ಶಿವಮೊಗ್ಗ : ನಗರದ ಹೊರವಲಯ ಮಲ್ಲಿಗೇನಹಳ್ಳಿಯಲ್ಲಿ ಸಾರ್ವಜನಿಕ ವಿತರಣೆಗಾಗಿ ಸುಮಾರು 172ಎಕರೆ ಪ್ರದೇಶದಲ್ಲಿ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು 2009-10 ನೇ ಸಾಲಿನಲ್ಲಿ
ನಿರ್ಮಾಣಮಾಡಿದ್ದ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯ ನಿವೇಶನಗಳನ್ನು ನ್ಯಾಯಾಲಯದ ತೀರ್ಪಿನಂತೆ ಹಂಚಿಕೆ ಮಾಡಲಾಗುವುದು ಎಂದು ಸೂಡಾ ಅಧ್ಯಕ್ಷ ಹೆಚ್.ಎನ್.ಸುಂದರೇಶ್ ಸ್ಪಷ್ಟಪಡಿಸಿದ್ದಾರೆ.
ಶನಿವಾರ ತಮ್ಮ ಕಚೇರಿ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಈ ಹಿಂದೆ ಹಂಚಿಕೆಯಲ್ಲಿ ಆಗಿರಬಹುದಾದ ಸಮಸ್ಯೆಯ ಪರಿಹಾರಕ್ಕಾಗಿ 2023ರ ಆಗಸ್ಟ್ ತಿಂಗಳಿನಲ್ಲಿ ನ್ಯಾಯಾಲಯ ತೀರ್ಪು ನೀಡಿದೆ. ಆ ತೀರ್ಪಿನ ಅನುಸಾರವೇ ಈಗ ನೀಡಿದ ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ನ್ಯಾಯಾಲಯದ ತೀರ್ಪಿನಂತೆ ಸೂಡಾದಲ್ಲಿ ಸೇವೆ ಸಲ್ಲಿಸುತ್ತಿರುವ 17 ಸಿಬ್ಬಂದಿಗಳು ಸೇರಿದಂತೆ ಅಧ್ಯಕ್ಷರ ವಿವೇಚನಾ ಕೋಟಾದಡಿ ಹಂಚಿಕೆ ಮಾಡಲಾಗಿದ್ದ 142 ಜನರು ಮತ್ತು ಪತಿ-ಪತ್ನಿ ಪ್ರಕರಣಗಳಲ್ಲಿ ಆಯ್ಕೆಗೊಂಡಿದ್ದ 16 ಫಲಾನುಭವಿಗಳನ್ನು ಹೊರತುಪಡಿಸಿ, ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಈವರೆಗೆ ಪರಿಶೀಲಿಸಲಾಗಿರುವ 318 ಅರ್ಜಿಗಳ ಫಲಾನುಭವಿಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ನ್ಯಾಯಾಲಯದ ಈ ಆದೇಶಕ್ಕೆ ಮೊದಲು, ಲೋಕಾಯುಕ್ತರ ತನಿಖಾ ವರದಿಯ ನಂತರ, ಪ್ರಾಧಿಕಾರದ ಸಭೆಯ ನಿರ್ಣಯದಂತೆ ನಿವೃತ್ತ ನ್ಯಾಯಾಧೀಶರ ಸಮಿತಿಯಲ್ಲಿ ವಿಸ್ತøತವಾಗಿ ಸಮಾಲೋಚನೆ ನಡೆಸಿ, ಅರ್ಹರನ್ನು ಆಯ್ಕೆ ಮಾಡಲಾಗಿತ್ತು. ಕೆಲವು ಸೌಲಭ್ಯ ವಂಚಿತ ಅರ್ಜಿದಾರರು ಹಲವು ನಿಯಮಗಳನ್ನು ಉಲ್ಲಂಘಿಸಲಾಗಿರುವ ಬಗ್ಗೆ ಉಚ್ಚ ನ್ಯಾಯಾಲದಯಲ್ಲಿ ಪ್ರಶ್ನಿಸಿದ್ದರು. ಸದರಿ ಪ್ರಕರಣದಲ್ಲಿ ವಾದ-ವಿವಾದಗಳನ್ನು ಆಲಿಸಿದ ನ್ಯಾಯಾಲಯವು ನೀಡಿದ ತೀರ್ಪಿನಂತೆ ಪ್ರಸ್ತುತ ಕ್ರಮ ವಹಿಸಲಾಗುತ್ತಿದೆ ಎಂದರು.
ವಾಜಪೇಯಿ ಬಡಾವಣೆಯಲ್ಲಿ 1801 ನಿವೇಶನಗಳನ್ನು ನಿರ್ಮಾಣ ಮಾಡಲಾಗಿದೆ. ಈ ನಿವೇಶನಗಳಲ್ಲಿ 217 ನಿವೇಶನಗಳನ್ನು ಭೂಮಾಲೀಕರಿಗೆ ಪರಿಹಾರ ರೂಪದಲ್ಲಿ ನೀಡಲಾಗಿದೆ. 250 ಮೂಲೆ ನಿವೇಶನಗಳನ್ನು ಕಾಯ್ದಿರಿಸಲಾಗಿದೆ. 19 ನಿವೇಶನಗಳನ್ನು ವೀರಪ್ಪನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದವರಿಗೆ ಸರ್ಕಾರದ ಆದೇಶದಂತೆ ವಿತರಿಸಲಾಗಿದೆ. ಭೂಮಾಲೀಕರಿಗೆ ನಿವೇಶನ ರೂಪದ ಪರಿಹಾರ ಪಡೆಯದೇ ನಗದು ರೂಪದ ಪರಿಹಾರ ಪಡೆದಾಗ ಉಳಿದ 142 ನಿವೇಶನಗಳನ್ನು ವಿವೇಚನಾ ಕೋಟಾದಡಿ ಹಂಚಿಕೆ ಮಾಡಲಾಗಿದೆ ಎಂದರು.ಸಭೆಯಲ್ಲಿ ಸೂಡಾ ಆಯುಕ್ತ ವಿಶ್ವನಾಥ ಮುದ್ದಜ್ಜಿ, ಇಂಜಿನಿಯರ್ ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.