ಬೆಂಗಳೂರು: ಬಂಧಿತ ನಟ ದರ್ಶನ್ ಅವರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿರುವ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮುಂದಿ 5 ದಿನಗಳವರೆಗೆ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಅನ್ನಪೂರ್ಣೇಶ್ವರಿ ನಗರ ಠಾಣೆಯ 200 ಮೀಟರ್ ವ್ಯಾಪ್ತಿಯಲ್ಲಿ ಈ ಆದೇಶ ಜಾರಿಗೊಳಿಸಲಾಗಿದೆ. ದರ್ಶನ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೆರೆದು ಕಾನೂನು ಸುವ್ಯವಸ್ಥೆಗೆ ಧಕ್ಕೆ ಮಾಡಬಹುದು ಎಂಬ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ನಿನ್ನೆಯೂ `ಡಿ ಬಾಸ್ ಡಿ ಬಾಸ್’ ಎಂದು ಅಲ್ಲಿಗೆ ಬಂದು ಅಭಿಮಾನಿಗಳು ಕೂಗುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದ ಘಟನೆ ವರದಿಯಾಗಿತ್ತು.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್, ಪವಿತ್ರ ಗೌಡ ಮತ್ತು ಇತರರನ್ನು ಬಂಧಿಸಿ ಇಟ್ಟಿರುವ ಅನ್ನಪೂರ್ಣೇಶ್ವರಿ ನಗರ ಠಾಣೆ ಸುತ್ತ ಶಾಮಿಯಾನ ಹಾಕಿ ಮುಚ್ಚಲಾಗಿದೆ. ಒಳಗಡೆ ಏನು ನಡೆಯುತ್ತಿದೆ ಎಂಬ ಕುತೂಹಲದಿಂದ ಇಣುಕುವವರು ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.