ಪ್ರಜ್ವಲ್‌ ರೇವಣ್ಣನನ್ನು  ಬಂಧಿಸಿ: ಮೇ ೩೦ಕ್ಕೆ  ಹಾಸನ ಚಲೋ  ಕಾರ್ಯಕ್ರಮ: ಕೆ.ಎಲ್.‌ ಅಶೋಕ್‌ ಮಾಹಿತಿ

ಕರ್ನಾಟಕ ಜನಪರ ಚಳವಳಿಗಳ ಒಕ್ಕೂಟ ಆಗ್ರಹ


ಶಿವಮೊಗ್ಗ: ಲೈಂಗಿಕ ಹಗರಣದ ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣನನ್ನು ಬಂಧಿಸಬೇಕೆಂದು ಆಗ್ರಹಿಸಿ ಹಾಗೂ  ಮಹಿಳೆಯರ ಘನತೆ ಎತ್ತಿ ಹಿಡಿಯುವ ಉದ್ದೇಶದೊಂದಿಗೆ  “ಹೋರಾಟದ ನಡಿಗೆ ಹಾಸನದ ಕಡೆಗೆ” ಘೋಷಣೆಯಡಿ ಮೇ. ೩೦ಕ್ಕೆ ಹಾಸನದಲ್ಲಿ ಬೃಹತ್ ಮೆರವಣಿಗೆ ಹಮ್ಮಿಕೊಂಡಿದ್ದು,  ಇದಕ್ಕೆ ಜಿಲ್ಲೆಯಿಂದಲೂ ನೂರಾರು ಮಂದಿ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆಂದು  ಕರ್ನಾಟಕ ಜನಪರ ಚಳವಳಿಗಳ ಒಕ್ಕೂಟದ ಸಂಚಾಲಕ ಕೆ.ಎಲ್.ಅಶೋಕ್  ತಿಳಿಸಿದ್ದಾರೆ.

ಮಂಗಳವಾರ ನಗರದ ಪತ್ರಿಕಾಭವನದಲ್ಲಿಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ರಾಜ್ಯ ಮಟ್ಟದ ಬೃಹತ್‌ ಪ್ರತಿಭಟನಾ ಮೆರವಣಿಗೆ ಹಾಗೂ ಬಹಿರಂಗ ಸಭೆ. ರಾಜ್ಯಾದ್ಯಂತ ಇರುವ ನಾಡಿನ ಎಲ್ಲ ಜನಪರ, ರೈತ, ಯುವಜನ, ಮಹಿಳಾ, ಕಾರ್ಮಿಕ ಸಂಘಟನೆಗಳು, ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಮತ್ತು ಸಾಹಿತಿ, ಕಲಾವಿದರನ್ನೊಳಗೊಂಡ ವೇದಿಕೆಯಡಿ ಇದನ್ನು ನಡೆಸಲಾಗುತ್ತಿದೆ. ವಿವಿಧ ಸಂಘಟನೆಗಳಿಂದ ಇದರಲ್ಲಿ ೧೦ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆಂದು ಮಾಹಿತಿ ನೀಡಿದರು.

ಹಾಸನವು ಈಗ ಹಲವು ದುರಂತಕ್ಕೆ ಕಾರಣವಾಗಿದೆ. ನಮ್ಮ ರಾಜ್ಯ ಪ್ರಥಮ ಬಾರಿಗೆ ಭಾರತದ್ಯಂತ ಈ ಕುಖ್ಯಾತ ಪ್ರಕರಣದ ಕೇಂದ್ರ ಬಿಂದುವಾಗಿದೆ. ಪ್ರಜ್ವಲ್ ರೇವಣ್ಣನ ಪ್ರಕರಣ ಯಾವ ವಿಭಾಗಕ್ಕೆ ಸೇರುತ್ತದೆ ಎಂದು ಹೇಳುವುದಕ್ಕೆ ಕನ್ನಡ ನುಡಿಗಟ್ಟಿನಲ್ಲಿ ಶಬ್ದವೇ ಇಲ್ಲ. ಇದೊಂದು ಲೈಂಗಿಕ ಕಿರುಕುಳದ ಪ್ರಕರಣವಲ್ಲ,  ಅತ್ಯಾಚಾರವೆಂದರೆ ಇದು ಅತ್ಯಾಚಾರವಲ್ಲ, ಉಮೇಶ್ ರೆಡ್ಡಿಯಂತಹ ವಿಕೃತಕಾಮಿ ಎಂದರೆ ಅದಕ್ಕೆ ಎಳ್ಳಷ್ಟು ಹೊಂದುವುದಿಲ್ಲ. ಇದನ್ನು ಯಾವ ಪರಿಭಾಷೆಯಲ್ಲಿ ಕರೆಯಬೇಕೆಂದು ಬಲ್ಲವರು ಹೇಳಬೇಕೆಂದು ವ್ಯಂಗ್ಯವಾಡಿದರು.

