ಕುರುವಳ್ಳಿ ಅಲೆಮಾರಿಗಳ ಪರ ನಿಂತ ನಟ ಚೇತನ್‌

ಆ ಜನರಿಗೆ ಮೂಲ ಸೌಕರ್ಯ ಕಲ್ಪಿಸಲು ಸರ್ಕಾರಕ್ಕೆ ಆಗ್ರಹ

ಶಿವಮೊಗ್ಗ,: ತೀರ್ಥಹಳ್ಳಿ ಪಟ್ಟಣದ  ಕುರುವಳ್ಳಿಯಲ್ಲಿ  ಹಲವು ವರ್ಷಗಳಿಂದ ಜೋಪಡಿ ಕಟ್ಟಿಕೊಂಡು ವಾಸಿಸುತ್ತಿರುವ ದೊಂಬರು ಸಮುದಾಯದ ಅಲೆಮಾರಿ  ಜನರಿಗೆ ಮೂಲಭೂತ ಸೌಕರ್ಯ ಕಲ್ಲಿಸುವಲ್ಲಿ ಅಲ್ಲಿನ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ನಿರ್ಲಕ್ಷ್ಯ ತೋರಿದ್ದಾರೆಂದು ನಟ ಹಾಗೂ ಚಿಂತಕ ಚೇತನ್‌ ಅಹಿಂಸಾ ಕಿಡಿಕಾರಿದ್ದು, ಈಗಲಾದರೂ ಸರ್ಕಾರ ಅವರ ಸಹಾಯಕ್ಕೆ ಬರಬೇಕಿದೆ ಎಂದು ಒತ್ತಾಯಿಸಿದ್ದಾರೆ.
 
ಶನಿವಾರ ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹಲವು ವರ್ಷಗಳಿಂದ ನಾನು ಅಲೆಮಾರಿ ಸಮುದಾಯಗಳ ಪರವಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ಇದೇ ಕಾರಣಕ್ಕೆ ಕುರುವಳ್ಳಿಯಲ್ಲಿರುವ ದೊಂಬರು ಸಮುದಾಯದ ಅಲೆಮಾರಿ ಸಮಾಜದವರನ್ನು ಶುಕ್ರವಾರ ಭೇಟಿ ಮಾಡಿ, ಅವರ ಅಹವಾಲುಗಳನ್ನು ಕೇಳಿದ್ದೇನೆ. ಈಗಲೂ ಅವರಿಗೆ ಮೂಲಭೂತ ಸೌಲಭ್ಯಗಳು ಸಿಕ್ಕಿಲ್ಲ. ಅವರ ವಾಸಕ್ಕೆ ಒಂದು ಎಕರೆ ಜಾಗ ನೀಡುವುದಾಗಿ ಭರವಸೆ ಕೊಡಲಾಗಿತ್ತಾದರೂ, ಆ ಜಾಗ ಎಲ್ಲಿ ಎನ್ನುವುದನ್ನು ಈ ತನಕ ಹೇಳಿಲ್ಲ ಎಂದು ದೂರಿದರು.

 ಸ್ವಾತಂತ್ರ್ಯ ಬಂದ ಇಷ್ಟ ವರ್ಷಗಳ ಕಾಲವೂ ಅಲೆಮಾರಿ ಜನರು ಮೂಲ ಸೌಕರ್ಯಗಳಿಲ್ಲದೆ ಬದುಕುತ್ತಿದ್ದಾರೆ. ರಾಜ್ಯದ ಹಲವು ಕಡೆಗಳಲ್ಲಿರುವ ಅಲೆಮಾರಿಗಳಿಗೆ ಮನೆಗಳಿದ್ದರೆ ದಾಖಲೆ ಇಲ್ಲ, ದಾಖಲೆಗಳಿದ್ದರೆ ಮನೆ ಇಲ್ಲ, ಮನೆ-ದಾಖಲೆ ಇದ್ದರೆ ಉಳುಮೆ ಮಾಡುವುದಕ್ಕೆ ಭೂಮಿ ಇಲ್ಲ. ಇದೇ ಕಾರಣಕ್ಕೆ ಅವರು ಈಗಲೂ ಕೂಲಿಯೋ, ಇಲ್ಲವೇ ತಮ್ಮ ಕುಲ ಕಸುಬು ನಂಬಿಕೊಂಡು ಬದುಕುತ್ತಿದ್ದಾರೆ. ತೀರ್ಥಹಳ್ಳಿ ಕುರುವಳಲ್ಲಿರುವ ದೊಂಬರು ಸಮುದಾಯದ ಅಲೆಮಾರಿಗಳದ್ದು ಕೂಡ ಇದೇ ಬದುಕು ಆಗಿದೆ. ಅವರು ಅಲ್ಲಿನ ಮತದಾನ ಮಾಡುವ ಹಕ್ಕಿಲ್ಲ ಎನ್ನುವ ಕಾರಣಕ್ಕೆ ಅವರತ್ತ ಯಾರು ಕೂಡ ತಿರುಗಿ ನೋಡುತ್ತಿಲ್ಲ ಎಂದು ಆರೋಪಿಸಿದರು.

ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರು ಈ ಹಿಂದೆ ರಾಜ್ಯದ ಗೃಹ ಸಚಿವರಾಗಿದ್ದರು. ಆಗ ಈ ಜನರಿಗೆ ಸಹಾಯ ಮಾಡುವುದಕ್ಕೆ ಅವರಿಗೆ ಸಾಧ್ಯವಾಗುತ್ತಿತ್ತು. ಸರ್ಕಾರ ಮಟ್ಟದಲ್ಲಿ ಏನಾದರೂ ವ್ಯವಸ್ಥೆ ಮಾಡಿಸಬಹುದಾಗಿತ್ತು. ಒಂದಷ್ಟು ಭೂಮಿ ಕೊಟ್ಟು ವಸತಿ ವ್ಯವಸ್ಥೆ ಮಾಡಿದ್ದರೆ ಅವರೆಲ್ಲ  ದುಡಿಮೆ ಮಾಡಿಕೊಂಡು ಬದುಕುತ್ತಿದ್ದರು. ಆದರೆ ಆಗ ಆರಗ ಜ್ಞಾನೇಂದ್ರ ಅವರು ಈ ಜನರತ್ತ ತಿರುಗಿಯೋ ನೋಡಿಲ್ಲ. ಈಗಲೂ ಅಲ್ಲಿ ಅವರು ಶಾಸಕರು. ಮನಸು ಮಾಡಿದರೆ ಈ ಜನರಿಗೆ ಅವರು ನ್ಯಾಯ ದೊರಕಿಸಿಕೊಡಬೇಕು. ಹಾಗಾಗಿ ಈಗಲಾದರೂ ಶಾಸಕರು ಈ ಜನರ ಪರ ಧ್ವನಿ ಎತ್ತಬೇಕಿದೆ ಎಂದು ಚೇತನ್‌ ಆಗ್ರಹಿಸಿದರು.

ಇಲ್ಲಿನ ಅಲೆಮಾರಿ ಕ್ಯಾಂಪ್‌ ನಲ್ಲಿ ೨೫ಕ್ಕೂ ಹೆಚ್ಚು ಕುಟುಂಬಗಳಿವೆ. ಅವರಿಗೆ ವಸತಿ ಸೌಲಭ್ಯ ಇಲ್ಲ, ದಾಖಲೆ ಪತ್ರಗಳಿಲ್ಲ, ಭೂಮಿ ಸಿಕ್ಕಿಲ್ಲ. ಹಲವಾರು ವರ್ಷಗಳಿಂದ ಅವರು ಸರ್ಕಾರದ ಯಾವುದೇ ಸೌಲಭ್ಯಗಳಿಲ್ಲದೆ ಬದುಕುತ್ತಿದ್ದಾರೆ. ಈ ಜನರ ಪರವಾಗಿ ಜಿಲ್ಲಾಡಳಿವೂ ಯೋಚಿಸಬೇಕಿದೆ. ತಕ್ಷಣವೇ ಅವರಿಗೆ ವಸತಿ, ಭೂಮಿ ಜತೆಗೆ ಅವರ ಮಕ್ಕಳಿಗೆ ಶಿಕ್ಷಣ ಕೊಡಿಸುವ ಕೆಲಸ ಆಗಬೇಕಿದೆ ಎಂದು ಒತ್ತಾಯಿಸಿದರು. ಇದೇ ವೇಳೆ ಪತ್ರಿಕಾಗೋಷ್ಠಿಯಲ್ಲಿದ್ದ ದಲಿ ಸಂಘರ್ಷ ಸಮಿತಿ ಮುಖಂಡ ಹಾಲೇಶಪ್ಪ ಮಾತನಾಡಿ, ಅಲೆಮಾರಿಗಳ ಸಮಸ್ಯೆ ಇಡೀ ರಾಜ್ಯಾದಾದ್ಯಂತ ಇದೆ. ಶಿವಮೊಗ್ಗದಲ್ಲಿಯೂ ಅಂಬೇಡ್ಕರ್ ಕಾಲೋನಿ, ಸಹ್ಯಾದ್ರಿ ಕಾಲೇಜು ಪಕ್ಕದ ಬೈಪಾಸ್‌ನಲ್ಲಿ ಹಲವು ವರ್ಷಗಳಿಂದ ಅಲೆಮಾರಿಗಳು ಜೀವನ ಸಾಗಿಸುತ್ತಿದ್ದಾರೆ. ಇವರಿಗೆ ಮೂಲಭೂತ ಸೌಲಭ್ಯಗಳನ್ನು ನೀಡಬೇಕಾಗಿದೆ ಎಂದರು.