ಕೃತಕ ನೆರೆ:  ಸಾರ್ವಜನಿಕರದ್ದೂ ಪಾಲು ಇದೆ!

-ದೇಶಾದ್ರಿ ಹೊಸ್ಮನೆ ಮತ್ತು ಅಮೃತಾ

ಎಲ್ಲೆಂದರಲ್ಲಿ ಕಸ ಹಾಕುವ ಕೆಟ್ಟ ಚಾಳಿ ಹೋಗುವ ತನಕ, ಜಲ ಪ್ರವಾಹವೂ ನಿಲ್ಲುವುದು ಕಷ್ಟ

ಶಿವಮೊಗ್ಗ : ಮಳೆ ಬಂದಾಗ ಶಿವಮೊಗ್ಗ ಜಲ ಪ್ರವಾಹಕ್ಕೆ ಸಿಲುಕುವುದು ಈಗ ಮಾಮೂಲು ಆಗಿದೆ. ವಿಚಿತ್ರ ಅಂದ್ರೆ ತಗ್ಗು ಪ್ರದೇಶದ ಬಡವಾಣೆಗಳಲ್ಲಿ ರಸ್ತೆ, ಚರಂಡಿ ನೀರು ಮನೆಗಳಿಗೆ ನುಗ್ಗಿ, ಅಪಾರ ಪ್ರಮಾಣದ ನಷ್ಟ ಉಂಟು ಮಾಡುವುದು ಕಳೆದ ವರ್ಷದಿಂದಲೂ ನಡೆಯುತ್ತಲೇ ಇದೆ. ಮೇ. ೨೦ ರಂದು ಸೋಮವಾರ ಅಂತಹದ್ದೇ ಪರಿಸ್ಥಿತಿ ಶಿವಮೊಗ್ಗ ನಗರದ ಕಾಶಿಪುರ, ಅಶೋಕ್‌ ನಗರ, ಮಿಳ್ಳಘಟ್ಟ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಆಯಿತು.

ಅಂದು ಮಧ್ಯಾಹ್ನ ಶಿವಮೊಗ್ಗ ನಗರದಲ್ಲಿ ಧಾರಕಾರವಾಗಿ ಮಳೆ ಸುರಿಯಿತು. ವ್ಯಾಪಕವಾಗಿ ಮಳೆ ಸುರಿದ ಪರಿಣಾಮ ಚರಂಡಿಗಳು, ಜಾರಾ ಕಾಲುವೆಗಳಲ್ಲಿ ಮಳೆ ನೀರು ಸರಗವಾಗಿ ಹರಿದು ಹೋಗದ ಪರಿಣಾಮ ಹಲವಡೆಗಳಲ್ಲಿ ರಸ್ತೆಗಳು ಜಲಾವೃತ್ತವಾದವು. ಕಮಲಾ ನಗರ ಕಾಲೇಜು ಎದುರು, ನೆಹರು ರಸ್ತೆ, ವೆಂಕಟೇಶ್‌ ನಗರ ಸೇರಿದಂತೆ ಕೆಲವೆಡೆಗಳಲ್ಲಿನ ರಸ್ತೆಗಳಲ್ಲಿನ ಜಲ ಪ್ರವಾಹದ ದೃಶ್ಯ ಕೆರೆಗಳನ್ನೇ ನೆನಪಿಸಿದವು. ಅಂದು ಸಂಜೆ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಮನೆಗಳಿಗೆ ತೆರಳುತ್ತಿದ್ದ ಜನರು ವಾಹನಗಳಲ್ಲಿ ಸಾಗುವುದಕ್ಕೆ ಹರಸಾಹಸ ಪಟ್ಟರು. ಇನ್ನು ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ದೊಡ್ಡ ಅವಾಂತರಗಳೇ ಸೃಷ್ಟಿಯಾದವು. ಇದೆಲ್ಲವೂ ಸ್ಮಾರ್ಟ್‌ ಸಿಟಿ ಯೋಜನೆಯ ಅವೈಜ್ಞಾನಿಕ ಕಾಮಗಾರಿಗಳಿಂದಲೇ  ಆಗಿದ್ದು ಎನ್ನುವುದು ಒಂದೆಡೆಯಾದರೆ,  ಇದಕ್ಕೆ ಸಾರ್ವಜನಿಕರ ಕೊಡುಗೆಯೂ ಇದೆ ಎನ್ನುವುದು ಕೂಡ ಅಷ್ಟೇ ಸತ್ಯ.

