ನಗರದಲ್ಲಿ ಸ್ವಚ್ಛತೆ ಎಂಬುದು ಇಲ್ಲವಾಗಿದೆ. ಸಾಂಕ್ರಾಮಿಕ ರೋಗಗಳು ದಿನೇ ದಿನೇ ಉಲ್ಬಣ ಗೊಳ್ಳುತ್ತಿದ್ದರೂ ಸಹ ಮಹಾ ನಗರಪಾಲಿಕೆ ಇದ್ಯಾವುದರ ಗೋಜಿಗೆ ಹೋಗದೇ ನಿದ್ರಾವಸ್ಥೆ ಯಲ್ಲಿದೆ.
ಶಿವಮೊಗ್ಗ ನಗರದಲ್ಲಿ ಈಗಾಗಲೇ ಡೆಂಗ್ಯೂ ಚಿಕೂನ್ ಗುನ್ಯಾದಂತಹ ಮಾರಕ ಕಾಯಿಲೆ ಗಳು ದಿನೇ ದಿನೇ ಉಲ್ಬಣಿಸುತ್ತಿವೆ. ಈ ಕಾಯಿಲೆಗಳಿಗೆ ಮೂಲ ಕಾರಣ ಸೊಳ್ಳೆಯೇ ಎಂದು ಆರೋಗ್ಯ ಇಲಾಖೆ ಸಾರಿ ಸಾರಿ ಹೇಳುತ್ತಿದೆ. ಆದರೂ ಸಹ ಮಹಾನಗರ ಪಾಲಿಕೆ ಸ್ವಚ್ಛತೆಯ ಕಡೆ ಗಮನಹರಿಸುತ್ತಿಲ್ಲ. ಸೊಳ್ಳೆಗಳ ನಿಯಂತ್ರಣಕ್ಕೆ ಯಾವುದೇ ಕ್ರಮಕೈಗೊಂಡಿಲ್ಲ.
ಇಲ್ಲಿನ ೧೦೦ ಅಡಿ ರಸ್ತೆಯಲ್ಲಿರುವ ವಿನಾಯಕ ನಗರ ಬಡಾವಣೆಯಲ್ಲಿ ಚರಂಡಿಯಲ್ಲಿ ಹೂಳು ತುಂಬಿಕೊಂಡಿದೆ. ನೀರು ಹರಿಯದೇ ನಿಂತುಕೊಂಡಿವೆ. ಇದು ಸಂಪೂರ್ಣ ನಾಗರೀಕರ ಬಡಾವಣೆ ಯಾಗಿದ್ದು, ಇಲ್ಲಿ ದತ್ತಮಠ, ಮಾರಿಕಾಂಬ ದೇವಸ್ಥಾನ, ವಿಶೇಷವಾಗಿ ಜೀವ ಉಳಿಸುವ ಆಸ್ಪತ್ರೆಗಳು, ಮಕ್ಕಳ ಆಸ್ಪತ್ರೆ,ಬ್ಲಡ್ ಬ್ಯಾಂಕ್ ಸಹ ಇಲ್ಲಿ ಕಾರ್ಯನಿರ್ವಹಿ ಸುತ್ತಿದ್ದರೂ ಸಹ ಇದರ ಸುತ್ತಮುತ್ತಲಿನ ಜಾಗವನ್ನು ಸ್ವಚ್ಛಗೊಳಿಸಬೇಕೆಂಬ ಸಾಮಾನ್ಯ ತಿಳುವಳಿಕೆಯೂ ಸಹ ಮಹಾನಗರಪಾಲಿಕೆಯ ಆಡಳಿತ ಮಂಡಳಿಗಾಗಲೀ ಸಿಬ್ಬಂದಿ ವರ್ಗದವರಿಗಾಗಲೀ, ಅಧಿಕಾರಿ ವರ್ಗಕ್ಕಾಗಲೀ ಇದ್ದಂತ್ತಿಲ್ಲ.
ಮಲ್ಲಿಕಾರ್ಜುನ ನಗರ ಬಡಾವಣೆಯಲ್ಲಿ ಈಗಾಗಲೇ ಚಿಕೂನ್ ಗುನ್ಯಾಕ್ಕೆ ಹಲವರು ತುತ್ತಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ರೋಗ ಇತರೇ ಬಡಾವಣೆ ಗಳಿಗೂ ವ್ಯಾಪಿಸುವ ಸಾಧ್ಯತೆ ಇದೆ ಎಂಬ ಅಭಿಪ್ರಾಯ ಆರೋಗ್ಯ ಇಲಾಖೆ ಈಗಾಗಲೇ ವ್ಯಕ್ತಪಡಿಸಿದೆ.
