ಇದ್ದು ಇಲ್ಲದಂತಾಗುತ್ತಿರುವ ಶಿವಮೊಗ್ಗ ವಿಮಾನ ನಿಲ್ದಾಣ !

ರಾತ್ರಿ ಮತ್ತು ಮಳೆ  ಸಮಯಕ್ಕೆ ಗೆ ವಿಮಾನಗಳು ಹಾರುವುದೇ ಇಲ್ಲ- ಟಿಕೆಟ್‌ ಬುಕ್‌ ಆದವರು ಊರಿಗೆ ತಲುಪುತ್ತಿಲ್ಲಶಿವಮೊಗ್ಗ : ಸಾವಿರಾರು ಕೋಟಿ ರೂ. ವೆಚ್ಚದ ಶಿವಮೊಗ್ಗ ವಿಮಾನ ನಿಲ್ದಾಣದ ಬಗೆಗಿನ ನಿರೀಕ್ಷೆಗಳು ಹುಸಿಯಾಗುವ ಆತಂಕ ಎದುರಾಗುತ್ತಿದೆ. ಮಲೆನಾಡಿನ ಜನರ ಬಹು ವರ್ಷಗಳ ಕನಸು ನನಸಾದ ಸಂಭ್ರಮಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣ ಸಾಕ್ಷಿಯಾಗಿತ್ತಾದರೂ, ಮಳೆ ಮತ್ತು ರಾತ್ರಿ ಸಂದರ್ಭದಲ್ಲಿ ಇಲ್ಲಿಂದ ವಿಮಾನಗಳೇ ಹಾರುವ ತಂತ್ರಜ್ಞಾನ ಈಗಲೂ ಇಲ್ಲಿಗೆ ಲಭ್ಯವಾಗದೆ ಇರುವುದು ದೂರ ಪ್ರಯಾಣದ ಪ್ರಯಾಣಿಕರಿಗೆ ಭಾರೀ ನಿರಾಸೆ ತರಿಸಿದೆ.
ವಿಶೇಷವಾಗಿ ಶನಿವಾರ ಮಳೆ ಕಾರಣಕ್ಕೆ ಗೋವಾಕ್ಕೆ ಹೋಗಬೇಕಿದ್ದ ವಿಮಾನ ಹಾರಾಟ ರದ್ದಾಯಿತು. ಗೋವಾದಿಂದ ಬಂದು ವಾಪಾಸ್‌ ಮತ್ತೆ ಗೋವಾಕ್ಕೆ ಹೋಗಬೇಕಿದ್ದ ಸ್ಟಾರ್‌ ಏರ್‌ ಲೈನ್ಸ್‌ ವಿಮಾನ , ದಟ್ಟವಾದ ಮಳೆ ಮೋಡ ಇದ್ದ ಕಾರಣಕ್ಕೆ ಇಲ್ಲಿ ಇಳಿಯಲಾಗದೆ, ನೇರವಾಗಿ ಹೈದ್ರಾಬಾದ್‌ ಗೆ ಹೋದ ಕಾರಣಕ್ಕೆ ಗೋವಾಕ್ಕೆ ಹೋಗಬೇಕಿದ್ದ ವಿಮಾನ ಪ್ರಯಾಣ ರದ್ದಾಯಿತು. ಇದರ ಪರಿಣಾಮ ಟಿಕೆಟ್‌ ಬುಕ್‌ ಮಾಡಿ ಗೋವಾಕ್ಕೆ ಹೊರಡಲು ವಿಮಾನಕ್ಕಾಗಿ ಕಾಯುತ್ತಿದ್ದ ಶಿವಮೊಗ್ಗದ  ಪ್ರಯಾಣಿಕರು ತೀವ್ರ ನಿರಾಸೆಯಿಂದ ವಾಪಾಸ್‌ ತಮ್ಮ ಮನೆಗಳಿಗೆ ಮರಳಿದ ಘಟನೆ ನಡೆಯಿತು. ಇಂತಹ ಸಂದರ್ಭಗಳು ಆಗಾಗ ಮರುಕಳಿಸಿದರೆ ಶಿವಮೊಗ್ಗದ ಬಹುಕೋಟಿ ವೆಚ್ಚದ ಬಹು ನಿರೀಕ್ಷಿತ ವಿಮಾನ ನಿಲ್ದಾಣ ಇಲ್ಲದಂತಾಗುವುದು ಗ್ಯಾರೆಂಟಿ ಎಂದು ಪ್ರಯಾಣಿಕರು ಆಕ್ರೋಶ ಹೊರ ಹಾಕಿದರು.