ಅಂದರೆ, ಶಿವಮೊಗ್ಗ ನಗರದಲ್ಲಿನ  ಕೃತಕ ನೆರೆಗೆ ಕೆಲವು ಕಡೆ ಸ್ಮಾರ್ಟ್ ಸಿಟಿಯ ಅವೈಜ್ಞಾನಿಕ  ಕಾಮಗಾರಿ  ಕಾರಣವಾಗಿದ್ದರೂ,  ಸಾರ್ವಜನಿಕರು ಕಸ ತ್ಯಾಜ್ಯ ವಿಲೇವಾರಿಗೆ  ಸಮರ್ಪಕವಾಗಿ ಕೈಜೋಡಿಸದೆ ರಾಜಾ ಕಾಲುವೆ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಕಾನೂನು ಬಾಹಿರವಾಗಿ  ಪ್ಲಾಸ್ಟಿಕ್, ಹಳೆ ಬಟ್ಟೆ ಬರೆ, ಹಾಸಿಗೆ ದಿಂಬು, ಮುಂತಾದ ಕಸ ತ್ಯಾಜ್ಯ  ಹಾಗೂ ಚೀಲಗಳಲ್ಲಿ ಮಾಂಸ ತ್ಯಾಜ್ಯ ಮೂಟೆ ಕಟ್ಟಿ ಎಸೆಯುವುದೂ ಕೂಡ ಪ್ರಮುಖ ಕಾರಣ. ಅನೇಕ ಕಡೆ ಕಟ್ಟಡ ನಿರ್ಮಾಣಗಳ ತ್ಯಾಜ್ಯ ಸಹ ರಾಜಾ ಕಾಲುವೆಗೆ ಸೇರುತ್ತಿದೆ.  ಇದರ ಪರಿಣಾಮವೇ ದೊಡ್ಡ ಮಳೆ ಬಂದಾಗ  ಕಾಲುವೆಯಲ್ಲಿ ಈ ಕಸ ಕಡ್ಡಿಗಳು ತಡೆಯಾಗಿ ನೀರಿನ ಸರಗವಾಗಿ  ಹರಿಯುವಿಕೆಗೆ ತಡೆವೊಡ್ಡುತ್ತಿದೆ. ಇಂತಹ ಪರಿಸ್ಥಿತಿ ಆದಲೆಲ್ಲವೂ   ಚರಂಡಿ ನೀರು, ರಾಜಾ ಕಾಲುವೆಗಳ ನೀರು ರಸ್ತೆಗಳಿಗೆ ಬಂದು, ಮನೆಗಳಿಗೆ ನುಗ್ಗುತ್ತಿದೆ.ರವೀಂದ್ರ ನಗರ ಹಾಗೂ ರಾಜೇಂದ್ರ ನಗರ ನಡುವಣ ತುಂಗಾ ಚಾನೆಲ್‌ ಪರಿಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿರಲಿಲ್ಲ. ಜನರೇ ಬೇಕಾಬಿಟ್ಟಿಯಾಗಿ ತಂದು ಎಸೆದಿದ್ದ  ಘನತ್ಯಾಜ್ಯದ ವಸ್ತುಗಳು, ಪ್ಲಾಸ್ಟಿಕ್‌ ಬಾಟಲಿಗಳು, ಹಳೆ ಬಟ್ಟೆ ಬರೆ, ಹಾಸಿಗೆ ದಿಂಬು, ಮುಂತಾದ ಕಸ ತ್ಯಾಜ್ಯ  ಒಂದೆಡೆ ಸಂಗ್ರಹವಾಗಿ, ನೀರು ಸರಗವಾಗಿ ಹರಿದು ಹೋಗದಂತೆ ತಡೆಯಾಗಿತ್ತು. ಅಷ್ಟು ಮಾತ್ರವೇ ಅಲ್ಲ, ಆ ಕಸ ಕಡ್ಡಿ ಒಂದೆಡೆ ಸಂಗ್ರಹವಾಗಿ ಕೊಳೆತು, ಅಲ್ಲಿಂದ ದುರ್ನಾತ ಬರುತ್ತಿತ್ತು. ನಾಲೆಯ ಅಕ್ಕಪಕ್ಕದ ನಿವಾಸಿಗಳು ಅಲ್ಲಿರುಲಾದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು, ಬಿಸಿಲಿನ ಹೊತ್ತಿನಲ್ಲಿ ನಾಲೆಯ ಹತ್ತಿರ ಸುಳಿದಾಡುವಂತಿರಲಿಲ್ಲ, ದುರ್ನಾತ ಮೂಗಿಗೆ ಬಡಿಯುತ್ತಿತ್ತು. ಅಲ್ಲಿಯೇ ಇದ್ದ ಪಾರ್ಕ್‌ ಗೂ ಕೂಡ ಜನರು ಸಂಜೆ ಹೊತ್ತು ಹೋಗದಂತ ಕೆಟ್ಟ ಪರಿಸ್ಥಿತಿ ಅಲ್ಲಿ ನಿರ್ಮಾಣವಾಗಿತ್ತು. ಇದೆಲ್ಲವೂ ಸೃಷ್ಟಿಯಾಗಿದ್ದೇ ಬೇಜಾವ್ದಾರಿಯ ಜನರಿಂದಲೇ ಎನ್ನುವುದು ನೂರರಷ್ಟ ಸತ್ಯ.


