ಚಿಕ್ಕಮಗಳೂರು: ನಗರಕ್ಕೆ ದಶಕಗಳಿಂದ ಇನ್ನೂ ಬಾರದ ಅಮೃತ್ ಯೋಜನೆ ನೀರು, ನಗರದ ಯುಜಿಡಿಗೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಇಬ್ಬರು ಅಧಿಕಾರಿಗಳ ಮೇಲೆ ಕ್ರಮ ಜರುಗಿದೆ. ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಇಂದು ನಡೆದ ಸಭೆಯಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ ಇಂಜಿನಿಯರ್ ಗಳನ್ನು ತರಾಟೆಗೆ ತೆಗೆದುಕೊಂಡು ಒಬ್ಬರನ್ನು ಅಮಾನತುಗೊಳಿಸಿ ಮತ್ತೊಬ್ಬರನ್ನು ವರ್ಗಾವಣೆಗೊಳಿಸಲು ಸೂಚನೆ ನೀಡಿದರು.
ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ ಇಂಜಿನಿಯರ್ ಗಳ ವಿರುದ್ಧ ಗರಂ ಆದರು. ಯೋಜನೆಯ ಅಸಿಸ್ಟೆಂಟ್ ಇಂಜಿನಿಯರ್ ರನ್ನು ಸ್ಥಳದಲ್ಲಿ ಅಮಾನತು ಮಾಡಲು ಸೂಚನೆ ನೀಡಿದರು.
ಮತ್ತೋರ್ವ ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಇಂಜಿನಿಯರ್ ಅವರನ್ನು ತಕ್ಷಣ ಜಾರಿಗೆ ಬರುವಂತೆ ವರ್ಗಾವಣೆ ಮಾಡಲು ಸೂಚಿಸಿದರು. ಸ್ವಾರಸ್ಯ ಎಂದರೆ ಇದೇ ಚರ್ಚೆ ನಡೆಯುವ ವೇಳೆ ಆಗಮಿಸಿದ ಎಇ ಎಲ್ಲಿದ್ರಿ ಇಷ್ಟೊತ್ತು ಎಂದರೆ ಹೊರಗಿದ್ದೆ ಎನ್ನುತ್ತಿದ್ದಂತೆ ಸಿಟ್ಟಾದ ಸಚಿವ ಭೈರತಿ ಸುರೇಶ ಹೊರಗೆ ಇದ್ದು ಬಿಡಿ ಎಂದರು.
ಎಇಇ ಅವರನ್ನು ಗುಲ್ಬರ್ಗಾ ಜಿಲ್ಲೆಗೆ ವರ್ಗಾವಣೆ ಮಾಡಿ ಎಂದು ಹೇಳಿ ನೀವೇನು ತಮಾಷೆ ಮಾಡುತ್ತಿದ್ದೀರಾ ಕೋಟಿ ಕೋಟಿ ಹಣ ಇದ್ದರೂ ಕೆಲಸ ಮಾಡಲು ಏನು ಸಮಸ್ಯೆ ಎಂದು ಗುಡುಗಿದರು.