Monday, July 22, 2024
Google search engine
Homeಇ-ಪತ್ರಿಕೆತುಂಗಾ ನದಿ ನೀರು ಸ್ವಚ್ಛತೆಗೆ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದ ನಟ ಅನಿರುದ್ದ

ತುಂಗಾ ನದಿ ನೀರು ಸ್ವಚ್ಛತೆಗೆ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದ ನಟ ಅನಿರುದ್ದ

ಬೆಂಗಳೂರು: ತುಂಗಾ ನದಿ ನೀರು ಸ್ವಚ್ಚತೆಗೆ ಸಂಬಂಧಿಸಿ ಇಂದು ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಮುಖ್ಯಮಂತ್ರಿ‌ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ನಟ ಅನಿರುದ್ದ ಮನವಿ ಸಲ್ಲಿಸಿದರು.

ಶಿವಮೊಗ್ಗದಲ್ಲಿ ಆರಂಭವಾಗಿ, ಹರಿಹರ, ಹೊಸಪೇಟೆಯ ಮಾರ್ಗವಾಗಿ ಮಂತ್ರಾಲಯವನ್ನು ತಲುಪಿ ಮುಂದೆ ಕೃಷ್ಣಾ ನದಿಯನ್ನು ಸೇರುವ ನಮ್ಮ ನಾಡಿನ ಪವಿತ್ರವಾದ ತುಂಗೆಯ ಜಲವು ಸ್ವಚ್ಛತೆ, ಪಾವಿತ್ರ್ಯತೆಯ ಜೊತೆಗೆ ಆಮ್ಲಜನಕದ ಕೊರತೆಯಿಂದ ಇದೀಗ ಸಂಪೂರ್ಣವಾಗಿ ಕಲುಷಿತವಾಗಿದೆ ಹಾಗೂ ಅಶುದ್ಧತೆಯಿಂದಾಗಿ, ಬಳಸಲು ಯೋಗ್ಯವಲ್ಲದಂತಹ ದಯನೀಯ ಸ್ಥಿತಿಗೆ ತಲುಪಿದೆ. ಈ ನಿಟ್ಟಿನಲ್ಲಿ ಕೂಡಲೇ ಸೂಕ್ತ ಕ್ರಮ ವಹಿಸಬೇಕು ಎಂದು ತಾವು ಸಲ್ಲಿಸಿದ ಮನವಿಯಲ್ಲಿ ಹೇಳಿದ್ದಾರೆ.

