ಸೊರಬ : ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಸಹೋದರರ ನಡುವಿನ ಕಾಳಗದ ನಡುವೆ ಕಾಂಗ್ರೆಸ್‌ನ ರಾಜು ತಲ್ಲೂರು ಸಹ ಇವರಿಬ್ಬರಿಗೆ ಸೆಡ್ಡು ಹೊಡೆದಿದ್ದಾರೆ.
ಸೊರಬ ವಿಧಾನಸಭಾ ಕ್ಷೇತ್ರ ಬಂಗಾರಪ್ಪನವರ ತವರು ಮನೆ ಯಂತಿತ್ತು. ಅಂತೆಯೇ ಸೊರಬದ ಜನತೆ ಬಂಗಾರಪ್ಪನವರನ್ನು ಮನೆಯ ಮಗನಂತೆ ಸತತ ನಾಲ್ಕು ದಶಕಗಳ ಕಾಲ ಆಶೀರ್ವದಿಸಿದ್ದರು. ಆದರೆ ಅವರ ಕಾಲವಾದ ನಂತರ ಈ ಕ್ಷೇತ್ರದಲ್ಲಿ ಹರತಾಳು ಹಾಲಪ್ಪ, ಎರಡು ಬಾರಿ ಜಯಶಾಲಿಯಾಗಿದ್ದರೆ, ಬಂಗಾರಪ್ಪ ಪುತ್ರಲ್ಲಿ ಒಬ್ಬರಾದ ಮಧುಬಂಗಾರಪ್ಪ ಒಂದು ಬಾರಿ, ಕುಮಾರ್ ಬಂಗಾರಪ್ಪ ಎರಡು ಬಾರಿ ಈ ಕ್ಷೇತ್ರದಲ್ಲಿ ಜಯಶಾಲಿಯಾಗಿದ್ದರು.
ಸೊರಬ ತಾಲ್ಲೂಕ್ ಹಾಗೂ ಸಾಗರ ತಾಲ್ಲೂಕಿನ ತಾಳಗುಪ್ಪ ಹೋಬಳಿ ಸೇರಿ ೧೧೬ ಸೊರಬ ಕ್ಷೇತ್ರವಾಗಿದೆ. ೨೧೩ ಮತಗಟ್ಟೆಗಳಿರುವ ಸೊರಬ ದಲ್ಲೀಗ ಈ ಬಾರಿ ೧,೮೨,೦೦೨ ಒಟ್ಟು ಮತದಾರ ರಿದ್ದು, ಇದರಲ್ಲಿ ೯೨,೭೬೪ ಪುರುಷರು ಹಾಗೂ ೮೯,೨೩೮ ಮಹಿಳಾ ಮತದಾರರಿದ್ದಾರೆ.
ನಂಜುಂಡಪ್ಪ ವರದಿಯ ಪ್ರಕಾರ ಸೊರಬ ತಾಲ್ಲೂಕ್ ಕೂಡಾ ಹಿಂದುಳಿದ ತಾಲ್ಲೂಕ್‌ಗಳಲ್ಲಿ ಒಂದಾಗಿತ್ತು. ಕ್ಷೇತ್ರದಲ್ಲಿ ಅಭಿವೃದ್ಧಿ ಯೋಜನೆ ಗಳಲ್ಲೂ ರಾಜಕೀಯ ತಲೆದೋರಿದ್ದರಿಂದ ೨೦೦೮ರವರೆಗೆ ಕ್ಷೇತ್ರದಲ್ಲಿ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿತ್ತು. ೧೯೫೨ರಲ್ಲಿ ಸೊರಬ – ಶಿಕಾರಿಪುರ ಒಂದೇ ಕ್ಷೇತ್ರಕ್ಕೆ ಸೇರಿದ್ದವು. ಆಗ ಹೆಚ್. ಸಿದ್ದಯ್ಯ ಕಾಂಗ್ರೆಸ್‌ನಿಂದ ವಿಧಾನಸಭೆ ಪ್ರವೇಶಿಸಿ ದ್ದರು. ನಂತರ ೧೯೬೨ ರಲ್ಲಿ ಗಂಗಾನಾಯ್ಕ ಕೂಡಾ ಕಾಂಗ್ರೆಸ್‌ನಿಂದ ಶಾಸಕರಾಗಿದ್ದರು.
೧೯೬೭ರಲ್ಲಿ ಸೊರಬ ಸ್ವತಂತ್ರ ಕ್ಷೇತ್ರವಾಗಿ ವಿಂಗಡಣೆಯಾದ ನಂತರ ಸಾರೆಕೊಪ್ಪ ಬಂಗಾರಪ್ಪ ಸತತ ಏಳು ಚುನಾವಣೆಗಳಲ್ಲಿ ಆರಿಸಿ ಬಂದರು. ಸೋಷಿಯಲಿಸ್ಟ್ ಪಾರ್ಟಿ, ಕಾಂಗ್ರೆಸ್, ಕೆ.ಸಿ.ಪಿ. ಕೆ.ವಿ.ಪಿ. ಹಾಗೂ ಎಸ್ಪಿ ಸೇರಿದಂತೆ ೧೯೬೭ರಿಂದ ೧೯೯೪ರ ವರೆಗೆ ಬಂಗಾರಪ್ಪ ಸೊರಬದಲ್ಲಿ ಸೋಲಿಲ್ಲದ ಸರದಾರನಾಗಿ ಮೆರೆದರು.
