ಮಕ್ಕಳು ಸಾಹಸ ಪ್ರವೃತ್ತಿ ಮೈಗೂಡಿಸಿಕೊಳ್ಳುವುದು ಅವಶ್ಯ: ಜಿ.ವಿಜಯಕುಮಾರ್

ಶಿವಮೊಗ್ಗ: ಮಕ್ಕಳು ವಿದ್ಯಾಭ್ಯಾಸದೊಂದಿಗೆ ಸಾಹಸ ಪ್ರವೃತಿಯನ್ನು ಬೆಳೆಸಿಕೊಳ್ಳಬೇಕು. ಸ್ನೇಹ, ಸೇವೆ, ಸಾಹಸ, ಸಂಪರ್ಕ ವಿದ್ಯಾರ್ಥಿಗಳಿಗೆ ಉತ್ತಮ ಪ್ರಜೆಯನ್ನಾಗಿ ಮಾಡಲು ಸಹಕಾರಿ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯಕುಮಾರ್ ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ಕೌಟ್ ಅಂಡ್ ಗೈಡ್ಸ್, ರೋವರ್ಸ್ ಮತ್ತು ರೆಂಜರ್ಸ್ ವಿದ್ಯಾರ್ಥಿಗಳ ಚಾರಣಕ್ಕೆ ಚಾಲನೆ ನೀಡಿ ಮಾತನಾಡಿ, ಸಾರ್ವಜನಿಕರು ಸಂಕಷ್ಟದಲ್ಲಿ ಇದ್ದಾಗ ಸಹಕರಿಸಲು ಅನುಕೂಲ ವಾಗುವಂತಹ ಹಲವು ಸಹಾಯಗಳನ್ನು ಹೇಳಿಕೊಡಲಾಗುತ್ತದೆ ಎಂದು ತಿಳಿಸಿದರು.

ಯೂತ್ ಹಾಸ್ಟೆಲ್ ಚೇರ್ಮನ್ ವಾಗೇಶ್ ಮಾತನಾಡಿ, ಸಾರ್ವಜನಿಕರಿಗೆ ನಮ್ಮ ಸಹ್ಯಾದ್ರಿ ಶ್ರೇಣಿಯಲ್ಲಿ ಆಗಾಗ ಚಾರಣ ಹಾಗೂ ಈಗಾಗಲೇ ಸಾವಿರಾರು ಸದಸ್ಯರಿಗೆ ಹಿಮಾಲಯ ಚಾರಣ ಏರ್ಪಡಿಸಲಾಗಿದೆ. ಕಾಲೇಜು ವಿದ್ಯಾರ್ಥಿಗಳಿಗೆ ಸಾಹಸ ಪ್ರವೃತ್ತಿ ಮೈಗೂಡಿಸಿಕೊಳ್ಳಲು ಚಾರಣ ಏರ್ಪಡಿಸಲಾಗಿದೆ ಎಂದರು.

ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ರಾಜೇಶ್ ಅವಲಕ್ಕಿ ಮಾತನಾಡಿ, ಸೇವಾ ವೇಷಧಾರಿಗಳಾದ ತಮ್ಮ ಮೇಲೆ ಸಾರ್ವಜನಿಕರ ಗಮನವಿರುತ್ತದೆ. ಎಲ್ಲರೂ ಶಿಸ್ತಿನಿಂದ ನಡೆದುಕೊಳ್ಳಬೇಕು. ಸಾಹಸ ಪ್ರವೃತ್ತಿಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು. ಇದರಿಂದ ಆತ್ಮವಿಶ್ವಾಸ ವೃದ್ಧಿಸುತ್ತದೆ ಎಂದು ತಿಳಿಸಿದರು.

ಪೂರ್ಣಿಮಾ ಅವರು ಪ್ರಾರ್ಥಿಸಿದರು. ಪವಿತ್ರಾ ಸ್ವಾಗತಿಸಿದರು. ಜಯಕಿರ್ತಿ ವಂದನಾರ್ಪಣೆ ನಡೆಸಿಕೊಟ್ಟರು. ಮಲ್ಲಿಕಾರ್ಜುನ್ ಕಾನೂರ್ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಪ್ರಾಚಾರ್ಯ ಡಾ. ಚನ್ನೇಶ್, ಡಾ. ಚಂದ್ರಶೇಖರ್, ಗಂಧರ್ವ, ಸುರೇಶ, ಗಿರೀಶ್ ಕಾಮತ್, ಹರೀಶ್ ಪಾಟೀಲ್ ಮುಂತಾದವರು ಇದ್ದರು.