Tuesday, July 23, 2024
Google search engine
Homeಇ-ಪತ್ರಿಕೆದರ್ಶನ್ ವಿರುದ್ದ ಭುಗಿಲೆದ್ದ ಆಕ್ರೋಶ: ಕೋಟೆನಾಡು ಕೆಂಡಾಮಂಡಲ

ದರ್ಶನ್ ವಿರುದ್ದ ಭುಗಿಲೆದ್ದ ಆಕ್ರೋಶ: ಕೋಟೆನಾಡು ಕೆಂಡಾಮಂಡಲ

ಚಿತ್ರದುರ್ಗ:  ರೇಣುಕಾಸ್ವಾಮಿ ಕೊಲೆ ಖಂಡಿಸಿ ಕೋಟೆನಾಡು ಚಿತ್ರದುರ್ಗದಲ್ಲಿ ಬುಧವಾರ ವಿವಿಧ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಯಿತು.

ಯುವಕ ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು, ಕೊಲೆ ಪ್ರಕರಣದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ  ವೀರಶೈವ ಸಮಾಜ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು  ಪಟ್ಟಣದ ನೀಲಕಂಠೇಶ್ವರ ದೇಗುಲದಿಂದ ಜಿಲ್ಲಾಧಿಕಾರಿಗಳ ಕಚೇರಿ ತನಕ ಪ್ರತಿಭಟನಾ ಮಾರವಣಿಗೆ ನಡೆಸಿ,ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

 ಪಟ್ಟಣದ ನೀಲಕಂಠೇಶ್ವರ ದೇಗುಲದಿಂದ ಆರಂಭಗೊಂಡ ಪ್ರತಿಭಟನೆಯೂ ಬಿಡಿ ರಸ್ತೆಯ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಿತು.ರೇಣುಕಾಸ್ವಾಮಿ ಆತ್ಮಕ್ಕೆ ಶಾಂತಿ ಕೋರಿ ಗಾಂಧಿವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಮೌನಾಚರಣೆ ನಡೆಸಿದರು. ಅಲ್ಲಿಂದ ಒನಕೆ ಓಬವ್ವ ವೃತ್ತದವರೆಗೂ ಸಾಗಿದ ಪ್ರತಿಭಟನಾಕಾರರು ಮಾರ್ಗದುದ್ದಕ್ಕೂ ಆಕ್ರೋಶ ಹೊರಹಾಕಿದರು.

 ಮಾಜಿ ಶಾಸಕ ಜಿ.ಎಚ್ ತಿಪ್ಪಾರೆಡ್ಡಿ ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿ, ದರ್ಶನ್ ಅನೇಕ ಚಿತ್ರಗಳನ್ನು ಮಾಡಿ ಸಮಾಜ ತಿದ್ದುವ ಕೆಲಸ ಮಾಡಿದ್ದರು. ಆದರೆ ನಿಜ ಜೀವನದಲ್ಲಿ ಒಬ್ಬ ಭಿನ್ನವಾದ ವ್ಯಕ್ತಿಯಾಗಿದ್ದಾರೆ. ತಂದೆ- ತಾಯಿಯ ನೋವು ಎಂಥವರಿಗೂ ಕಣ್ಣೀರು ತರಿಸಿದೆ. ಒಂದು ವರ್ಷದ ಕೆಳಗೆ ಮದುವೆ ಆಗಿ, ಪತ್ನಿ ಗರ್ಭಿಣಿ ಇದ್ದಾರೆ ಈ ಸಂದರ್ಭದಲ್ಲಿ ಪತಿಯನ್ನು ಕಳೆದುಕೊಂಡ ಪತ್ನಿ ಗತಿ ಏನಾಗಬೇಡ ಎಂದು ಪ್ರಶ್ನಿಸಿದ ಅವರು, ಇಂತಹ ಕೊಲೆ ಮಾಡಿರುವ ದರ್ಶನ್ ಒಬ್ಬ ಅಮಾನವೀಯ ಹಾಗೂ ಕ್ರೂರ ವ್ಯಕ್ತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ‘ಈ ಹೋರಾಟದಲ್ಲಿ ಪೊಲೀಸರು, ಗೃಹ ಮಂತ್ರಿಗಳು ಅವರನ್ನು ಉಳಿಸುವ ಪ್ರಯತ್ನ ಮಾಡಿದರೆ ನಮ್ಮ ಹೋರಾಟ ತೀವ್ರವಾಗುತ್ತದೆ. ಸರ್ಕಾರ ಸಾವಿಗೆ ನ್ಯಾಯ ಕೊಡಿಸಬೇಕು. ದರ್ಶನ್ ಅಭಿಮಾನಿ ಸಂಘವನ್ನ ವಿಸರ್ಜನೆ ಮಾಡಿ ರೇಣುಕಾಸ್ವಾಮಿ ಸಾವಿಗೆ ನ್ಯಾಯ ಕೊಡಿಸಬೇಕು’ ಎಂದು ಆಗ್ರಹಿಸಿದರು.

ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಮಾತನಾಡಿ, ಎಲ್ಲ ಸಮುದಾಯಗಳ ಜನತೆ ಸೇರಿ ಪ್ರತಿಭಟನೆ ನಡೆಸುತ್ತಿರುವುದು ಮಾನವೀಯತೆಗೆ ಹಿಡಿದ ಕನ್ನಡಿ. ದರ್ಶನ್ ಅಭಿಮಾನಿಗಳಿಗೆ ಇಂದು ಅವರ ವಿಕೃತಿ ಗೊತ್ತಾಗಿದೆ. ಅಂಧಾಭಿಮಾನಿಗಳು ಇದನ್ನು ಅರ್ಥ ಮಾಡಿಕೊಳ್ಳಬೇಕು. ಅಂಧ ಅಭಿಮಾನದ ಕಾರಣಕ್ಕೆ ಆತ ಇಂತಹ ಕೆಲಸ ಮಾಡುತ್ತಿದ್ದಾನೆ. ದರ್ಶನ್ ಅವರ ಬಳಿ ಹಣ ಇದೆ, ಜನ ಇದ್ದಾರೆ. ಈ ಪ್ರಕರಣದಲ್ಲಿ ತಪ್ಪಿಸಿಕೊಳ್ಳಲು ಬಿಡಬಾರದು’ ಎಂದು ಆಗ್ರಹಿಸಿದರು.

ಜಿಲ್ಲಾ ವೀರಶೈವ ಲಿಂಗಾಯತ ಹೇಮರಡ್ಡಿ ಮಲ್ಲಮ್ಮ ಸಮಾಜದ ಉಪಾಧ್ಯಕ್ಷ ನಾಗರಾಜ್ ಸಂಗಮ್ ಮಾತನಾಡಿ ನಟ ದರ್ಶನ್ ಮೇಲೆ ಈಗಾಗಲೇ ಸಾಕಷ್ಟು ದೂರು ಆಪಾದನೆಗಳಿವೆ. ರಾಜ್ಯ ಸರ್ಕಾರ ಸರ್ಕಾರ ರಕ್ಷಿಸಲು ಹೊರಟಂತಿದೆ. ಸಿ.ಬಿ.ಐ.ಗೆ ವಹಿಸಿ ತನಿಖೆಗೆ ಆದೇಶಿಸಿದರೆ ನಿಜಾಂಶ ಬಯಲಿಗೆ ಬರುತ್ತದೆ. ಈಗಲಾದರು ದರ್ಶನ್ ಹುಚ್ಚಭಿಮಾನಿಗಳು ಎಚ್ಚೆತ್ತುಕೊಂಡು ಹೊರಬರಬೇಕು. ನಿಸ್ಪಕ್ಷಪಾತ ತನಿಖೆ ನಡೆಸಿ ನೊಂದಿರುವ ಕುಟುಂಬಕ್ಕೆ ನ್ಯಾಯ ಕೊಡಬೇಕೆಂದು ವಿನಂತಿಸಿದರು.