ಸ್ವಚ್ಛತೆಯನ್ನು ಕಾಪಾಡಿಕೊಳ್ಳ ಬೇಕು. ಸೊಳ್ಳೆಗಳ ನಿಯಂತ್ರಣ ಮಾಡಬೇಕೆಂಬ ತಿಳುವಳಿಕೆ ಯನ್ನು ಆರೋಗ್ಯ ಅಧಿಕಾರಿಗಳು ನೀಡುತ್ತಿದ್ದಾರೆ. ಆದರೆ ಮುಖ್ಯ ವಾಗಿ ಮಹಾನಗರಪಾಲಿಕೆ ಯಿಂದ ಆಗಬೇಕಾದಂತಹ ಸ್ವಚ್ಛತಾ ಕಾರ್ಯ ಆಗದೇ ಇರುವುದು ಸೊಳ್ಳೆಗಳ ಉತ್ಪಾದನೆಗೆ ಹೆಚ್ಚು ಅನುಕೂಲವಾದಂತಾಗಿದೆ.
ವಿನಾಯಕ ನಗರ ಬಡಾವಣೆಯಲ್ಲಿ ಕಳೆದ ಹಲವಾರು ತಿಂಗಳಿನಿಂದ ಚರಂಡಿಯಲ್ಲಿ ನೀರು ನಿಂತೇ ಇರುವುದರಿಂದ ಈ ಸ್ಥಳ ಸೊಳ್ಳೆಗಳ ಉಗಮ ಸ್ಥಾನವಾಗಿ ಮಾರ್ಪಟ್ಟಿದೆ. ಈ ಭಾಗದಲ್ಲಿನ ಹಲವು ಮಕ್ಕಳು ಜ್ವರದಿಂದ ಬಳಲಿದ್ದಾರೆ. ಅಲ್ಲದೆ, ಈ ಬಗ್ಗೆ ನಾಗರೀಕರು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಚರಂಡಿಗಳಲ್ಲಿ ನಿಂತ ನೀರು ಹಾಗೆಯೇ ಇದೆ ಎನ್ನುತ್ತಾರೆ ಬಡಾವಣೆಯ ನಿವಾಸಿಗಳು.
ಈಗಾಗಲೇ ವರ್ಷಧಾರೆ ಆರಂಭಗೊಂಡಿದೆ. ಧಾರಾಕಾರವಾಗಿ ಮಳೆಯೂ ಸುರಿಯುತ್ತಿದ್ದು, ಚರಂಡಿಗಳಲ್ಲಿ ನೀರು ಹರಿಯದೇ ಇರುವುದರಿಂದ ಮಳೆಯ ನೀರು ಹಾಗೂ ಚರಂಡಿಯ ನೀರು ರಸ್ತೆಗಳಿಗೆ ನುಗ್ಗಿ ನಂತರ ಮನೆಗಳಿಗೂ ನುಗ್ಗುತ್ತಿರುವುದರಿಂದ ಸಾರ್ವಜನಿಕರಿಗೆ ತೀವ್ರ ಕಿರಿಕಿರಿ ಉಂಟು ಮಾಡುತ್ತಿದ್ದರೂ ಸಹ ಇದ್ಯಾವುದರ ಬಗ್ಗೆಯೂ ಮಹಾನಗರಪಾಲಿಕೆ ಗಮನಹರಿಸದೇ ಇರುವುದು ಅವರುಗಳ ಕರ್ತವ್ಯ ಪ್ರಜೆಗೆ ಸಾಕ್ಷಿಯಾಗಿದೆ ಎಂಬಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಮಹಾನಗರಪಾಲಿಕೆಯಲ್ಲಿ ಆಡಳಿತದಲ್ಲಿರುವವರಿಗೆ ಹಾಗೂ ಅಧಿಕಾರಿ ವರ್ಗಕ್ಕೆ ತಮ್ಮ ಕರ್ತವ್ಯ ಏನು ಎಂಬುದರ ಬಗ್ಗೆ ಅರಿವೇ ಇದ್ದಂತ್ತಿಲ್ಲ. ಇಚ್ಛಾಶಕ್ತಿಯ ಕೊರತೆಯೂ ಇದಕ್ಕೆ ಕಾರಣವಾಗಿದೆ. ಇದೆಲ್ಲದರ ಕಾರಣದಿಂದಾಗಿ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿರುವ ಶಿವಮೊಗ್ಗ ನಗರದಲ್ಲಿ ಸ್ವಚ್ಛತೆ ಎಂಬುದು ಮರಿಚಿಕೆಯಾಗಿದ್ದು, ಮಾರಕ ರೋಗಗಳು ಉಲ್ಬಣಗೊಳ್ಳಲು ಸಹಕಾರಿಯಾಗಿದೆ.
ಮುಂದಿನ ದಿನಗಳಲ್ಲಿ ಪಾಲಿಕೆ ಗಮನಹರಿಸದಿದ್ದರೆ ನಗರದ ನಾಗರೀಕರು ಬೀದಿಗಿಳಿದು ಹೋರಾಟ ನಡೆಸಿದರೂ ಕೂಡಾ ಆಶ್ಚರ್ಯ ಪಡಬೇಕಾಗಿಲ್ಲ.