ಬಹುತೇಕ ಜನರ ಗಮನಕ್ಕೆ ಬಾರದ ಇನ್ನೊಂದು ದೊಡ್ಡ ಸಮಸ್ಯೆ ಇದೆ. ಅದೇನಂದರೆ,  ನಗರದ ವಿವಿಧೆಡೆಗಳಲ್ಲಿನ ರಾಜಾ ಕಾಲುವೆ ಮೂಲಕ ತೇಲಿ ಹೋಗುವ ಪ್ಲಾಸ್ಟಿಕ್ ಕವರ್, ಖಾಲಿ ಬಾಟಲಿಗಳು ಸೇರಿದಂತೆ ಘನತ್ಯಾಜ್ಯಗಳು ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಮೋಟಾರುಗಳಿಗೆ ಸಿಲುಕಿ,  ಮೊಟಾರು ಹಾಳಾಗುವ ಸಂದರ್ಭಗಳು ಎದುರಾಗಿದೆ. ಆಗ ತ್ಯಾಜ್ಯ ನೀರು ನಿರ್ವಹಣೆ  ವ್ಯವಸ್ಥೆ ವ್ಯತ್ಯಾಸ ಗೊಂಡು ಕಲುಷಿತ ನೀರು ನೇರವಾಗಿ ತುಂಗಾ ನದಿಗೆ ಸೇರುವಂತಾಗಿದೆ. ಇದು ನದಿ ಮಲೀನಕ್ಕೂ ಕಾರಣವಾಗಿದೆ. ತುಂಗಾ ನದಿ ತುಂಬಾ ಪವಿತ್ರವಾದ ನದಿ.  ʼತುಂಗಾ ಪಾನ, ಗಂಗಾ ಸ್ನಾನ ʼಎಂದು ಖ್ಯಾತಿ ಈ ನದಿಗೆ ಇದೆ. ಅಂತಹ ನದಿಯೇ ಈಗ ಸಂಪೂರ್ಣವಾಗಿ ಮಲೀನವಾಗಿ ಕುಡಿಯವುದಕ್ಕೂ ಬಾರದಂತಾಗಿದೆ. ಇದೆಲ್ಲದ್ದಕ್ಕೂ ಕಾರಣ ನಗರದ ನಾಗರೀಕರ ನಿರ್ಲಕ್ಷ್ಯ, ತಾತ್ಸಾರವೇ ಆಗಿದೆ.

ತುಂಗಾ ನದಿಗೆ ನಗರದ ಕೊಳಚೆ ನೀರು, ಕೆಟ್ಟ ನೀರು, ಕುರಿ, ಕೋಳಿ ಮಾಂಸದ ತ್ಯಾಜ್ಯ, ಜತೆಗೆ ಅನಧಿಕೃತ ಕಸಾಯಿ ಖಾನೆಗಳ ತ್ಯಾಜ್ಯ ಸೇರದಂತೆ ಶಿವಮೊಗ್ಗ ಮಹಾನಗರ ಪಾಲಿಕೆ ಅನೇಕ ಕ್ರಮ ಕೈಗೊಂಡಿದೆ. ಅದಕ್ಕಂತಲೇ ಅನಧಿಕೃತ ಕಸಾಯಿಖಾನೆಗಳನ್ನು ಮುಚ್ಚಿಸಿದೆ. ಅಷ್ಟಾಗಿಯೂ ಅಧಿಕೃತವಾಗಿಯೇ ಇರುವ ಮೀನು ಮಾರುಕಟ್ಟೆ, ಕುರಿ-ಕೋಳಿ ಅಂಗಡಿಗಳ ತ್ಯಾಜ್ಯ ರಾಜಾ ಕಾಲುವೆಗಳ ಮೂಲಕ ದೊಡ್ಡ ಪ್ರಮಾಣದಲ್ಲಿ ನದಿಗೆ ಹರಿದು ಹೋಗುತ್ತದೆ. ಅದು ಹಾಗೆ ಹರಿದು ಹೋಗುವಾಗ ನಗರದ ಚರಂಡಿಗಳಿಗೂ ಸಿಲುಕಿ, ದೊಡ್ಡ ಪ್ರಮಾಣದ ತೊಂದರೆ ಉಂಟು ಮಾಡುತ್ತಿದೆ. ಇದೆಲ್ಲವೂ ಈ ಉದ್ಯಮಗಳಲ್ಲಿರುವ ಜನರ ನಿರ್ಲಕ್ಷ್ಯದಿಂದಲೇ ಆಗಿದ್ದು. ಇದಕ್ಕೆ ಯಾರನ್ನು ಹೊಣೆಗಾರರನ್ನಾಗಿ ಮಾಡುವುದು ? ಇದೊಂದು ಯಕ್ಷ ಪ್ರಶ್ನೆ.
 