ಮೇ ೩೧ಕ್ಕೆ ತಾವು ಭಾರತಕ್ಕೆ ಬಂದು ಎಸ್‌ ಐಟಿ ಮುಂದೆ ಶರಣಾಗುವುದಾಗಿ ಆರೋಪಿ ಪ್ರಜ್ವಲ್‌ ರೇವಣ್ಣ,  ವೀಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಅಪ್ಪ, ಅಮ್ಮ, ತಾತಾ, ಚಿಕ್ಕಪ್ಪರಲ್ಲಿ ಕ್ಷಮೆಯಾಚಿಸಿದ್ದಾನೆ. ಸಂತ್ರಸ್ತರ ಕುರಿತು ಒಂದೇ ಒಂದು ಕ್ಷಮೆಯಾಚಿಸಿಲ್ಲ. ಅಧಿಕಾರದ ಪಿತ್ತ ನೆತ್ತಿಗೇರಿದರೆ ಹೇಗೆಲ್ಲಾ ಆಡುತ್ತಾರೆ ಎಂಬುದಕ್ಕೆ ಪ್ರಜ್ವಲ್ ಪ್ರಕರಣ ಒಂದು ಪ್ರತ್ಯಕ್ಷ ಸಾಕ್ಷಿ ಎಂದು ಕುಟುಕಿದರು.

ರಾಜ್ಯಾದ್ಯಂತ ಸಂಘಟಿಸುವ ಈ ಕಾರ್ಯಕ್ರಮಕ್ಕೆ ಸುಮಾರು ೧೦ ಸಾವಿರಕ್ಕೂ ಅಧಿಕ ಜನ ಸೇರುವ ನಿರೀಕ್ಷೆ ಇದೆ. ಬದಲಾದ ಕಾಲಘಟ್ಟದಲ್ಲಿ ಮಹಿಳಾ ಸುರಕ್ಷತೆ ಅಪಾಯಕಾರಿ ಸ್ಥಿತಿಯಲ್ಲಿದೆ. ಹುಬ್ಬಳ್ಳಿಯಲ್ಲಿ ನಡೆದ ಇಬ್ಬರು ವಿದ್ಯಾರ್ಥಿನಿಯರ ಚಾಕುವಿನಿಂದ ಚುಚ್ಚಿದ ಹತ್ಯೆ ಪ್ರಕರಣಗಳು, ಹೋರಾಟದ ಸಂಗಾತಿ ಕೆ.ಆರ್‍.ಸೌಮ್ಯಾರ ೨೦ರ ಹರೆಯದ ಮಗಳನ್ನು ಹದಿಹರೆಯದ ಇಬ್ಬರು ಬಾಲಕರಿಂದಾದ ಹತ್ಯೆ ಪ್ರಕರಣ,  ಇವೆಲ್ಲಾ ಕೆಲ ಉದಾಹರಣೆ ಮಾತ್ರ. ಮಹಿಳೆಯನ್ನು ಭೋಗದ ವಸ್ತುವನ್ನಾಗಿ ನೋಡುತ್ತಿರುವ ಪರಿಣಾಮಗಳು ಇವೆ ಎಂದು ಹೇಳಿದರು.