ಛಲವಾದಿ ಗುರುಪೀಠದ ಶ್ರೀ ಬಸವನಾಗೀದೇವ ಸ್ವಾಮೀಜಿ, ಕರವೇ ಜಿಲ್ಲಾಧ್ಯಕ್ಷ ರಮೇಶ್, ವಕೀಲರಾದ ಕೆ.ಎನ್.ವಿಶ್ವನಾಥಯ್ಯ ಉಮೇಶ್, ಗುರು, ನಗರಸಭೆ ಮಾಜಿ ಅಧ್ಯಕ್ಷೆ ಸುನಿತಾ ಮಲ್ಲಿಕಾರ್ಜುನ್, ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಕಾರ್ಯದರ್ಶಿ ಕೆ.ಎಂ.ವೀರೇಶ್, ಪಟೇಲ್ ಶಿವಕುಮಾರ್, ಬಜರಂಗದಳ ರಾಜ್ಯ ಸಂಯೋಜಕ ಪ್ರಭಂಜನ್, ಕೆಇಬಿ ಷಣ್ಮುಖಪ್ಪ, ಮಹಡಿ ಶಿವಮೂರ್ತಿ ಕಾಂಗ್ರೆಸ್ ಮುಖಂಡ ಮರುಳಾರಾಧ್ಯ  ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ, ಜಿಲ್ಲಾ ವೀರಶೈವ ಲಿಂಗಾಯತ ಹೇಮರಡ್ಡಿ ಮಲ್ಲಮ್ಮ ಸಮಾಜದ ಕಾರ್ಯದರ್ಶಿ ಡಿ.ಟಿ.ಶಿವಾನಂದ್, ಜೆಡಿಎಸ್. ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಗೀತ, ರೇಣುಕಾರಾಧ್ಯ, ರುದ್ರೇಶ್, ಸಿದ್ದೇಶ್, ವೀರಶೈವ ಲಿಂಗಾಯಿತ ಸಮಾಜದ ಮುಖಂಡರು, ದಲಿತ ಸಂಘಟನೆಗಳ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು..
………………………………………
ಕ್ಷುಲ್ಲಕ ಕಾರಣಕ್ಕಾಗಿ ರೇಣುಕಾಸ್ವಾಮಿಯನ್ನು ಚಿತ್ರಹಿಂಸೆ ಕೊಟ್ಟು ಪ್ರಾಣ ತೆಗೆದಿದ್ದಾರೆ. ಸ್ಟಾರ್ ಪಟ್ಟಕ್ಕೆ ಏರಿದವರು ಕಾನೂನು ಕೈಗೆ ತೆಗೆದುಕೊಳ್ಳಬಹುದು, ದುಡ್ಡಿದೆ, ಏನು ಬೇಕಾದರು ಮಾಡಬಹುದು ಎನ್ನುವ ದುರಾಹಂಕಾರ ಅವರಲ್ಲಿ ಮನೆ ಮಾಡಿದೆ, ರಾಜ್ಯದಲ್ಲಿ ಕಾನೂನು ಎಲ್ಲರಿಗೂ ಒಂದೇ ಶ್ರೀಮಂತರಾದರೂ ಬಡವರಾದರೂ ಸಹಾ ಕಾನೂನನ್ನು ಪಾಲಿಸಬೇಕಿದೆ, ಈ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕಿದೆ.
– ಕೆ.ಎಸ್.ನವೀನ್, ವಿಧಾನ ಪರಿಷತ್ ಸದಸ್ಯ

RELATED ARTICLES
- Advertisment -
Google search engine

Most Popular

Recent Comments