ಇನ್ನು ಮನೆಗಳ ಕಸ ನಿರ್ವಹಣೆಯ ಬಗ್ಗೆ ಪಾಲಿಕೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಎಷ್ಟೇ ಜಾಗೃತಿ ಮೂಡಿಸಿದರೂ, ಈಗಲೂ ಅದೆಷ್ಟೋ ಮನೆಗಳಲ್ಲಿ ಕಸ ಬೇರ್ಪಡಿಸುವ ಪದ್ದತಿಯೇ ಇಲ್ಲ. ಎಲ್ಲ ಬಗೆಯ ಕಸವನ್ನು ಒಟ್ಟಾಗಿಯೇಹಾಕುವ ಪರಿಪಾಠ ಇದ್ದೇ ಇದೆ. ಕಸ ಪಡೆಯುವ ಪಾಲಿಕೆ ಸಿಬ್ಬಂದಿ ಈ ಬಗ್ಗೆ ಆಕ್ಷೇಪ ಎತ್ತುತ್ಥಾರೆನ್ನುವ ಕಾರಣಕ್ಕೆ ಅದೆಷ್ಟೋ ಮನೆಗಳ ಜನರು ತಮ್ಮ ಮನೆಯ ಕಸವನ್ನು ರಾತ್ರೋರಾತ್ರಿ ನಗರದ ನಡುವಣ ಖಾಲಿ ಜಾಗಗಳಿಗೆ ಎಸೆಯುವುದು ನಡೆಯುತ್ತಲೇ ಇದೆ. ಕಸವನ್ನು ಬೇಕಾಬಿಟ್ಟಿಯಾಗಿ ಹಾಕುವವರಿಗೆ ದಂಡ ವಿಧಿಸಲಾಗುವುದು ಹೇಳಲಾಗಿದೆ. ಬೀದಿ ಬದಿಗಳಲ್ಲಿ, ರಸ್ತೆಗಳಲ್ಲಿ, ಖಾಲಿ ಜಾಗಗಳಲ್ಲಿ ಬೇಕಾಬಿಟ್ಟಿಯಾಗಿಹಾಕುವ ಕಸದಿಂದ ನಗರದ ಜನರ ಆರೋಗ್ಯ ಹಾಳಾಗುತ್ತಿದೆ ಎನ್ನುವ ಎಚ್ಚರಿಕೆ ನೀಡಿದರೂ, ಜನರಿಗೆ ಅದು ತಲೆಗೆ ಹೋಗುವುದಿಲ್ಲ. ಬದಲಿಗೆ ತಮ್ಮ ಮನೆಯ ಕಸ, ಬೀದಿಪಾಲಾದರಷ್ಟೇ ಸಾಕು ಎನ್ನುವ ಕೆಟ್ಟ ಮನೋಭಾವ ಬಹಳಷ್ಟು ಜನರಿಗಿದೆ.


……………………………………………………….

ನಗರದ ಕಸ ನಿರ್ವಹಣೆ ಯ ಜವಾಬ್ದಾರಿ ಬರೀ ಪಾಲಿಕೆ ಮಾತ್ರದ್ದಲ್ಲ, ಜನರದ್ದು ಇದೆ.  ಆದರೆ ಕೆಲವರು ಅದರ ಜವಾಬ್ದಾರಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಪರಿಣಾಮ, ನಗರದೊಳಗಿನ ರಾಜಾ ಕಾಲುವೆಗಳು, ದೊಡ್ಡ ಗಾತ್ರದ ಚರಂಡಿಗಳ ಜತೆಗೆ ತುಂಗಾ ಚಾನೆಲ್‌ ಕೂಡ ಕಸ ಕಡ್ಡಿಗಳಿಂದ ತುಂಬಿಕೊಳ್ಳುತ್ತಿರುವುದು ದುರಂತವೇ ಹೌದು.  ಮಹಾನಗರ ಪಾಲಿಕೆ  ಪ್ರತಿ ವರ್ಷ ರಾಜಾ ಕಾಲುವೆ ಸ್ವಚ್ಛಗೊಳಿಸುವ ಕಾರ್ಯ  ಮಾಡುತ್ತಿದೆಯಾದರೂ ಮತ್ತೆ ಮತ್ತೆ ಕಾಲುವೆಗೆ ಕಸ ತುಂಬುತ್ತಿರುವ ಜನರೇ ಇದಕ್ಕೆ ಕರಿವಾಣ ಹಾಕಬೇಕಿದೆ. ಹಾಗಾದಾಗ ಮಾತ್ರ, ನಗರದೊಳಗೆ ಸಂಭವಿಸುವ ಕೃತಕ ನೆರೆಯನ್ನು ತಪ್ಪಿಸಬಹುದು. ಈ ಬಗ್ಗೆ ಪ್ರಜ್ಞಾವಂತ ನಾಗರಿಕರು ಯೋಚಿಸಬೇಕಾಗಿದೆ.

-ತ್ಯಾಗರಾಜ ಮಿತ್ಯಾಂತ, ಶಿವಮೊಗ್ಗ.
………………………………………………….. ಸ್ವಚ್ಚ ಮಾಡಿದಷ್ಟು ಕಸ !

ಶಿವಮೊಗ್ಗ ನಗರದ ರಾಜಾ ಕಾಲುವೆಗಳನ್ನು ಶಿವಮೊಗ್ಗ ಮಹಾನಗರ ಪಾಲಿಕೆಯ ಸಿಬ್ಬಂದಿಯೂ ಜೆಸಿಬಿ, ಕ್ರೆನ್‌ ಗಳ ಮೂಲಕ ಆಗಾಗ ಸ್ಚಚ್ಚಗೊಳಿಸುತ್ತಲೇ ಇರುತ್ತದೆ. ಜೆಸಿಬಿಗಳು, ಕ್ರೇನ್‌ ಗಳು ಕಾಲುವೆಗಳ ಕಸ ಎತ್ತಿ, ಇತ್ತ ಮುಖ ಮಾಡಿದ ಬೆನ್ನಲೇ ಮತ್ತೆ ಕಾಲುವೆಗಳ ಕಸದ ಗುಂಡಿಗಳಾಗುತ್ತಿವೆ, ಇದೆಲ್ಲ ಹೇಗೆ ಅಂತ ನೋಡಿದರೆ, ಅಲ್ಲಿನ ಅಕ್ಕ ಪಕ್ಕದ ಮನೆಯವರು ತಮ್ಮ ಮನೆಗಳ ಕಸಗಳನ್ನು ಮತ್ತೆ ಯಥಾ ಪ್ರಕಾರ ಕಾಲುವೆಗಳಿಗೆ ಎಸೆಯುವುದು ಮಾಮೂಲು ಆಗಿದೆ. ಇದೊಂದು ರೀತಿ ನಿರಂತರ ಪ್ರಕ್ರಿಯೆ ಆಗಿದೆ.  ಇದಕ್ಕೆ ಯಾವುದೇ ಕಾನೂನುಗಳ ನಡೆಯುವುದಿಲ್ಲ. ಕಾನೂನುಗಳು, ಎಚ್ಚರಿಕೆಗಳಿಗೂ ಜನರು ಕ್ಯಾರೇ ಎನ್ನದೇ ಕಸ ಹಾಕುವುದು ನಡೆಯುತ್ತಲೇ ಇದೆ, ಜನರಿಗೆ ಅರಿವೇ ಇದಕ್ಕೆ ಮದ್ದು. ಅಲ್ಲಿ ತಾವು ಹಾಕುವ ಕಸ ತಮ್ಮ ಆರೋಗ್ಯಕ್ಕೆ ಹಾನಿ ಉಂಟು ಮಾಡಬಲ್ಲದು ಎನ್ನುವ ಅರಿವು ಬಂದಾಗಲೇ, ರಾಜಾ ಕಾಲುವೆಗಳಿಗೆ, ಖಾಲಿ ಜಾಗಗಳಿಗೆ ಜನರು ಪ್ಲಾಸ್ಟಿಕ್, ಹಳೆ ಬಟ್ಟೆ ಬರೆ, ಹಾಸಿಗೆ ದಿಂಬು, ಮುಂತಾದ ಕಸ ತ್ಯಾಜ್ಯ  ಹಾಗೂ ಚೀಲಗಳಲ್ಲಿ ಮಾಂಸ ತ್ಯಾಜ್ಯ ಮೂಟೆ ಕಟ್ಟಿ ಎಸೆಯುವುದೂ ನಿಲ್ಲುತ್ತದೆ.
……………………………………ತೆರಿಗೆ ಹಣ ಪೋಲು!

