ಶಿಕಾರಿಪುರ: ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ಎಲ್ಲ ಸೌಲಭ್ಯ ಕಲ್ಪಿಸಿಕೊಟ್ಟ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಬಗ್ಗೆ ನಾನು ಹೆಚ್ಚಿನ ನಿಗಾವಹಿಸಿದ್ದು ಅನಗತ್ಯವಾಗಿ ರೋಗಿಗಳನ್ನು ಶಿವಮೊಗ್ಗಕ್ಕೆ ಶಿಫಾರಸ್ಸು ಮಾಡುವುದು ಒಳ್ಳೆಯ ಬೆಳವಣಿಗೆಯಲ್ಲ. ಈ ಬಗ್ಗೆ ದೂರು ಕೇಳಿಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಕ್ಷೇತ್ರದ ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಅನಿವಾರ್ಯ ಸಂದರ್ಭದಲ್ಲಿ ಶಿವಮೊಗ್ಗಕ್ಕೆ ರೋಗಿಗಳನ್ನು ಕಳುಹಿಸಿದಲ್ಲಿ ಅಲ್ಲಿ ಸ್ಥಳಾವಕಾಶ ಕೊರತೆಯಾಗಿ ರೋಗಿ ಪ್ರಾಣಕ್ಕೆ ತೊಂದರೆ ಎದುರಾಗುವ ಸಾದ್ಯತೆಯಿದ್ದು ಅಂತಹ ಸಂದರ್ಬದಲ್ಲಿ ಅಲ್ಲಿನ ವೈಧ್ಯಾಧಿಕಾರಿಗಳ ಜತೆ ಮಾತುಕತೆ ನಡೆಸಿ ತುರ್ತು ಚಿಕಿತ್ಸೆಯ ಎಲ್ಲ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತೆ ಸೂಚಿಸಿದ ಅವರು, ಆಸ್ಪತ್ರೆಯಲ್ಲಿನ ವೈದ್ಯ ಸಿಬ್ಬಂದಿ ಸಹಿತ ಜನರಿಕ್ ಔಷಧಿ ಕೊರತೆಯಿದ್ದಲ್ಲಿ ಗಮನಕ್ಕೆ ತಂದಲ್ಲಿ ಪರಿಹರಿಸಲು ಸಿದ್ದವಿರುವುದಾಗಿ ತಿಳಿಸಿದರು.
ಆಸ್ಪತ್ರೆಯ ಆಡಳಿತ ವೈಧ್ಯಾಧಿಕಾರಿ ಡಾ.ಅರುಣ್ ಕುರ್ಮಾ, ಫಿಜಿಷಿಯನ್ ಒತ್ತಡದಿಂದ ಕೆಲ ತುರ್ತು ಸಂದರ್ಭದಲ್ಲಿ ತಲೆಗೆ ಪೆಟ್ಟು, ಮೂಳೆ ಮತ್ತಿತರ ತೀವ್ರ ಹೊಡೆತದ ರೋಗಿಗಳನ್ನು ಮಾತ್ರ ಶಿವಮೊಗ್ಗಕ್ಕೆ ಶಿಫಾರಸುಗೊಳಿಸಲಾಗುತ್ತಿದೆ. ಆಸ್ಪತ್ರೆಯಲ್ಲಿ ಕೀಲು ಮೂಳೆ, ಕಿವಿ, ಮೂಗು, ಗಂಟಲು ತಜ್ಞ ವೈದ್ಯರ ಕೊರತೆಯನ್ನು ಪರಿಹರಿಸಲು ಇಲಾಖೆ ಜತೆ ಸತತ ಸಂಪರ್ಕದಲ್ಲಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಮಹೇಶ್ ಹುರ್ಲ್ಮಾ, ಪ್ರಶಾಂತ ಜೀನಳ್ಳಿ, ಪಾಲಾಕ್ಷಪ್ಪ ಮುಖಂಡ ಗುರುಮೂರ್ತಿ, ಹನುಮಂತಪ್ಪ,ರುದ್ರೇಶ್ ತಜ್ಞ ವೈದ್ಯ ಡಾ.ಶ್ರೀನಿವಾಸ, ಡಾ.ಮಾರುತಿ, ಡಾ.ಬಸವಕುಲಾಲ, ಡಾ.ಅನಿಲ್ ಕುರ್ಮಾ ಮತ್ತಿತರರು ಉಪಸ್ಥಿತರಿದ್ದರು.