ಶಿವಮೊಗ್ಗ: ತುಂಗಾ ಏತ ನೀರಾವರಿ ಯೋಜನೆ ಅಡಿಯಲ್ಲಿ ಗೌಡನಕೆರೆಯಿಂದ ಮುಂದೆ ಹಾದು ಹೋಗಲಿರುವ ಕೆರೆಗಳ ಫೀಡರ್ ಲೈನ್ ಕಾಮಗಾರಿ ನಡೆಸದೇ ಭ್ರಷ್ಟಾಚಾರ ಎಸಗಲಾಗಿದೆ. ಈ ಬಗ್ಗೆ ಗ್ರಾಮಾಂತರ ಶಾಸಕರು ಸ್ಥಳ ತನಿಖೆಗೆ ಬಂದರೆ ತಾವು ಸಿದ್ಧ ಎಂದು ರಾಜ್ಯಸಭೆ ಮಾಜಿ ಸದಸ್ಯ ಆಯನೂರು ಮಂಜುನಾಥ ಸವಾಲು ಹಾಕಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊನೆಗೂ ಶಾಸಕರು ತಮ್ಮ ದಿವ್ಯ ಮೌನ ಮುರಿದಿದ್ದಾರೆ. ಆದರೆ ಹೇಳಬೇಕಾದ ಸಂಗತಿ ಬಿಟ್ಟು ಬೇರೆಲ್ಲದರ ಬಗ್ಗೆ ಮಾತನಾಡಿದ್ದಾರೆ. ಸಣ್ಣ ನೀರಾವರಿ ಇಲಾಖೆಯಿಂದ ಫೀಡರ್ ಲೈನ್ ದುರಸ್ಥಿ ಹೆಸರಲ್ಲಿ ಕಾಮಗಾರಿಗಳನ್ನು ಮಾಡದೆಯೇ ಹಣ ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ಮಾಧ್ಯಮದವರೊಂದಿಗೆ ನಾನು ಬರಲು ಸಿದ್ಧ. ಗ್ರಾಮಾಂತರ ಶಾಸಕರು ಬಂದು ಕಾಮಗಾರಿ ಆಗಿರುವುದನ್ನು ತೋರಿಸಲಿ ಎಂದು ಸವಾಲು ಹಾಕಿದರು.
ತುಂಗಾ ಏತ ನೀರಾವರಿ ಕೆರೆಯಿಂದ ಕೆರೆಗೆ ನೀರು ಹರಿಸುವ ಯೋಜನೆ. ಆಯನೂರಿನ ಗೌಡನಕೆರೆಗೆ ಬಿದ್ದ ನೀರು ನಂತರ ಸೌಳಂಗವರೆಗೆ ಹರಿಯುತ್ತದೆ. ಹಾಗಾಗಿ ಸಣ್ಣ ನೀರಾವರಿ ಇಲಾಖೆಯಿಂದ ೧.೪೪ ಕೋಟಿ ರೂ.ಗಳ ಕಾಮಗಾರಿ ಮಂಜೂರು ಮಾಡಲಾಗಿತ್ತು. ಈಗಾಗಲೇ ಶೇ.೯೦ ರಷ್ಟು ಬಿಲ್, ಅಂದರೆ ೧.೦೮ ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಶಾಸಕರು ಇದನ್ನು ಪ್ರಸ್ತಾಪ ಮಾಡಲು ಸಿದ್ಧರಿಲ್ಲ ಎಂದು ದೂರಿದರು.
ಇನ್ನು ಜಿಲ್ಲೆಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆಂದೇ ೧೨೭.೪೮ ಕೋಟಿ ರೂ. ಬಿಡುಗಡೆ ಆಗಿದೆ. ಇದರಲ್ಲಿ ಕೇಂದ್ರ ಸರ್ಕಾರ ಶೇ. ೫೦ ರಷ್ಟು ಹಣವನ್ನು ಭರಿಸುತ್ತಿದೆ. ೩ ವರ್ಷದಿಂದ ಬರಗಾಲ ಕಾಡುತ್ತಿದ್ದರೂ ಈ ಕಾಮಗಾರಿಗಳ ಆರಂಭಕ್ಕೆ ಶಾಸಕರು ಮನಸ್ಸು ಮಾಡುತ್ತಿಲ್ಲ ಎಂದು ಆರೋಪಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್.ರುದ್ರೇಗೌಡ, ಪ್ರಮುಖರಾದ ದೇವದಾಸ ನಾಯ್ಕ್, ಅಶೋಕ್ ನಾಯ್ಕ್, ವಿರೂಪಾಕ್ಷಪ್ಪ, ಮಧುಸೂದನ್, ರತ್ನಾಕರ ಶೆಣೈ, ಎಂ.ಶಂಕರ್, ಬಸವರಾಜಪ್ಪ ಸುದ್ದಿಗೋಷ್ಟಿಯಲ್ಲಿದ್ದರು.