ಪ್ರಜ್ವಲ್ ಪ್ರಕರಣಕ್ಕೆ ಸಂಬಂಧಿಸಿದಂತಹ ವೀಡಿಯೋಗಳು ಹಳೆಯ ವೀಡಿಯೋಗಳು ಎಂದು ಹೇಳುವ ರೇವಣ್ಣ ಯಾವ ಮನಸ್ಥಿತಿಯವರು. ಚಿಕ್ಕಪ್ಪ ಕುಮಾರಸ್ವಾಮಿ ಈ ವೀಡಿಯೋಗಳು ಚುನಾವಣೆಯಲ್ಲಿ ನಮ್ಮ ವರ್ಚಸ್ಸಿಗೆ ಕೆಟ್ಟ ಹೆಸರು ತರಲು ಮಾಡಿದವುಗಳಾಗಿವೆ ಎನ್ನುತ್ತಿದ್ದಾರೆ. ನಾವು ಯಾವ ಶತಮಾನದಲ್ಲಿದ್ದೇವೆ. ೨೧ನೇ ಶತಮಾನದ ಇಷ್ಟೊಂದು ಅನಾಗರೀಕವಾಗಿ ಪರಿವರ್ತನೆಯಾಗಿರುವುದು ಶೋಚನೀಯ. ಅಧಿಕಾರ, ದುಡ್ಡಿದ್ದರೆ ಏನೂ ಬೇಕಾದರೂ ಮಾಡಬಹುದು ಎಂಬವರಿಗೆ ಪಾಠ ಕಲಿಸಬೇಕಾಗಿದೆ.
ಎಂದರು.ಪತ್ರಿಕಾಗೋಷ್ಠಿಯಲ್ಲಿ ವಕೀಲರಾದ ಶ್ರೀಪಾಲ್ ಕೆ.ಪಿ.,ಬಿಸಿಯೂಟದ ನೌಕರರ ಸಂಘದ ಹನುಮವ್ವ, ಸಿಪಿಐಎಂನ ಪ್ರಭಾಕರ್‍, ಒಕ್ಕೂಟದ ಸದಸ್ಯ ನಾರಾಯಣ್ ಉಪಸ್ಥಿತರಿದ್ದರು.

…………………………………….

ಪ್ರಜ್ವಲ್ ಬಂಧನ ನಡೆದರೂ ʼಹಾಸನ ಚಲೋʼ ಕಾರ್ಯಕ್ರಮವು ನಿಲ್ಲುವುದಿಲ್ಲ. ಒಂದು ಸರಕಾರಕ್ಕೆ ಸಂಬಂಧಿಸಿದ ಬಸ್ಸಿನಲ್ಲಿ  ಪ್ರಯಾಣಿಸಲು ಆಧಾರ ಕಾರ್ಡ್‌  ತೋರಿಸಬೇಕಾಗಿದೆ. ಅಂತಹದ್ದರಲ್ಲಿ ಪಾಸ್ ಪೋರ್ಟ್‌ ಹೊಂದಿರುವ ವ್ಯಕ್ತಿಯನ್ನು ಇಲ್ಲಿಯವರೆಗೆ ಬಂಧಿಸಲಾಗಿವೆಂದರೆ ದುರಂತ. ಕೆಲಸ ಕೇಳಿ ಬಂದವರಿಗೆ ದೇಹ ಒಪ್ಪಿಸಿ ಎಂದು ಹೇಳುವವರಿಗೆ ಪಾಠ ಕಲಿಸಬೇಕಿದೆ.  ಪ್ರಕರಣದ ಕುರಿತಂತೆ ಸಮಗ್ರ ತನಿಖೆಯಾಗಬೇಕು, ಪ್ರತ್ಯಕ್ಷ ಮತ್ತು ಅಪ್ರತ್ಯಕ್ಷ ಆರೋಪಿಗಳ ಬಂಧನವಾಗಬೇಕು ಮತ್ತು ಶಿಕ್ಷೆಗೊಳಪಡಿಸಬೇಕು.

– ಹನುಮವ್ವ, ಬಿಸಿಯೂಟದ ನೌಕರರ ಸಂಘ ದ ಜಿಲ್ಲಾಧ್ಯಕ್ಷೆ