆ ದುರಹಂಕಾರದಿಂದ ಮಾತನಾಡುತ್ತಿದ್ದಾರೆ. ಯಾವುದೇ ಗಂಭೀರತೆ ಇಲ್ಲವಾಗಿದೆ ಎಂದು ಟೀಕಿಸಿದರು.
ಕಾರ್ಯಕ್ರಮದಲ್ಲಿ ಓಬಿಸಿ ಮೋರ್ಚಾದ ಅಧ್ಯಕ್ಷ ಕೆ.ಎಸ್.ಅರುಣ್ ಕುಮಾರ್, ಎಸ್.ಎನ್.ಚನ್ನಬಸಪ್ಪ, ಹಾಲಪ್ಪ, ಸತೀಶ್ ಮೊದಲಾದವರಿದ್ದರು.