ನಂತರ ಮಗ ವಸಂತ ಅಲಿಯಾಸ್ ಕುಮಾರ್ ಬಂಗಾರಪ್ಪಗಾಗಿ ಸೊರಬ ಕ್ಷೇತ್ರವನ್ನು ತೆರವು ಗೊಳಿಸಿದ ಬಂಗಾರಪ್ಪ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ೪ ಬಾರಿ ಸಂಸದರಾಗಿ ಆಯ್ಕೆಯಾದರು. ೧೯೯೯ರಲ್ಲಿ ಕುಮಾರ್ ಬಂಗಾರಪ್ಪ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಸಣ್ಣ ನೀರಾವರಿ ಸಚಿವರಾಗಿ ದ್ದರು. ನಂತರ ೨೦೦೪ರಲ್ಲಿಯೂ ಕುಮಾರ್ ಕಾಂಗ್ರೆಸ್‌ನಿಂದ ವಿಧಾನಸಭೆಗೆ ಆಯ್ಕೆಯಾದರು. ಅಷ್ಟರಲ್ಲಾಗಲೇ ಬಂಗಾರಪ್ಪ ಕುಟುಂಬದಲ್ಲಿ ಕಲಹ ಉಂಟಾಗಿ, ಪುತ್ರ ಕುಮಾರ್ ಕುಟುಂಬದಿಂದ ದೂರ ಉಳಿದರು.
ಇದರ ಪರಿಣಾಮ ೨೦೦೮ರ ಚುಆನವಣೆಯಲ್ಲಿ ಕುಮಾರ್ ಕಾಂಗ್ರೆಸ್ ನಿಂದಲೂ ಮಧು ಎಸ್ಪಿಯಿಂದಲೂ ಕಣಕ್ಕಿಳಿದರೆ, ಬಿಜೆಪಿಯಿಂದ ಸ್ಪರ್ಧಿಸಿದ್ದ ಹರತಾಳು ಹಾಲಪ್ಪ ಅಣ್ಣ-ತಮ್ಮಂದಿರ ಜಗಳದಲ್ಲಿ ಅನಾಯಾಸವಾಗಿ ಗೆದ್ದು ಬಂದರು ಮಾತ್ರವಲ್ಲದೆ, ಕ್ಷೇತ್ರದಲ್ಲಿ ‘ಬಂ’ ಕುಟುಂಬದ ಪಾರುಪತ್ಯಕ್ಕೆ ಕೊನೆ ಹಾಡಿದರು.
ಹಾಲಪ್ಪ ೫೩ ಸಾವಿರ ಮತ ಗಳಿಸಿದರೆ, ಕುಮಾರ್ ೩೨, ಮಧು ೩೧ ಸಾವಿರ ಮತ ಪಡೆಯಲಷ್ಟೇ ಶಕ್ತರಾದರು. ನಂತರ ಯಡಿಯೂರಪ್ಪ ಸಂಪುಟದಲ್ಲಿ ಆಹಾರ ಸಚಿವರಾದ ಹಾಲಪ್ಪ, ಹಿಂದೆದೂ ಅಭಿವೃದ್ದಿಯನ್ನೇ ಕಾಣದ ಕ್ಷೇತ್ರದಲ್ಲಿ ಭರಪೂರ ಯೋಜನೆಗಳನ್ನು ಅನುಷ್ಠಾನಗೊಳಿಸಿದರು.
ಇದೀಗ ಪುನಃ ಅಣ್ಣ ತಮ್ಮಂದಿರು ಕಣಕ್ಕಿಳಿದಿದ್ದು, ಬಿಜೆಪಿಯಿಂದ ಕುಮಾರ್ ಬಂಗಾರಪ್ಪ, ಜೆಡಿಎಸ್‌ನಿಂದ ಮಧುಬಂಗಾರಪ್ಪ, ಹಾಗೂ ಕಾಂಗ್ರೆಸ್‌ನಿಂದ ರಾಜು ತಲ್ಲೂರು ಸ್ಪರ್ಧೆಗಿಳಿದಿದ್ದಾರೆ. ಇವರ ಜೊತೆಗೆ ಹುಣವಳ್ಳಿ ಗಂಗಾಧರಪ್ಪ ಸೇರಿದಂತೆ ಇತರರು ಕೂಡಾ ಸ್ಪರ್ಧೆಗಿಳಿದಿದ್ದು, ಈ ಬಾರಿ ಸೊರಬ ಕ್ಷೇತ್ರದ ಮತದಾರರು ಅಣ್ಣ-ತಮ್ಮಂದಿರಲ್ಲಿ ಒಬ್ಬರನ್ನು ಅಥವಾ ೨೦೦೮ರ ಚುನಾವಣೆಯ ಪುನರಾವರ್ತಿತ ಎಂಬಂತೆ ಅಣ್ಣ-ತಮ್ಮಂದಿರ ಜಗಳದಲ್ಲಿ ರಾಜು ತಲ್ಲೂರ್‌ಗೆ ವಿಜಯಮಾಲೆ ಹಾಕುತ್ತಾರೆಯೇ? ಅಥವಾ ಹೊಸ ಮುಖಕ್ಕೆ ಮಣೆ ಹಾಕುತ್ತಾರೆಯೋ ಎಂಬುದನ್ನು ಕಾದು ನೋಡಬೇಕಿದೆ.