ನಾವು ತಾಯಿಯಂತೆ ಪೂಜಿಸುವ, ತನ್ನದೇ ಆದ ಭವ್ಯ ಇತಿಹಾಸವನ್ನು ಹೊಂದಿರುವಂತಹ ಪ್ರಕೃತಿ ಮಾತೆಯ ಕೊಡುಗೆಯಾದ ನಮ್ಮ ನಾಡಿನ ಪುಣ್ಯ ನದಿ ತುಂಗಭದ್ರೆಯು, ಈಗ ತನ್ನ ಶುಚಿತ್ವವನ್ನು ಕಳೆದುಕೊಂಡು, ಸಂಪೂರ್ಣ ಕಲುಷಿತವಾಗಿ ಇನ್ನು ಮುಂದೆ ಬಳಕೆಗೆ ಯೋಗ್ಯವಲ್ಲದಂತಹ ಶೋಚನೀಯ ಸ್ಥಿತಿ ತಲುಪಿರುವುದನ್ನು ನೋಡಿದಾಗ ಕನ್ನಡಿಗರಾದ ನಮಗೆ ನಿಜಕ್ಕೂ ದಿಗ್ಬ್ರಮೆಯಾಗುತ್ತದೆ. ಮನಸ್ಸಿಗೆ ನೋವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ನೀರು ವಿಶೇಷವಾಗಿ ಅಮೋನಿಯಾ ಮತ್ತು ಫಾಸ್ಪೇಟ್ ಪೋಷಕಾಂಶಗಳ ಪ್ರಬಲ ಮೂಲವಾಗಿದೆ. ಸುಲಭವಾಗಿ ಕಳೆ ಬೆಳೆಯಲು ಇದು ಏಕೈಕ ಕಾರಣವಾಗಿದೆ. ಕಳೆಗಳಿಂದಾಗಿ ನದಿಯಲ್ಲಿನ ಆಮ್ಲಜನಕದ ಮಟ್ಟವು ಶೂನ್ಯವಾಗುತ್ತದೆ. ಜಲಚರಗಳು ಜೀವಿಸುವುದಕ್ಕೂ ಯಾವುದೇ ಸಾಧ್ಯತೆಯಿರುವುದಿಲ್ಲ. ನಾವು ಕೆಲವು ಮೀನುಗಳನ್ನು ಮಾತ್ರ ನೋಡಬಹುದು. ಇದು ಖಂಡಿತವಾಗಿಯೂ ನದಿಯ ವಿಷಾದನೀಯ ಸ್ಥಿತಿ. ನಿಜಕ್ಕೂ ಇದೊಂದು ದುರಂತ ಮತ್ತು ದುರದೃಷ್ಟಕರ. ಈ ಬಗ್ಗೆ ನಾವು ಜಾಗೃತಿ ಮೂಡಿಸಲೇಬೇಕಿದೆ. ಈ ಮಾಲಿನ್ಯಯವನ್ನು ಈಗಲೇ ತಡೆಗಟ್ಟುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಇಲ್ಲಿ ಮಳೆಯಿಂದ ಸಂಗ್ರಹವಾಗುವ ನೀರು ನದಿಗೆ ಸೇರಲು ಅವಕಾಶವೇ ಇಲ್ಲದಂತಾಗಿದೆ. ಬದಲಾಗಿ, ಮಳೆ ಬಂದಾಗ ಈ ಕೊಳಚೆ ಮಿಶ್ರಿತ ನದಿಯ ನೀರು, ಹೊರಕ್ಕೆ ಹರಿದು ಬಂದು ಜನ ಜೀವನ ಅಸ್ತವ್ಯಸ್ತವಾಗುವಂತೆ ಮಾಡುವ ಮತ್ತಷ್ಟು ಸಮಸ್ಯೆಗಳು ಎದುರಾಗುವಂತಿದೆ ಎಂದು ಅದರಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

ಇಲ್ಲಿ ಯಾರನ್ನೂ ಹೊಣೆ ಮಾಡುವ, ಆರೋಪ ಹೊರಿಸುವ ಉದ್ದೇಶವಿಲ್ಲ. ನಾವೆಲ್ಲರೂ ಸೇರಿ ನಾವು ಪೂಜಿಸುವ ತುಂಗೆಯನ್ನು ಕಾಪಾಡಬೇಕಿದೆ. ಸೂಕ್ತ ಪರಿಹಾರವನ್ನು ಕಂಡುಕೊಳ್ಳುವ ಮೂಲಕ ಇದನ್ನು ಕಾರ್ಯರೂಪಕ್ಕೆ ತರಬೇಕಿದೆ. ಈ ಮೂಲಕ ನಿಜ ಜೀವನದಲ್ಲೂ ನಾವು ತಾಯಿಯಂತೆ ತುಂಗಾ ನದಿಯನ್ನು ಗೌರವಿಸೋಣ ಎನ್ನುವುದೇ ನನ್ನ ಮನೋಭಿಲಾಷೆ. ಈ ದೃಷ್ಟಿಯಿಂದ ನಾನು ಪವಿತ್ರವಾದ ತುಂಗಾ ನದಿಯ ಸ್ವಚ್ಛತೆಯ ಅಭಿಯಾನ’ವನ್ನು ಹಮ್ಮಿಕೊಂಡಿದ್ದೇನೆ ಮತ್ತು ಮಾಧ್ಯಮದಿಂದ ಈ ಅಭಿಯಾನಕ್ಕೆ ಉತ್ತಮ ಪ್ರೋತ್ಸಾಹ ದೊರೆತಿದೆ ಎಂದು ಅದರಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಸಹೃದಯಿಗಳಾದ ತಾವು ಖಂಡಿತಾ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಿರೆಂದು ನಂಬಿದ್ದೇನೆ ಎಂದು ತಿಳಿಸಿದ್ದಾರೆ.

ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ನೀರಾವರಿ‌ ನಿಗಮದ ಎಂಡಿ ರಾಜೇಶ್ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಕೂಡಲೇ  ತುಂಗಾ ನದಿ ಸ್ವಚ್ಚತೆಗೆ ಗಮನ ಹರಿಸುವಂತೆ ಸೂಚಿಸಿದರು.

RELATED ARTICLES
- Advertisment -
Google search engine

Most Popular

Recent Comments