ಸದ್ಯಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಹಗಲು ಹೊತ್ತು ಮತ್ತು ಮಳೆ ಇಲ್ಲದ ಸಂದರ್ಭಕ್ಕೆ ವಿಮಾನಗಳು ಸುಲಭವಾಗಿ ಬಂದಿಳಿಯುವ ಮತ್ತು ಹಾರುವುದಕ್ಕೆ ಪೂರಕವಾದ ತಂತ್ರಜ್ಞಾನದ ವ್ಯವಸ್ಥೆಯಿದೆ. ರಾತ್ರಿ ವೇಳೆಯೂ ವಿಮಾನಗಳು ಬಂದಿಳಿಯುವುದು ಮತ್ತು ಹಾರುವುದಕ್ಕೆ ಅಗತ್ಯ ತಂತ್ರಜ್ಞಾನದ ವ್ಯವಸ್ಥೆ ಮತ್ತು ಅನುಮತಿ ಸಿಗಬೇಕಿದೆ. ಈ ಪ್ರಕ್ರಿಯೆ ಈಗ ನಡೆಯುತ್ತಿದೆಯಾದರೂ, ಅದು ಚುನಾವಣೆ ಕಾರಣಕ್ಕೆ ಚುರುಕುಗೊಂಡಿಲ್ಲ. ಅದೇ ವೇಳೆ, ಮಳೆಗಾಲಕ್ಕೂ ವಿಮಾನಗಳು ಸುಲಭವಾಗಿ ಬಂದಿಳಿಯುವುದಕ್ಕೆ ಮತ್ತು ಹಾರಾಟ ಮಾಡುವುದಕ್ಕೆ ಅಗತ್ಯ ವ್ಯವಸ್ಥೆ ಕಲ್ಪಿಸಬೇಕಿದೆ. ಆದರೆ ಆಡಳಿತ ವ್ಯವಸ್ಥೆ ಅತ್ತ ಹೆಚ್ಚು ಗಮನ ಹರಿಸದ ಪರಿಣಾಮ , ಮಳೆ ಸೀಸನ್‌ ಗೆ ವಿಮಾನಗಳ ಹಾರಾಟ ಅನಿವಾರ್ಯವೇ ಎನ್ನುವಂತೆ ರದ್ದಾಗುತ್ತವೆ. ಅದರ ಪರಿಣಾಮ ಪ್ರಯಾಣಿಕರ ಮೇಲಾಗುತ್ತಿದೆ. ಮೇ. ೨೫ ರಂದು ಗೋವಾಕ್ಕೆ ಹೊರಟಿದ್ದ ಪ್ರಯಾಣಿಕರ ಮೇಲೆಯೇ ಈ ಏಫೆಕ್ಟ್‌ ಆಗಿದೆ. ವಿಮಾನವೇ ರದ್ದಾದ ಮೇಲೆ, ಅವರು ಗೋವಾಕ್ಕೆ ಹಾರುವುದಾದರೂ ಹೇಗೆ? ಅನ್ಯ ದಾರಿ ಯಿಲ್ಲದೆ ಬಂದ ದಾರಿಗೆ ಸುಂಕವಿಲ್ಲದಂತೆ ಅವರೆಲ್ಲರೂ ವಾಪಾಸ್‌ ಆದರು.
