ಶಿವಮೊಗ್ಗ : ರಾಜ್ಯಸರ್ಕಾರ ಪ್ರಾಮಾಣಿಕ ವಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ರೈತಸಂಘವು ಅದರ ಮೇಲೆ ನಿಗಾ ಇಡಲು ಪರ್ಯಾಯ ಸರ್ಕಾರವನ್ನು (ಶ್ಯಾಡೋ ಸಂಪುಟ) ರಚಿಸಲು ತೀರ್ಮಾನಿಸಿದೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಎಚ್. ಆರ್. ಬಸವರಾಜಪ್ಪ, ರಾಜ್ಯ ಸಂಪುಟ ದಲ್ಲಿ ಇರುವಂತೆ ಎಲ್ಲಾ ೩೬ ಖಾತೆಗಳನ್ನು ೩೬ ಜನರು ಪರ್ಯಾಯ ಸರ್ಕಾರದಲ್ಲಿ ನಿರ್ವಹಿ ಸುವರು ಎಂದರು.
ಸರ್ಕಾರದ ಯೋಜನೆಗಳನ್ನು ಮಧವರ್ತಿ ಗಳ ಹಾವಳಿ ಇಲ್ಲದೆ ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕೆಲಸವನ್ನು ಪರ್ಯಾಯ ಸರ್ಕಾರ ಮಾಡಿದೆ. ಪ್ರತೀ ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಸರ್ಕಾರ ರಚಿಸಲಾಗುವುದು. ಯುವ ಜನರಿಗೆ ಇದರಲ್ಲಿ ಹೆಚ್ಚಿನ ಆದತೆ ನೀಡಲಾಗುವುದು ಎಂದರು.
ಸರ್ಕಾರದ ವಿವಿಧ ಇಲಾಖೆಗಳ ಯೋಜನೆ ಗಳು ಮಧ್ಯವರ್ತಿಗಳ ಪಾಲಾಗುತ್ತಿದೆ. ಇಲಾಖೆಗಳು ಹೊರಡಿಸುವ ಆದೇಶಗಳು ಜನರಿಗೆ ತಲುಪುತ್ತಿಲ್ಲ. ಕಾನೂನಿನ ಬಗ್ಗೆ ಮಾಹಿತಿ ಇಲ್ಲ. ಸೌಲಭಗಳನ್ನು ಪಡೆಯಲು ಏನು ಮಾಡಬೇಕೆನ್ನುವ ಮಾಹಿತಿ ಜನರಲ್ಲಿಲ್ಲ. ಜನಪ್ರತಿನಿಧಿಗಳು ಇದನ್ನು ನಿರ್ಲಕ್ಷಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ರಾಂತಿಕಾರಕವಾಗಿ ಪರ್ಯಾಯ ಸರ್ಕಾರಚಿಸಲು ಚಿಂತನೆ ನಡೆಸಲಾಗಿದೆ ಎಂದರು.
ಪರ್ಯಾಯ ಸರ್ಕಾರದಲ್ಲಿ ಜನರಿಗೆ ಮನೆ ಬಾಗಿಲಿಗೆ ಎಲ್ಲಾ ಸೌಲಭ ತಲುಪುವಂತೆ ಮಾಡಲಾಗುವುದು. ರೈತರಲ್ಲಿ ಧೈರ್ಯ ತುಂಬಿ ಆತ್ಮಹತ್ಯೆ ಮಾಡಿಕೊಳ್ಳದಂತೆ ಮನವೊಲಿಸಲಾ ಗುವುದು. ಇನ್ನು ಮುಂದೆ ಬೀದಿ ಚಳುವಳಿಗಳನ್ನು ಬಿಟ್ಟು, ಇಂತಹ ಯೋಜನೆ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.
ಪ್ರತೀ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಈ ಸಂಬಂಧ ಸಭೆ ನಡೆಸಿ, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವವರು ಪ್ರಾಮಾಣಿಕರಾಗಿದ್ದು, ಜನರ ಸಮಸ್ಯೆಗೆ ಸ್ಪಂದಿಸುವವರಾಗಿರಬೇಕು. ಆಸಕ್ತರು ಜಿಲ್ಲಾಧ್ಯಕ್ಷರು (೯೪೪೮೮೮೪೯೦೯) ಅಥವಾ ಆಯಾಯ ತಾಲೂಕು ಅಧ್ಯಕ್ಷರನ್ನು ಸಂಪರ್ಕಿಸಬಹುದು ಎಂದರು.
ಪತ್ರಿಕಗೋಷ್ಠಿಯಲ್ಲಿ ಸಂಘದ ಮುಖಂಡ ರಾದ ಮಂಜುನಾಥ್ ಗೌಡ, ಹಿಟ್ಟೂರು ರಾಜು, ಎಂ. ಪರಮಣ್ಣ, ಇ. ಮಲ್ಲೇಶಪ್ಪ, ಡಿ.ಎಚ್. ರಾಮಚಂದ್ರಪ್ಪ, ಕೆ. ರಾಘವೇಂದ್ರ, ಎಸ್. ಶಿವಮೂರ್ತಿ ಮೊದಲಾದವರಿದ್ದರು.