ಅಯನೂರು ಗೆಲುವನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ: ಎಂ. ರಮೇಶ್ ಶೆಟ್ಟಿ

ಶಿವಮೊಗ್ಗ: ಕೊಡಗು ಹೊರತುಪಡಿಸಿ ಎಲ್ಲ ಕಡೆ ಪ್ರವಾಸ ಮಾಡಿದ್ದೇನೆ. ಎಲ್ಲ ಕಡೆ ಬೆಂಬಲವಿದೆ. ೪೦ ವರ್ಷಗಳ ಇತಿಹಾಸದಲ್ಲೇ ನಮ್ಮ ಪಕ್ಷವು ಈ ಕ್ಷೇತ್ರದ ಗೆಲುವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಈಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ನಮ್ಮ ಭೂತ್ ನಮ್ಮ ಜವಾಬ್ದಾರಿ ಎಂಬ ಚುನಾವಣಾ ಪ್ರಚಾರ ತಂತ್ರದಂತೆ ಮತದಾರರನ್ನು ಮನೆ ಮನೆ ಭೇಟಿ ಮಾಡಿದ್ದೇವೆ. ಈ ಭಾಗದ ೧೪ ಶಾಸಕರು ಕೂಡ ಇದನ್ನು ಗಂಭೀರವಾಗಿ ತೆಗೆದುಕೊಂಡು ಕೆಲಸ ಮಾಡುತ್ತಿರುವುದರಿಂದ ಜಯ ನಿಶ್ಚಿತ ಎಂದು ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಕೆಪಿಸಿಸಿ ಉಸ್ತುವಾರಿ ರಮೇಶ್ ಶೆಟ್ಟಿ ಹೇಳಿದ್ದಾರೆ.

ಶನಿವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಚುನಾವಣಾ ಕಣದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಜೊತೆಗೆ ನಾನು ಪ್ರವಾಸ ಮಾಡಿದ್ದೇನೆ. ಈ ಹಿಂದೆ ಜಯಗಳಿಸಿದ್ದ ಅಭ್ಯರ್ಥಿ ಕುರಿತು ಮತದಾರರು ಭ್ರಮನಿರಶನಗೊಂಡಿದ್ದಾರೆ. ಇಲ್ಲಿ ಯಾವುದೇ ಮ್ಯಾಜಿಕ್ ನಡೆಯುವುದಿಲ್ಲ. ರಘುಪತಿ ಭಟ್ ಪಕ್ಷೇತರವಾಗಿ ಸ್ಪರ್ಧಿಸಿರುವುದರಿಂದ ಕರಾವಳಿಯಲ್ಲಿ ಸರ್ಜಿಯವರಿಗೆ ಯಾವುದೇ ಅಲೆ ಇಲ್ಲ. ಕೊರೋನಾ ಸಂದರ್ಭದಲ್ಲಿ ಸಾವಿರಾರು ರೋಗಿಗಳನ್ನು ರಕ್ಷಿಸಿದ ಸರ್ಜಿಯವರು ವೈದ್ಯಕೀಯ ಕ್ಷೇತ್ರದಲ್ಲೇ ಮುಂದುವರಿಯುವಂತೆ ಮಾಡಲು ಅವರನ್ನು ಸೋಲಿಸಬೇಕಿದೆ. ಅಯನೂರು ಅವರು ಸದನದಲ್ಲಿ ವಿಶಿಷ್ಟ ಸಾಧನೆ ಮಾಡಿದ್ದಾರೆ. ಸರ್ಜಿಯವರು ಯಡಿಯೂರಪ್ಪನವರ ಕುಟುಂಬದವರು. ಇವರನ್ನು ಸೋಲಿಸಿ ಎಂದು ಈಶ್ವರಪ್ಪನವರೇ ಕರೆ ಕೊಡುತ್ತಿದ್ದಾರೆ. ಇವೆಲ್ಲಾ ಬೆಳವಣಿಗೆಗಳು ನಮ್ಮ ಪಕ್ಷದ ಅಭ್ಯರ್ಥಿಗಳು ಸುಲಭ ಜಯಗಳಿಸುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಮೇಶ್ ಇಕ್ಕೇರಿ, ಸಿ.ಎಸ್.ಚಂದ್ರಭೂಪಾಲ್, ಶಾಂತವೀರ ನಾಯ್ಕ್, ಜಿ.ಪದ್ಮನಾಭ್, ಜಿ.ಡಿ.ಮಂಜುನಾಥ್, ವಸಂತ್ ಕುಮಾರ್, ಸಿಜು ಪಾಶ ಮುಂತಾದವರು ಉಪಸ್ಥಿತರಿದ್ದರು.