ನೆರೆ ಸಮಸ್ಯೆ ಒಂದು ಕಡೆಯಾದರೆ ನಾಗರೀಕರ ಬೇಜವಾಬ್ದಾರಿಯಿಂದ ನಮ್ಮದೇ ತೆರಿಗೆ ಹಣ ಅನಾವಶ್ಯಕ ಖರ್ಚಾಗುತ್ತಿರುವ ಬಗ್ಗೆಯೂ ಯೋಚಿಸಬೇಕಾಗಿದೆ. ಯಾಕೆಂದರೆ ಪ್ರತಿ ವರ್ಷ ಮಳೆಗಾಲ ಶುರುವಾಗುವ ಹೊತ್ತಿಗೆ ಮಹಾನಗರ ಪಾಲಿಕೆ ವತಿಯಿಂದ ರಾಜಾ ಕಾಲುವೆಗಳನ್ನು ಸಚ್ಚಗೊಳಿಸುವ ಕೆಲಸ ನಡೆಯಲೇಬೇಕು. ಹಾಗೆ ಮಾಡಿದಾಗ ಮಾತ್ರ ರಾಜಾ ಕಾಲುವೆಗಳಲ್ಲಿ ನೀರು ಸರಗವಾಗಿ ಹರಿದು ಹೋಗಲು ಸಾಧ್ಯವಾಗುತ್ತದೆ. ಹಾಗೆ ಮಾಡದೇ ಇದ್ದಾಗ ರಾಜಾ ಕಾಲುವೆಗಳಲ್ಲಿ ಹರಿದು ಹೋಗುವ ನೀರು , ನಗರದ ರಸ್ತೆಗಳಿಗೆ ಬಂದು ಜಲ ಪ್ರವಾಹ ಉಂಟಾಗುವುದು ಸಹಜ. ಅದೇ ಕಾರಣಕ್ಕೆ ಪಾಲಿಕೆ ಪ್ರತಿ ವರ್ಷ ರಾಜಾ ಕಾಲುವೆಗಳನ್ನು ಸಚ್ಚಗೊಳಿಸಲು ಸಾಕಷ್ಟ ಹಣ ಖರ್ಚು ಮಾಡುತ್ತದೆ, ಇದು ನಗರದ ನಾಗರೀಕರ ತೆರಿಗೆ ಹಣವೇ ಆಗಿದೆ. ಪಾಲಿಕೆ ಮೂಲಗಳ ಪ್ರಕಾರ ವರ್ಷದಲ್ಲಿ ಸಾಮಾನ್ಯವಾಗಿ 2 ಬಾರಿ ಸ್ವಚ್ಛತೆ ಮಾಡಲಾಗುತ್ತದೆ. ಇದರ ಖರ್ಚು ವಾರ್ಡ್ ವೈಸ್ ಲೆಕ್ಕಾ ಆಗುತ್ತದೆ. ಕೊಟೇಶನ್ ಆಧಾರದ ಮೇಲೆ 5-10 ಲಕ್ಷ ಆಗುತ್ತದೆ. ಈ ಬಗ್ಗೆಯೂ ನಗರದ ನಾಗರೀಕರು ಯೋಚಿಸಬೇಕಿದೆ. ಎಲ್ಲಕ್ಕಿಂತ ಮುಖ್ಯವಾಗಿ ಅನಾರೋಗ್ಯ ಪರಿಸರದಲ್ಲಿ  ನಮ್ಮ ಪೌರ ಕಾರ್ಮಿಕರು ಕೆಲಸ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಸುತ್ತದೆ. ಯಾವುದೇ ಕಾಲುವೆ ಪ್ರಕೃತಿದತ್ತ ಕಾರಣಗಳಿಂದ ಸಮಸ್ಯೆ ಉಂಟು ಮಾಡುವ ಸಾಧ್ಯತೆ ತೀರಾ ಕಡಿಮೆ. ಮನುಷ್ಯನ ಬೇಜವಾಬ್ದಾರಿತನ ದಿಂದ ಆಗುವ ಅನಾಹುತಗಳನ್ನು ನಾವು ಕಡಿಮೆ ಅಥವಾ ಸಂಪೂರ್ಣವಾಗಿ ನಿಯಂತ್ರಣ ಮಾಡಲು ಖಂಡಿತಾ ಸಾಧ್ಯವಿದೆ.
……………………………………..


ತಂತಿಯ ಜಾಲರಿ ಹಾಕಿಸಿದರೆ ಹೇಗೆ ?