 ʼ ನಿಗದಿತ ಕಾರ್ಯಕ್ರಮದ ಮೇಲೆ ಮೇ. ೨೫ ರಂದು ಶನಿವಾರ ಶಿವಮೊಗ್ಗದಿಂದ ಗೋವಾಕ್ಕೆ ವಿಮಾನದ ಮುಂಗಡ ಟಿಕೆಟ್‌ ಬುಕ್‌ ಮಾಡಿದ್ದೆ. ಹ್ಯಾಗೂ ವಿಮಾನ ಪ್ರಯಾಣವಲ್ಲವೇ ಅಂದು ನಿಗದಿತ ಕಾರ್ಯಕ್ರಮಕ್ಕೆ ಸರಿಯಾದ ಸಮಯಕ್ಕೆ ಹಾಜರಿರುವುದಾಗಿ ಅಲ್ಲಿನ ಕಾರ್ಯಕ್ರಮ ಆಯೋಜಕರಿಗೆ ಪೋನ್‌ ಮೂಲಕ ಮಾಹಿತಿ ನೀಡಿದ್ದೆ.  ಇದು ತುಂಬಾ ಮುಖ್ಯವಾದ ಕಾರ್ಯಕ್ರಮ. ಹೆಚ್ಚು ಕಡಿಮೆ ಒಂದು ತಿಂಗಳ ಹಿಂದೆಯೇ ನಿಗದಿ ಆಗಿತ್ತು. ಅದಕ್ಕೆ ತಕ್ಕಂತೆಯೇ ನಾನು ವಿಮಾನದ ಟಿಕೆಟ್‌ ಬುಕ್‌  ಮಾಡಿದ್ದೆ. ಆದರೆ ಶನಿವಾರ ಮಳೆ ಮೋಡ ಇದ್ದ ಕಾರಣಕ್ಕೆ ಗೋವಾದಿಂದ ಬರಬೇಕಿದ್ದ ಸ್ಟಾರ್‌ ಏರ್‌ ಲೈನ್ಸ್‌ ವಿಮಾನ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಭೂ ಸ್ಪರ್ಶ ಮಾಡುವುದಕ್ಕಾಗಿಲ್ಲ ಎನ್ನುವ ಮಾಹಿತಿಯೊಂದಿಗೆ ಪ್ರಯಾಣ ರದ್ದಾಯಿತು. ಆದರೆ ವಿಮಾನ ನಿಲ್ದಾಣದ ಸಿಬ್ಬಂದಿ ಇದನ್ನು ಹ್ಯಾಗೋ ಸುಲಭವಾಗಿ ಹೇಳಿ ತಪ್ಪಿಸಿಕೊಂಡರು, ಆದರೆ ಒಂದು ತಿಂಗಳ ಹಿಂದೆಯೇ ನಿಗದಿಯಾಗಿದ್ದ ಬಹುಮುಖ್ಯಕಾರ್ಯಕ್ರಮವೊಂದಕ್ಕೆ ಇನ್ನಾವುದೋ ನನ್ನದಲ್ಲದ ಕಾರಣಕ್ಕೆ ಪಾಲ್ಗೊಳ್ಳದೆ ಹೋಗಿದ್ದು ನನಗೆ ಅತೀವ ಬೇಸರ ತಂದಿತು. ಇಂತಹ ವಿಮಾನ ಪ್ರಯಾಣದ ವ್ಯವಸ್ಥೆ ಇಲ್ಲದಿದ್ದರೂ ಪರ್ವಾಗಿಲ್ಲ. ಯಾಕೆಂದರೆ ಜನರು ಇದನ್ನು ನಂಬಿಕೊಂಡು ಮೋಸ ಹೋಗುವುದಕ್ಕಿಂತ ಬೇರೆ ಮಾರ್ಗದಲ್ಲಾದರೂ ಗೋವಾಕ್ಕೆ ಹೋಗುತ್ತಾರೆʼಎಂದು ಶನಿವಾರ ಗೋವಾಕ್ಕೆ ತೆರಳಲು ಸಾಧ್ಯವಾಗದೆ ವಾಪಾಸ್‌ ಆದ ಶಿವಮೊಗ್ಗ ಪ್ರಯಾಣಿಕರೊಬ್ಬರು ಆಕ್ರೋಶ ಹೊರ ಹಾಕಿದರು.
ಬಹು ನಿರೀಕ್ಷಿತ ಶಿವಮೊಗ್ಗ ವಿಮಾನ ನಿಲ್ದಾಣದ ಕಾಮಗಾರಿ, ಉದ್ಘಾಟನೆ ಕಾರ್ಯಕ್ರಮ ಎಲ್ಲವೂ ತ್ವರಿತಗತಿಯಲ್ಲೇ ನಡೆದು ಹೋದವು. ಎಲ್ಲರೂ ವಿಶೇಷ ಕಾಳಜಿ ವಹಿಸಿ ಇದನ್ನು ಮುಗಿಸಿ ಬಿಟ್ಟರು. ಅವರಿಗೆ ಅನುಕೂಲಕ್ಕೆ ತಕ್ಕಂತೆ ಅಲ್ಲಿಂದಲೇ ಸಾಕಷ್ಟು ಪ್ರಯಾಣ ಮಾಡಿದರು. ಆದರೆ ಈಗ ದೂರದೂರಗಳ ಪ್ರಯಾಣಿಕರಿಗೆ ಆಗುವ ತೊಂದರೆಯನ್ನು ಅವರೇ ಬಗೆಹರಿಸಿದರೆ, ಶಿವಮೊಗ್ಗ ವಿಮಾನ ನಿಲ್ದಾಣದ ಘನತೆಯೂ ಉಳಿಯಲಿದೆ. ಅದಿಲ್ಲದಿದ್ದರೆ ಸಾವಿರಾರು ಕೋಟಿ ವೆಚ್ಚದ ವಿಮಾನ ನಿಲ್ದಾಣ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಲಿದೆ ಎನ್ನುವುದು ನೊಂದ ಪ್ರಯಾಣಿಕರ ಅಳಲು.

……………………………..
ಶನಿವಾರ ಮಳೆ ಮೋಡ ಇದ್ದ ಕಾರಣಕ್ಕೆ ಗೋವಾದಿಂದ ಬರಬೇಕಿದ್ದ ಸ್ಟಾರ್‌ ಏರ್‌ ಲೈನ್ಸ್‌ ವಿಮಾನ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಭೂ ಸ್ಪರ್ಶ ಮಾಡುವುದಕ್ಕಾಗಿಲ್ಲ ಎನ್ನುವ ಮಾಹಿತಿಯೊಂದಿಗೆ ಪ್ರಯಾಣ ರದ್ದಾಯಿತು. ಆದರೆ ವಿಮಾನ ನಿಲ್ದಾಣದ ಸಿಬ್ಬಂದಿ ಇದನ್ನು ಹ್ಯಾಗೋ ಸುಲಭವಾಗಿ ಹೇಳಿ ತಪ್ಪಿಸಿಕೊಂಡರು, ಆದರೆ ಒಂದು ತಿಂಗಳ ಹಿಂದೆಯೇ ನಿಗದಿಯಾಗಿದ್ದ ಬಹುಮುಖ್ಯಕಾರ್ಯಕ್ರಮವೊಂದಕ್ಕೆ ಇನ್ನಾವುದೋ ನನ್ನದಲ್ಲದ ಕಾರಣಕ್ಕೆ ಪಾಲ್ಗೊಳ್ಳದೆ ಹೋಗಿದ್ದು ನನಗೆ ಅತೀವ ಬೇಸರ ತಂದಿತು. ಇಂತಹ ವಿಮಾನ ಪ್ರಯಾಣದ ವ್ಯವಸ್ಥೆ ಇಲ್ಲದಿದ್ದರೂ ಪರ್ವಾಗಿಲ್ಲ. ಯಾಕೆಂದರೆ ಜನರು ಇದನ್ನು ನಂಬಿಕೊಂಡು ಮೋಸ ಹೋಗುವುದಕ್ಕಿಂತ ಬೇರೆ ಮಾರ್ಗದಲ್ಲಾದರೂ ಗೋವಾಕ್ಕೆ ಹೋಗುತ್ತಾರೆ.