ಸಾಗರ: ರೈತರ ಕೃಷಿ ಪಂಪ್‌ಸೆಟ್ ಆರ್.ಆರ್. ನಂಬರ್‌ಗಳನ್ನು ಆಧಾರ್ ಕಾರ್ಡ್‌ಗೆ ಜೋಡಿಸುವ ಮೆಸ್ಕಾಂ ಕ್ರಮ ಅವೈಜ್ಞಾನಿಕವಾಗಿದ್ದು, ರೈತರು ಯಾವುದೇ ಕಾರಣಕ್ಕೂ ಆಧಾರ್ ಕಾರ್ಡ್‌ಗೆ ಆರ್.ಆರ್.ನಂಬರ್ ಜೋಡಿಸಲು ಅವಕಾಶ ನೀಡಬಾರದು ಎಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎಂ.ಬಿ.ಮಂಜಪ್ಪ ಹಿರೇನೆಲ್ಲೂರು ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಹೊಸನಗರ ತಾಲ್ಲೂಕಿನ ರಿಪ್ಪನಪೇಟೆಯಲ್ಲಿ ಮೆಸ್ಕಾಂ ಅಧಿಕಾರಿಗಳು ಇಂತಹ ಪ್ರಕ್ರಿಯೆ ಪ್ರಾರಂಭಿಸಿದ್ದು, ಇದು ರೈತ ವಿರೋಧಿ ಕ್ರಮವಾಗಿದ್ದು, ರೈತರನ್ನು ಹಗಲು ದರೋಡೆ ಮಾಡುವ ಕ್ರಮ ಇದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲ್ಲೂಕಿನಲ್ಲಿ ೧೦ರಿಂದ ೧೫ಸಾವಿರ ರೈತರು ಮಾತ್ರ ಪಹಣಿ ಹೊಂದಿದ್ದು ಆರ್.ಆರ್. ನಂಬರ್ ಪಡೆದಿದ್ದಾರೆ. ಇನ್ನೂ ೨೫ಸಾವಿರಕ್ಕೂ ಹೆಚ್ಚು ರೈತರು ಆರ್.ಆರ್. ಸಂಖ್ಯೆ ಪಡೆಯದೆ ಕೃಷಿ ಪಂಪ್‌ಸೆಟ್ ಹೊಂದಿದ್ದು, ಕೃಷಿ ಚಟುವಟಿಕೆಯಲ್ಲಿ ನಿರಂತರವಾಗಿ ತೊಡಗಿ ಕೊಂಡಿದ್ದಾರೆ. ಸರ್ಕಾರ ಮತ್ತು ಮೆಸ್ಕಾಂ ಆರ್.ಆರ್. ಸಂಖ್ಯೆ ಹೊಂದಿಲ್ಲದ ರೈತರನ್ನು ಅಕ್ರಮ ಸಂಪರ್ಕ ಪಡೆದವರು ಎಂದು ಯಾವುದೇ ಕಾರಣಕ್ಕೂ ಪರಿಗಣಿಸಬಾರದು ಎಂದು ಒತ್ತಾಯಿಸಿದ್ದಾರೆ.
ಹಿಂದೆ ಅಕ್ರಮ ಸಕ್ರಮಕ್ಕೆ ಅರ್ಜಿ ಹಾಕಲು ಅವಕಾಶ ಇತ್ತು. ಈಗಿನ ಕಾಂಗ್ರೇಸ್ ಸರ್ಕಾರ ಅಕ್ರಮ ಸಕ್ರಮಕ್ಕೆ ಅರ್ಜಿ ಹಾಕುವುದನ್ನು ತಡೆಹಿಡಿದಿದೆ. ಜೊತೆಗೆ ಜಮೀನುಗಳಿಗೆ ಸರಿಯಾಗಿ ನೀರು ಪೂರೈಕೆ ಮಾಡಲು ಸರ್ಕಾರ ಅಗತ್ಯ ಕ್ರಮ ತೆಗೆದುಕೊಂಡಿಲ್ಲ. ಇಂತಹ ಹೊತ್ತಿನಲ್ಲಿ ಗಾಯದ ಮೇಲೆ ಬರೆ ಎನ್ನವಂತೆ ಆಧಾರ್ ಲಿಂಕ್ ಮಾಡಿ ಅಕ್ರಮ ಸಕ್ರಮದಲ್ಲಿ ನೊಂದಾವಣೆ ಮಾಡಿಸಿಕೊಳ್ಳದೆ ಇರುವ ರೈತರಿಂದ ಹೆಚ್ಚಿನ ಶುಲ್ಕ ಪಾವತಿಸಿಕೊಳ್ಳುವ ಹುನ್ನಾರ ಸರ್ಕಾರ ಮಾಡುತ್ತಿದೆ ಎಂದು ಹೇಳಿದರು.
ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ರೈತರ ಮೇಲೆ ಸರ್ಕಾರ ಹಾಕುತ್ತಿರುವ ಭಾರವನ್ನು ಮನಗಂಡು ಮುಖ್ಯಮಂತ್ರಿಗಳು, ಕೃಷಿ ಸಚಿವರ ಗಮನಕ್ಕೆ ವಿಷಯ ತಂದು ಆಧಾರ್ ಜೋಡಣೆಯನ್ನು ನಿಲ್ಲಿಸುವತ್ತ ಗಮನ ಹರಿಸಬೇಕು. ಅನುದಾನ ತರುವ ಕೆಲಸ ಎಲ್ಲರೂ ಮಾಡುತ್ತಾರೆ. ರೈತರ ಸಮಸ್ಯೆ ಬಗ್ಗೆ ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳು ಧ್ವನಿ ಎತ್ತಬೇಕು. ಮೆಸ್ಕಾಂನ ಈ ಅವೈಜ್ಞಾನಿಕ ಕಾನೂನು ಹಿಂದಕ್ಕೆ ಪಡೆಯದೆ ಹೋದಲ್ಲಿ ರೈತ ಸಂಘದ ವತಿಯಿಂದ ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರ ಮನೆ ಎದುರು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ದೇವು ಆಲಳ್ಳಿ ಹಾಜರಿದ್ದರು.