ನಗರದಲ್ಲಿನ ರಾಜಾ ಕಾಲುವೆಗಳ ಎರಡು ಕಡೆಗೂ ತಂತಿ ಜಾಲರಿ ಹಾಕಿಸಿದರೆ ಹೇಗೆ ? ಈ ಬಗ್ಗೆಯೂ ಚರ್ಚೆಗಳು ನಡೆದಿವೆ. ಅನೇಕರು ಇಂತಹ ಸಲಹೆಗಳನ್ನು ಕೊಡಬಹುದು. ಆದರೆ ತಂತಿ ಜಾಲರಿ ಹಾಕಿಸಿ, ಅಲ್ಲಿ ಕಸ ಹಾಕುವುದನ್ನು ತಡೆಗಟ್ಟವುದು ಇದು ಇನ್ನೊಂದು ಬಗೆಯ ಜನರ ತೆರಿಗೆ ಹಣ ಖರ್ಚು ಮಾಡಬಹುದಾದ ವಿಧಾನ .  ಅಷ್ಟು ಮಾತ್ರವಲ್ಲದೆ, ಜನರು ತಮ್ಮ ಸುತ್ತಲ ಪರಿಸರವನ್ನು ಸಚ್ಚವಾಗಿಟ್ಟುಕೊಳ್ಳುವುದಕ್ಕೂ ನಿರ್ಬಂಧ ವಿಧಿಸಿ ತಡೆಗಟ್ಟಬೇಕೆನ್ನುವುದು ವಿಚಿತ್ರವೇ ಹೌದು. ಪ್ರತಿಯೊಬ್ಬರು ತಮ್ಮ ಮನೆಯ ಸುತ್ತಲ ಅಥವಾ ಅಕ್ಕಪಕ್ಕದ ರಾಜಾ ಕಾಲುವೆಗಳು, ಚರಂರಿಗಳು ಸಚ್ಚವಾಗಿರಲಿ ಎಂದು ಮನಸು ಮಾಡಿದರೆ, ಇದೆಲ್ಲವೂ ಬೇಕಾಗುವುದೇ ಇಲ್ಲ, ಆದರೆ ಅದೆಲ್ಲವನ್ನು ನಿರ್ಬಂಧಿಸಿ ಕೃತಕ ನೆರೆ ತಡೆಗಟ್ಟುವುದು ನದಿಗೆ ಕಸ ಹಾಕುವುದನ್ನು ತಪ್ಪಿಸಲು ಜಾಲರಿ ಹಾಕಿಸಿದಂತೆಯೇ ಆಗಲಿದೆ. ಪರಿಸರ ಹಾಳು ಮಾಡುವುದಕ್ಕಾಗಿಯೇ ಇದ್ದಂತಹ ಜನರು, ಹೇಗೆ ಮಾಡಿದರೂ ತಮ್ಮ ಕೆಟ್ಟ ಚಾಳಿ ಬಿಡುವುದೇ ಇಲ್ಲ. ಅದರ ಬದಲು ಅವರೇ ಅರಿತುಕೊಂಡರೆ ಒಳ್ಳೆಯದು.
………………..


