ಕೆರೆ – ನಾಲೆಗಳ ದುರಸ್ಥಿ ನೆಪದಲ್ಲಿ ಶಾಸಕಿಯಿಂದ ಭ್ರಷ್ಟಾಚಾರ ಸುದ್ಧಿಗೋಷ್ಠಿಯಲ್ಲಿ ಆಯನೂರು ಮಂಜುನಾಥ್ ಆರೋಪ

ಶಿವಮೊಗ್ಗ: ಕೆರೆಗಳ ನಾಲೆಗಳ ದುರಸ್ಥಿ ನೆಪದಲ್ಲಿ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ್ ಕೋಟ್ಯಂತರ ರೂ. ಭ್ರಷ್ಟಾಚಾರ ನಡೆಸಿದ್ದಾರೆ ಎಂದು ರಾಜ್ಯಸಭಾ ಮಾಜಿ ಸದಸ್ಯ ಆಯನೂರು ಮಂಜುನಾಥ್ ಆರೋಪಿಸಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ ಅವರು, ತುಂಗಾ ಏತ ನೀರಾವರಿ ಯೋಜನೆ ಅಂತಿಮ ಹಂತಕ್ಕೆ ಬಂದು ತಲುಪಿದೆ. ಆಯನೂರು ಸಮೀಪ ಗೌಡನಕೆರೆಗೆ ಬೀಳುವ ನೀರು ನಂತರ ಸುಮಾರು ೩೦ ಕೆರೆಗಳಿಗೆ ಹರಿಯಲಿದೆ. ಈ ಕೆರೆಗಳಿಗೆ ನೀರು ಹರಿಯುವ ಚಾನಲ್ ದುರಸ್ಥಿ ನೆಪದಲ್ಲಿ ೧.೭೮ ಕೋಟಿ ರೂ. ಕಾಮಗಾರಿ ನಡೆಸಲಾಗಿದೆ. ಆದರೆ ಎಲ್ಲಿಯೂ ಕಾಮಗಾರಿಯನ್ನೇ ಮಾಡದೇ ಬಿಲ್ ಪಡೆದು ಕೊಳ್ಳಲಾಗಿದೆ ಎಂದು ದೂರಿದರು.
೨೬ ಕೆರೆಗಳ ಕಾಮಗಾರಿ ಮಾಡಿರುವುದಾಗಿ ತೋರಿಸಲಾಗಿದೆ. ಒಂದೊಂದು ಕೆರೆಗೆ ೧.೫ ಲಕ್ಷದಿಂದ ೭ ಲಕ್ಷ ರೂ.ವರೆಗೆ ಮೊತ್ತ ತೋರಿಸಲಾ ಗಿದೆ. ಇದನ್ನು ಬೆಂಗಳೂರಿನ ಶಿವಾರಾವ್ ಎಂಬುವವರು ಟೆಂಡರ್ ಪಡೆದುಕೊಂಡಿದ್ದಾರೆ. ವಾಸ್ತವದಲ್ಲಿ ಆ ವ್ಯಕ್ತಿ ಇಲ್ಲಿಗೇ ಬಂದೇ ಇಲ್ಲ. ಶಾಸಕರು ತಮ್ಮ ಚೇಲಾಗಳ ಕಡೆಯಿಂದ ಉಪ ಗುತ್ತಿಗೆ ಕಾಮಗಾರಿ ತೋರಿಸಿ ಬಿಲ್ ಮಾಡಿಸಿ ದ್ದಾರೆ. ಇದರಲ್ಲಿ ಅಧಿಕಾರಿಗಳೂ ಶಾಮೀಲಾಗಿ ದ್ದಾರೆ. ಇದರ ಬಗ್ಗೆ ಸಮಗ್ರ ತನಿಖೆಯಾಗಲಿ ಎಂದರು.
ಇದೇ ರೀತಿ ಬೂದಿಗೆರೆ ಏತ ನೀರಾವರಿ ಹೋರಾಟ ಯೋಜನೆಯಲ್ಲಿಯೂ ಭ್ರಷ್ಟಾಚಾರ ನಡೆದಿದೆ. ಡಿ.ಹೆಚ್.ಶಂಕರಮೂರ್ತಿ ಅವರು ಯೋಜನೆಯ ರೂವಾರಿಗಳು. ಆಗ ೬.೨೦ ಕೋಟಿ ರೂ.ಗಳಿಗೆ ಕಾಮಗಾರಿ ಆರಂಭವಾಗಿತ್ತು. ಈಗಲೂ ಇದು ಮುಗಿದಿಲ್ಲ. ಸಚಿವರಾದ ಕಾಗೋಡು ತಿಮ್ಮಪ್ಪ, ಟಿ.ಬಿ.ಜಯಚಂದ್ರ, ಹಿರಿಯ ಇಂಜಿನಿಯರ್ ಸ್ಥಳ ಪರಿಶೀಲನೆ ಮಾಡಿದ್ದಾರೆ. ಈಗ ಕಾಮಗಾರಿ ಮೊತ್ತ ೧೫ ಕೋಟಿ ರೂ.ಗೆ ಏರಿಕೆ ಆಗಿದೆ. ನೀರೆತ್ತುವ ಸ್ಥಳ ದಲ್ಲೇ ಪೈಪ್ ಕಿತ್ತು ಹೋಗುತ್ತಿದೆ. ಅವುಗಳ ಜೋಡಣೆಯೇ ಆಗಿಲ್ಲ. ಇದರ ಬಗ್ಗೆ ಶಾಸಕರು ಮಾತೇ ಆಡುತ್ತಿಲ್ಲ. ಎರಡೂ ಯೋಜನೆಗಳು ಚಾಲನೆಗೊಳ್ಳದಿರಲು ಶಾಸಕರೇ ಕಾರಣ ಎಂದು ದೂರಿದರು.
ಎರಡೂ ನೀರಾವರಿ ಯೋಜನೆಗಳು ಶಾಸಕರ ಸ್ವಾರ್ಥಕ್ಕೆ ಬಳಕೆಯಾಗಿವೆ. ಮುಂದಿನ ಚುನಾವಣೆಗೆ ಆದಾಯ ಸಂಗ್ರಹಣೆ ಮಾಡಿದ್ದಾರೆ. ಸ್ವಂತ ಸುಖದ ರಾಜಕಾರಣಕ್ಕೆ ಹತ್ತಾರು ಸಾವಿರ ರೈತರು ಬಲಿಯಾಗಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದರು.