ಶಿವಮೊಗ್ಗ: ಅಪರೂಪದ ರಾಜಕಾರಣಿ ಮೇದಾವಿ ಪಕ್ಷಾತೀತ ವ್ಯಕ್ತಿ ಮಾಜಿ ವಿಧಾನಸಭಾ ಅಧ್ಯಕ್ಷ ಕಾಗೋಡು ತಿಮ್ಮಪ್ಪ ಅವರಿಗೆ ಗೌರವ ಡಾಕ್ಟರೇಟ್ ನೀಡಬೇಕು ಎಂದು ಅಖಿಲ ಕರ್ನಾಟಕ ಡಿ.ಕೆ.ಶಿವಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಆರ್.ಮೋಹನ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಗೋಡು ತಿಮ್ಮಪ್ಪ ಅವರು ಉಳುವವನೇ ಹೊಲದೊಡೆಯ ವಾಸಿಸುವವನೇ ಮನೆಯೊಡೆಯ ಎಂಬ ಕಾಯ್ದೆ ಸೇರಿದಂತೆ ವಿವಿಧ ಜನಪರ ಕಾರ್ಯಗಳ ಮೂಲಕ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹಿರಿಯ ಸಮಾಜವಾದಿಯಾಗಿದ್ದು, ಪ್ರಗತಿಪರ ಚಿಂತಕರಾಗಿದ್ದಾರೆ. ಇವರಿಗೆ ಗೌರವ ಡಾಕ್ಟರೇಟ್ ನೀಡುವುದು ನಮ್ಮ ಹೆಮ್ಮೆಯಾಗಿದೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಸಚಿವರು ಈ ಬಗ್ಗೆ ಗಮನಹರಿಸಬೇಕು ಎಂದು ಮನವಿ ಮಾಡಿದರು.
ಕಾಗೋಡು ತಿಮ್ಮಪ್ಪನವರು ಪ್ರಮುಖವಾಗಿ ಕೃಷಿ ಮತ್ತು ತೋಟಗಾರಿಕೆ ವಿವಿಯ ಹೊಸ ಕ್ಯಾಂಪಸ್ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸಾಗರದ ಬಳಿ ಇರುವ ಇರಮಕ್ಕಿಯಲ್ಲಿ ಸುಮಾರು ೮೦೦ ಎಕರೆ ಕಂದಾಯ ಭೂಮಿಯನ್ನು ತೋರಿಸಿ ಮತ್ತು ವಿವಿ ಹೊಸ ಕಟ್ಟಡ ಸ್ಥಾಪನೆಗೆ ಶ್ರಮಿಸಿದ್ದಾರೆ. ಕೃಷಿ ಮತ್ತು ತೋಟಗಾರಿಕೆ ವಿವಿಯೇ ಇವರಿಗೆ ಗೌರವ ಡಾಕ್ಟರೇಟ್ ನೀಡಿದರೆ ಹೆಚ್ಚು ಅರ್ಥಗರ್ಭಿತವಾಗಿರುತ್ತದೆ ಎಂದರು.
ಕಾಗೋಡು ತಿಮ್ಮಪ್ಪನವರು ಪಕ್ಷಾತೀತವಾಗಿದ್ದರು. ರೈತರ ಬದುಕು ಮತ್ತು ಅವರ ಭದ್ರತೆಗೆ ಶ್ರಮಿಸಿದ್ದವರು. ಮೆಗ್ಗಾನ್ ಆಸ್ಪತ್ರೆಯ ಉನ್ನತಿಕರಣಕ್ಕೆ ಅವರ ಕೊಡುಗೆ ಇದೆ. ಅನೇಕ ಭೂ ವಿವಾದಗಳನ್ನು ಅವರು ಬಗೆಹರಿಸಿದ್ದಾರೆ. ಸಾಮಾಜಿಕ ಕ್ಷೇತ್ರದಲ್ಲಿಯೂ ಹೆಸರು ಮಾಡಿದ್ದಾರೆ. ವಿಧಾನಸಭಾಧ್ಯಕ್ಷರಾಗಿದ್ದಾಗ ಎಲ್ಲಾ ಪಕ್ಷದವರನ್ನು ಸಮಾನವಾಗಿ ನೋಡಿದ್ದಾರೆ. ಆಡಳಿತ ಪಕ್ಷವನ್ನು ಟೀಕಿಸುವುದಕ್ಕೂ ಅವರು ಹಿಂದೆ ಮುಂದೆ ಮಾಡಲಿಲ್ಲ ಎಂದರು.
ವಕೀಲ ಕೆ.ವೈ.ರಾಮಚಂದ್ರಪ್ಪ ಮಾತನಾಡಿ, ಇಂತಹ ಶತಮಾನದ ವ್ಯಕ್ತಿಗೆ ಗೌರವ ಡಾಕ್ಟರೇಟ್ ನೀಡಬೇಕಾದದ್ದು ಸರ್ಕಾರದ ಕರ್ತವ್ಯ ಕೂಡ, ನಮ್ಮ ಆಶಯ ಕೂಡ ಆಗಿದೆ, ಅಲ್ಲದೇ ವಿವಿಯ ಯಾವುದಾದರೂ ಸಭಾಂಗಣಕ್ಕೆ ಕಾಗೋಡು ತಿಮ್ಮಪ್ಪನವರ ಹೆಸರು ಇಡಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಚಿಕ್ಕಮರಡಿ ಗಣೇಶ್, ಹನುಮೇಶ್, ಸತ್ಯನಾರಾಯಣ, ಯುವರಾಜ್, ನಾಗರಾಜ್, ಎಸ್.ಪಿ.ಶೇಷಾದ್ರಿ, ಅಶೋಕ್‌ಕುಮಾರ್, ಇಕ್ಕೇರಿ ರಮೇಶ್, ಬೊಮ್ಮನಕಟ್ಟೆ ರಾಮಚಂದ್ರ, ಈಶ್ವರ್ ಇತರರಿದ್ದರು.