ಶಿವಮೊಗ್ಗ: ಚಿತ್ರ ನಿರ್ದೇಶಕ ಹಾಗೂ ನಟ ಹೇಮಂತ್ ಹೆಗಡೆ ಮತ್ತೊಂದು ಚಿತ್ರದ ನಿರ್ದೇಶನಕ್ಕೆ ಮುಂದಾಗಿದ್ದಾರೆ.ಈಗಾಗಲೇ ಕನ್ನಡ ಬೆಳ್ಳಿ ತೆರೆಯಲ್ಲಿ ಬಹು ಜನಪ್ರಯತೆ ಪಡೆದ ʼನಾ ನಿನ್ನ ಬಿಡಲಾರೆʼ ಹೆಸರಿನಲ್ಲಿಯೇ ಅವರೀಗ ಚಿತ್ರ ನಿರ್ದೇಶನ ಮಾಡಲು ಹೊರಟಿದ್ದು, ಅದರ ಪ್ರಚಾರದ ಭಾಗವಾಗಿಯೇ ಶಿವಮೊಗ್ಗದಲ್ಲಿ ʼಸಿನಿ ಸಂಭ್ರಮ ʼ ಎಂಬ ಕಾರ್ಯಕ್ರಮ ಮಾಡಲು ಯೋಜನೆ ಹಾಕಿಕೊಂಡಿದ್ದಾರೆ.
ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ವಿವರ ನೀಡಿದರು.’ನಾ ನಿನ್ನ ಬಿಡಲಾರೆ’ ಎಂಬ ಹಾರರ್ ಚಿತ್ರ ಸದ್ಯದಲ್ಲಿಯೇ ಸೆಟ್ಟ್‌ರೇಲಿದ್ದು ಅದರ ಪ್ರಚಾರ ಹಿನ್ನಲೆಯಲ್ಲಿ ಶಿವಮೊಗ್ಗದಲ್ಲಿ ಚಿತ್ರ ತಂಡದಿಂದ ಸಿನಿ ಸಂಭ್ರಮ ಎಂಬ ಬಹುದೊಡ್ಡ ಇವೆಂಟ್‌ನ್ನು ಅ.೧೭ರಂದು ಬೆಳಿಗ್ಗೆ ೯ ರಿಂದ ರಾತ್ರಿ ೯ರವರೆಗೆ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದರು.
ಸಿನಿಸಂಭ್ರಮ ಒಂದು ಬಹುದೊಡ್ಡ ಇವೆಂಟ್ ಆಗಲಿದೆ. ಇದರ ಅಂಗವಾಗಿ ಶ್ರೀಮತಿ ಶಿವಮೊಗ್ಗ ಸೌಂದರ್‍ಯ ಸ್ಪರ್ಧೆ, ಅಂತರಕಾಲೇಜು ಫ್ಯಾಷನ್ ಶೋ, ಡ್ರಾಮಾ ಜ್ಯೂನಿಯರ್‍ಸ್, ಡ್ರಾಮಾ ಸೀನಿಯರ್‍ಸ್, ಸಿನಿಮಾ ಡ್ಯಾನ್ಸರ್‌ಗಳಿಂದ ನೃತ್ಯ ಪ್ರದರ್ಶನವನ್ನು ಆಯೋಜಿಸಲಾಗಿದೆ. ಜೊತೆಗೆ ವಾಸಕಿ ವೈಭವ್ ಮತ್ತು ತಂಡದವರಿಂದ ಸಂಗೀತ ಸಂಜೆ ಏರ್ಪಡಿಸಲಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಸುಮಾರು ೩೦ ಕೋಟಿ ರೂ. ಬೆಲೆಬಾಳುವ ಶ್ವಾನದ ಪ್ರದರ್ಶನವು ಇರುತ್ತದೆ. ನಟಿಯರಾದ ಭಾವನಾ, ಕಿಶೋರ್, ಅಪೂರ್ವ, ಶರತ್ ಲೋಹಿತಾಶ್ವ ಸೇರಿದಂತೆ ಹಲವು ನಟ ನಟಿಯರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
’ನಾ ನಿನ್ನ ಬಿಡಲಾರೆ’ ಚಿತ್ರ ನಿರ್ಮಾಣಕ್ಕೆ ಈಗಾಗಲೇ ಮೂಹೂರ್ತ ನಡೆದಿದ್ದು, ಶೀರ್ಷಿಕೆ ಮಾತ್ರ ೧೯೮೯ರಲ್ಲಿ ತೆರೆಕಂಡ ನಾನಿನ್ನ ಬಿಡಲಾರೆ ಸಿನಿಮಾದ್ದಾಗಿದೆ. ಆದರೆ ಕಥೆಗೂ ಮತ್ತು ಚಿತ್ರಕ್ಕೂ ಸಂಬಂಧವಿಲ್ಲ. ಇದೊಂದು ಕೊಲೆಯ ಸುತ್ತ ಇರುವ ಭಯಾನಕ ಚಿತ್ರವಾಗಿದೆ. ಡಿಸೆಂಬರ್‌ನಲ್ಲಿ ಚಿತ್ರ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ನಟ ರೇವಣಸಿದ್ದಯ್ಯ ಮತ್ತಿತರರಿದ್ದರು.
ಕೋಟ್ಸ್
ಸಿನಿಮಾ ಪ್ರಚಾರದ ಭಾಗವಾಗಿ ನಡೆಯುತ್ತಿರುವ ಸಿನಿ ಸಂಭ್ರಮ ಕಾರ್ಯಕ್ರಮವು ಒಂದು ವಿಶಿಷ್ಟ ಕಾರ್ಯಕ್ರಮ. ಸೌಂದರ್‍ಯ ಸ್ಪರ್ಧೆ, ಅಂತರಕಾಲೇಜು ಫ್ಯಾಷನ್ ಶೋ, ನೃತ್ಯ ಪ್ರದರ್ಶನದ ಜತೆಗೆ ವಾಸಕಿ ವೈಭವ್ ಮತ್ತು ತಂಡದವರಿಂದ ಸಂಗೀತ ಸಂಜೆ ಇದೆ. ಹಾಗೆಯೇ ಸುಮಾರು ೩೦ ಕೋಟಿ ರೂ. ಬೆಲೆಬಾಳುವ ಶ್ವಾನದ ಪ್ರದರ್ಶನವು ಇರುತ್ತದೆ. ಹಲವು ನಟ-ನಟಿಯರು ಕೂಡ ಪಾಲ್ಗೊಳ್ಳಲಿದ್ದಾರೆ.