ಅದಿಲ್‌ ಸಾವು , ಲಾಕಪ್‌ಡೆತ್ ಅಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ


ಬೆಂಗಳೂರು : ದಾವಣಗೆರೆ ಜಿಲ್ಲೆಯ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಆರೋಪಿಯೊಬ್ಬ ಮೃತಪಟ್ಟಿರುವುದು ಲಾಕಪ್ ಡೆತ್ ಅಲ್ಲ. ಆತನಿಗೆ ಮೂರ್ಛೆ ರೋಗ ಇತ್ತು. ಆ ರೋಗದಿಂದ ಆತ ಮೃತಪಟ್ಟಿದ್ದಾನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಫ್‌ಐಆರ್ ಇಲ್ಲದೆ ಆ ವ್ಯಕ್ತಿಯನ್ನು ಪೊಲೀಸ್ ಠಾಣೆಗ ಕರೆತಂದಿದ್ದು ತಪ್ಪು. ಆ ತಪ್ಪಿಗಾಗಿ ಪೊಲೀಸ್ ಅಧಿಕಾರಿಗಳ ಅಮಾನತ್ತಿಗೆ ಆದೇಶ ಮಾಡಿದ್ದೇನೆ. ಆದರೆ ಇದು ಲಾಕಪ್‌ಡೆತ್ ಅಲ್ಲ ಎಂದರು.

ಇದೇ ವೇಳೆ , ತಮ್ಮ ಪುತ್ರ ರಾಕೇಶ್ ಸಿದ್ಧರಾಮಯ್ಯ ಕುರಿತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತನಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನ್ನ ಮಗ ಸತ್ತು ಹೋಗಿ ೮ ವರ್ಷ ಆಗಿ ಹೋಗಿದೆ. ಈಗ ಆ ವಿಚಾರವನ್ನು ಯಾವುದಕ್ಕೋ ಲಿಂಕ್ ಮಾಡಿ ಮಾತನಾಡುವುದು ಮೂರ್ಖತನ. ಪ್ರಜ್ವಲ್ ರೇವಣ್ಣ ಅತ್ಯಾಚಾರ ಮಾಡಿ ಓಡಿ ಹೋಗಿರುವುದಕ್ಕೂ , ೨೦೧೬ ರಲ್ಲಿ ಮೃತಪಟ್ಟ ರಾಕೇಶ್ ಸಿದ್ಧರಾಮಯ್ಯ ವಿಷಯಕ್ಕೂ ಏನು ಸಂಬಂಧ ಎಂದು ಪ್ರಶ್ನಿಸಿದರು.

ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರೂ ನನಗೆ ಉತ್ತರ ಬರಲಿಲ್ಲ. ಕೇಂದ್ರಕ್ಕೆ ತಡವಾಗಿ ಪತ್ರ ಬಂತು ಎಂಬ ಕೇಂದ್ರ ಸಚಿವರ ಹೇಳಿಕೆ ಸರಿಯಲ್ಲ. ನಾನು ೧೫ ದಿನಗಳ ಹಿಂದೆಯೇ ಪತ್ರ ಬರೆದಿದ್ದೇನೆ. ಸುಮ್ಮನೆ ಕಾಲ ಕಳೆಯುವುದು ಬಿಟ್ಟು ಪಾಸ್‌ಪಾರ್ಟ್ ರದ್ದತಿಗೆ ಕೇಂದ್ರ ಮುಂದಾಗಬೇಕು ಎಂದರು.
ಅತ್ಯಾಚಾರಕ್ಕಿಂತ ವಿಡಿಯೋ ಹಂಚಿದ್ದು ದೊಡ್ಡ ಅಪರಾಧ ಎಂಬ ಕುಮಾರಸ್ವಾಮಿ ಹೇಳಿಕೆ ಬಗ್ಗೆಯೂ ಟೀಕಿಸಿದ ಅವರು, ದೊಡ್ಡ ಅಪರಾಧ ಎಂಬುದು ಯಾವ ಕಾನೂನಲ್ಲಿದೆ. ಕುಮಾರಸ್ವಾಮಿ ಏನಾದರೂ ಸೆಕ್ಷನ್ ಹೇಳಿದ್ದಾರಾ ? ಅದೂ ಭಾರತೀಯ ದಂಡ ಸಂಹಿತೆಯಲ್ಲಿದೆಯಾ ಅಥವಾ ಇವರೇ ಬರೆದುಕೊಂಡಿರುವ ಕಾನೂನಿನಲ್ಲಿದೆಯಾ ಎಂದು ಪ್ರಶ್ನಿಸಿದ ಅವರು,   ನಾನು ವಿಡಿಯೋ ವಿತರಣೆಯನ್ನು ಸಮರ್ಥನೆ ಮಾಡುತ್ತಿಲ್ಲ. ಆದರೆ ಅತ್ಯಾಚಾರಕ್ಕಿಂತ ವಿಡಿಯೋ ಹಂಚಿದ್ದೆ ಮಹಾ ಅಪರಾಧ ಎನ್ನುವುದು ಸರಿಯಲ್ಲ ಎಂಬುದು ತಮ್ಮ ಮಾತಿನ ತಾತ್ಪರ್ಯ ಎಂದು ಸಿದ್ಧರಾಮಯ್ಯ ಹೇಳಿದರು.