ಲಾಂಗ್‌ ಟರ್ಮ್‌ ಯೋಜನೆಗಳು ಬೇಕು

ನಾವು ರಾಜಕಾಲುವೆಗಳು ಮತ್ತು ರಸ್ತೆಬದಿಯ ಚರಂಡಿಗಳನ್ನ ಶುದ್ಧೀಕರಣ ಮಾಡುವುದರ ಜೊತೆಗೆ ಕೆಲವೊಂದು ಲಾಂಗ್ ಟರ್ಮ್ ಪ್ಲಾನ್‍ಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ದೊಡ್ಡ ಮಟ್ಟದ ರಾಜಕಾಲುವೆಗಳು ಅರ್ಧಂಬರ್ಧ ಆಗಿ ನಿಂತಿರುತ್ತವೆ. ಅದನ್ನು ದೊಡ್ಡ ಮಟ್ಟದಲ್ಲಿ ಲಿಂಕ್ ಮಾಡಿ ಒಂದೆರಡು ಕಿ.ಮೀ ಟರ್ನೀಂಗ್ಸ್ ಕೊಟ್ಟು ಅಗಲ ಮಾಡುವ ಅಗತ್ಯವಿದೆ.ಅದನ್ನೆಲ್ಲಾ ಮಾಡಲು ಅಗಾಧವಾದ ಪ್ರಮಾಣದಲ್ಲಿ ದುಡ್ಡು ಬೇಕಾಗುತ್ತೆ. ಜೊತೆಗೆ ಅಕ್ಕಾಪಕ್ಕಾ ರಾಜಕಾಲುವೆಯನ್ನು ಮಾಡೋದಿಕ್ಕೆ ಜಮೀನು ವಶಪಡಿಸಿಕೊಳ್ಳಬೇಕಾಗುವಂತಹ ಪರಿಸ್ಥಿತಿಯೂ ಇರುತ್ತದೆ. ಈ ರೀತಿ ಲಾಂಗ್ ಟರ್ಮ್ ಪ್ಲಾನ್ ಮಾಡಿದರೆ ಸುಮಾರು ಸಮಸ್ಯೆಗಳು ಬಗೆಹರಿಯುತ್ತವೆ. ಅದನ್ನು ಹೊರತು ಪಡಿಸಿ ಇರುವಂತಹ ಚರಂಡಿಗಳನ್ನು ಸ್ವಚ್ಛ ಮಾಡುವುದರಿಂದ ಸ್ವಲ್ಪ ಪ್ರಮಾಣದಲ್ಲಿ ಪರಿಹಾರ ಕಂಡುಕೊಳ್ಳಬಹುದು. ಆದರೆ ನಾವು ಶಾಶ್ವತ ಪರಿಹಾರದ ಕಡೆಯೂ ಗಮನಹರಿಸಬೇಕು.ರಸ್ತೆಬದಿ ಚರಂಡಿಯ ಶುದ್ಧೀಕರಣ ಕಾರ್ಯಕ್ಕೆ ಕೈ ಹಾಕಿದರೆ, ಅಲ್ಲಿ ಈಗ 800 ಕಿ.ಮೀ ವ್ಯಾಪ್ತಿಯ ರಸ್ತೆಬದಿ ಚರಂಡಿ ಬರುತ್ತೆ. ಅಷ್ಟನ್ನೂ ಒಂದೇ ಬಾರಿ ಸ್ವಚ್ಛ ಮಾಡಲು ಆಗುವುದಿಲ್ಲ. ಆದರೂ ಈ ವರ್ಷ ಸುಮಾರು ಕಡೆ ಸ್ವಚ್ಛ ಮಾಡುವ ಪ್ರಯತ್ನ ಮಾಡಿದ್ದೇವೆ. ಈ ಬಾರಿ ಯುಟಿಪಿಯಿಂದಲೂ ತುಂಬಾ ಗಲೀಜು ಬರುತ್ತೆ, ಆ ಕಾಲುವೆಯನ್ನು  ಶುದ್ಧೀ ಪಡಿಸಿದ್ದೇವೆ. ನಮ್ಮ ಪಾಲಿಕೆ ವ್ಯಾಪ್ತಿಯಲ್ಲಿ ಇಲ್ಲದ ಹರಿಗೆ ಕೆರೆಗೆ ಲಿಂಕ್ ಕೊಡುವ ರಾಜಕಾಲುವೆಯನ್ನು ತೆಗೆದುಕೊಂಡಿದ್ದೇವೆ. ಇನ್ನು ಶಾಂತಮ್ಮ ಲೇಔಟ್, ವಿದ್ಯಾನಗರ, ಬಾಪೂಜಿನಗರ, ಟ್ಯಾಕ್‍ಮೊಹಲ್ಲಾ ಸೇರಿದಂತೆ ಸುಮಾರು ಕಡೆ ಶೇ.80 ರಷ್ಟು ಕಡಿಮೆ ಆಗಿದೆ.   ಮುಂಚೆ ಬಾಪೂಜಿನಗರದಲ್ಲಿ ಸುಮಾರು 150-200 ಮನೆಗಳಿಗೆ ನೀರು ನುಗ್ಗುತ್ತಿತ್ತು, ಈಗ 8-10 ಮನೆಗಳಿಗೆ ಇಳಿದಿದೆ. ಆರ್‍ಎಂಎಲ್‍ನಗರದಲ್ಲಿ 8-10 ಅಡಿ ನೀರು ನಿಂತು ಸುಮಾರು 500-600 ಮನೆಗಳಿಗೆ ನೀರು ನುಗ್ಗುತ್ತಿತ್ತು, ಈಗ ತಗ್ಗುಪ್ರದೇಶದ 10-20 ಮನೆಗಳಿಗೆ ಮಾತ್ರ ಸೀಮಿತ ಆಗಿದೆ. ಇದಕ್ಕೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವ ಅಗತ್ಯವಿದೆ. ಬಹು ಮುಖ್ಯವಾಗಿ ರಾಜಕಾಲುವೆಗಳಲ್ಲಿ, ದೊಡ್ಡ ಚರಂಡಿಗಳಲ್ಲಿ ಕಸ ಎರಚುವುದನ್ನು ಜನರು ನಿಲ್ಲಿಸಿದರೆ. ನೆರೆ ಹಾವಳಿಗೆ ಅರ್ಧದಷ್ಟು ಪರಿಹಾರ ಸಿಗುತ್ತದೆ.

ಡಾ. ಮಾಯಣ್ಣಗೌಡ, ಪಾಲಿಕೆ ಆಯುಕ್ತರು