ಶಿವಮೊಗ್ಗ: ಕೊಲೆ ಯತ್ನದ (attempt to murder) ಪ್ರಕರಣದ ಆರೋಪಿಯೊಬ್ಬನನ್ನು ಖಚಿತ ಸುಳಿವಿನ ಮೇರೆಗೆ ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಆರೋಪಿಯೇ ಮಾರಾಕಾಸ್ತ್ರಗಳಿಂದ ದಾಳಿ ನಡೆಸಿದಾಗ ಪ್ರತಿಯಾಗಿ ಸ್ವಯಂ ರಕ್ಷಣೆಗಾಗಿ ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹೊಡೆದಿರುವ ಘಟನೆ ನಡೆದಿದೆ.
ಶಿವಮೊಗ್ಗ ತಾಲ್ಲೂಕು ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ತ್ಯಾಜುವಳ್ಳಿಯ ಕಾಡಿನಲ್ಲಿ ರೌಡಿ ಶೀಟರ್ ರಜಾಕ್ (23) ಇರುವಿಕೆಯ ಸುಳಿವು ಪಡೆದ ಹೊಳೆಹೊನ್ನೂರು ಪೊಲೀಸ್ ಠಾಣೆಯ ಪಿಐ ಲಕ್ಷ್ಮಪತಿಯವರು ತಂಡದೊಂದಿಗೆ ಆತನ ಬಂಧಿಸಲು ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಆರೋಪಿಯು ಪೊಲೀಸರ ಮೇಲೆ ಚಾಕು ಮುಂತಾದ ಮಾರಾಕಾಸ್ತ್ರಗಳಿಂದ ಸಿಬ್ಬಂದಿ ಅರ್ಜುನ್ ಮೇಲೆ ದಾಳಿ ನಡೆಸಿದ್ದನು. ಈ ಸಂದರ್ಭ ಪೊಲೀಸರು ಸ್ವ ರಕ್ಷಣೆಗಾಗಿ ಆರೋಪಿಯ ಕಾಲಿಗೆ ಗುಂಡು ಹೊಡೆದಿದ್ದಾರೆ.
ಜೆ.ಪಿ. ನಗರದ ನಿವಾಸಿ ರಜಾಕ್ ನು ತುಂಗ ನಗರ ಪೊಲೀಸ್ ಠಾಣೆಯ ಕೊಲೆ ಯತ್ನದ ಆರೋಪಿಯಾಗಿದ್ದಾನೆ.
ಹೊಳೆಹೊನ್ನೂರು ಪಿಐ ಲಕ್ಷ್ಮಿಪತಿ ಮತ್ತು ಸಿಬ್ಬಂದಿಯು ಆರೋಪಿಯನ್ನು ಬಂಧಿಸಲು ತೆರಳಿದ್ದರು. ಪೊಲೀಸರು ಎಷ್ಟೇ ಎಚ್ಚರಿಕೆ ಕೊಟ್ಟರು ಶರಣಾಗಾದ ಆರೋಪಿಯು ಪೊಲೀಸರ ಮೇಲೆಯೇ ದಾಳಿ ಯತ್ನಿಸಿದನು. ತಕ್ಷಣ ಆತನ ಕಾಲಿಗೆ ಗುಂಡು ಹೊಡೆದ ಪೊಲೀಸ್ ಇನ್ ಸ್ಪೆಕ್ಟರ್ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ಇಂದು ಬೆಳಿಗ್ಗೆ 8ಕ್ಕೆ ಕರೆತಂದು ದಾಖಲಿಸಲಾಗಿದೆ. ಗಾಯಾಳು ಸಿಬ್ಬಂದಿ ಅರ್ಜುನ್ ಸಹ ಮೆಗ್ಗಾನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ.