Monday, July 22, 2024
Google search engine
Homeಇ-ಪತ್ರಿಕೆಶಿವಮೊಗ್ಗ: ಹಾಸ್ಟೆಲ್ ಪ್ರವೇಶಾತಿ ವಿಳಂಬ ವಿರೋಧಿಸಿ ಎಬಿವಿಪಿ ಪ್ರತಿಭಟನೆ

ಶಿವಮೊಗ್ಗ: ಹಾಸ್ಟೆಲ್ ಪ್ರವೇಶಾತಿ ವಿಳಂಬ ವಿರೋಧಿಸಿ ಎಬಿವಿಪಿ ಪ್ರತಿಭಟನೆ

ಶಿವಮೊಗ್ಗ: ವಿದ್ಯಾರ್ಥಿಗಳ ಹಾಸ್ಟೆಲ್ ಪ್ರವೇಶಾತಿ ಆಯ್ಕೆ ಪ್ರಕ್ರಿಯೆಯಲ್ಲಿ ವಿಳಂಬ ಹಾಗೂ ವಿದ್ಯಾರ್ಥಿ ವೇತನವನ್ನು ನೀಡದ ರಾಜ್ಯ ಸರಕಾರದ ವಿರುದ್ಧ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಇಂದು (ಬುಧವಾರ) ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿತು.

ಎಬಿವಿಪಿಯ ಜಿಲ್ಲಾ ಸಂಚಾಲಕ ಅಭಿಶೇಕ್ ಬಿ. ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ, ಗ್ರಾಮೀಣ ಭಾಗದಿಂದ ಬಡ ಮತ್ತು ಪ್ರತಿಭಾವಂತ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯಬೇಕೆಂಬ ಆಶಯವನ್ನ ಇಟ್ಟುಕೊಂಡು ನಗರ ಪ್ರದೇಶಗಳಿಗೆ ಬರುತ್ತಾರೆ. ಆ ವಿದ್ಯಾರ್ಥಿಗಳಿಗೆ ಸರ್ಕಾರಗಳು ಮೂಲಭೂತ ಸೌಲಭ್ಯಗಳನ್ನ ಒದಗಿಸುವುದು ಆದ್ಯ ಕರ್ತವ್ಯವಾಗಿದೆ, ಆದರೆ ರಾಜ್ಯದಲ್ಲಿ ಕಾಲೇಜು ಮತ್ತು ಪ್ರೌಢ ಶಾಲೆಗಳು ಪ್ರಾರಂಭವಾದ ಮೂರು ತಿಂಗಳಗಳ ವರೆಗೆ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರವೇಶಾತಿ ಸಿಗುತ್ತಿಲ್ಲ. ಜೂನ್ ತಿಂಗಳಲ್ಲಿ ಶಾಲೆ- ಕಾಲೇಜುಗಳು ಪ್ರಾರಂಭವಾದರೂ ಸಹಿತ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರವೇಶಾತಿ ಸಿಗುವುದರಲ್ಲಿ ಸಪ್ಟೆಂಬರ್ ವರೆಗೂ ತಲುಪುವ ಹಂತವನ್ನು ಸರ್ಕಾರ ಮತ್ತು ಅಧಿಕಾರಿಗಳು ಮಾಡುತ್ತಿರುವುದರಿಂದ ಸಾವಿರಾರು ವಿದ್ಯಾರ್ಥಿಗಳು ಮೂರು ತಿಂಗಳುಗಳ ಕಾಲ ಎಲ್ಲಿ ಉಳಿದುಕೊಂಡು ಶಿಕ್ಷಣವನ್ನ ಪಡೆಯಬೇಕು ಎಂಬುವ ಸಾಮಾನ್ಯ ಜ್ಞಾನವು ಸರ್ಕಾರಗಳಿಗೆ ಇಲ್ಲದಂತಾಗಿದೆ. ರಾಜ್ಯ ಸರ್ಕಾರ ಕೂಡಲೇ ಈ ವರ್ಷದ ಹಾಸ್ಟೆಲ್ ಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ತಕ್ಷಣವೇ ಪೂರ್ಣಗೊಳಿಸಿ, ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರವೇಶಾತಿ ಕಲ್ಪಿಸಬೇಕೆಂದು ನಮ್ಮ ಸಂಘಟನೆ ರಾಜ್ಯ ಸರ್ಕಾರವನ್ನ ಆಗ್ರಹಿಸುತ್ತದೆ ಎಂದು ಹೇಳಿದರು.

ಹಾಸ್ಟೆಲಗಳಿಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಲ್ಲಿ 40% ವಿದ್ಯಾರ್ಥಿಗಳಿಗೆ ಮಾತ್ರ ವಸತಿ ನಿಲಯಗಳನ್ನ ಕಲ್ಪಿಸಿಕೊಡುವ ವ್ಯವಸ್ಥೆ ಈಗ ನಮ್ಮ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಲಭ್ಯವಿದೆ, ಆದರೆ ಇನ್ನುಳಿದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಈ ವ್ಯವಸ್ಥೆಯಿಂದ ವಂಚಿತರಾಗಿ ತಮ್ಮ ಉನ್ನತ ಶಿಕ್ಷಣವನ್ನ ಪಡೆಯಲು ಕಷ್ಟಕರವಾಗುತ್ತಿದೆ, ಸರ್ಕಾರ ಕೂಡಲೇ ಹಾಸ್ಟೆಲಗಳ ಸಂಖ್ಯೆಯನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ ವಿಶೇಷ ಅನುದಾನವನ್ನ ನೀಡಿ ಹಾಸ್ಟೆಲಗಳ ಸಂಖ್ಯೆಗಳನ್ನ ಹೆಚ್ಚಳ ಮಾಡಬೇಕು ಹಾಗೂ ಈಗಿರುವ ಹಾಸ್ಟೆಲಗಳಿಗೆ ಮೂಲಭೂತ ಸೌಲಭ್ಯವನ್ನು ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಎಬಿವಿಪಿ ಒತ್ತಾಯಿಸುತ್ತದೆ ಎಂದು ತಿಳಿಸಿದರು.

ಲಕ್ಷಾಂತರ ಬಡ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನವನ್ನು ನಂಬಿ ಶಿಕ್ಷಣವನ್ನ ಪಡೆಯುತ್ತಿದ್ದಾರೆ, ತಮ್ಮ ಶಿಕ್ಷಣಕ್ಕೆ ಸರ್ಕಾರಗಳು ನೀಡುವ ವಿದ್ಯಾರ್ಥಿವೇತನ ಸಹಕಾರಿಯಾಗಲಿದೆ ಎಂಬ ಭಾವನೆಯೊಂದಿಗೆ ಅರ್ಜಿ ಸಲ್ಲಿಸಿದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಕಳೆದ ವರ್ಷದ ವಿದ್ಯಾರ್ಥಿವೇತನ ಜಮೆಯಾಗದೆ ಬಹಳಷ್ಟು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನವನ್ನು ಕಡಿತಗೊಳಿಸಿರುವುದು, ವಿದ್ಯಾಸಿರಿ ವಿದ್ಯಾರ್ಥಿ ವೇತನ ಸರಿಯಾಗಿ ಜಮೆಯಾಗದೇ ಇರುವುದು, ರೈತ ವಿದ್ಯಾನಿಧಿಯನ್ನ ರದ್ದುಗೊಳಿಸಿರುವುದು, ಹಾಗೂ ಇನ್ನುಳಿದ ವಿದ್ಯಾರ್ಥಿ ವೇತನವು ಸರಿಯಾಗಿ ವಿದ್ಯಾರ್ಥಿಗಳಿಗೆ ಜಮೆ ಮಾಡದೆ ವಿದ್ಯಾರ್ಥಿ ವಿರೋಧಿ ನೀತಿಯನ್ನ ಅನುಸರಿಸುತ್ತಿರುವ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಸಂಬಂಧಿಸಿದ ಸಚಿವರು ತಕ್ಷಣವೇ ವಿದ್ಯಾರ್ಥಿವೇತನವನ್ನು ವಿದ್ಯಾರ್ಥಿಗಳ ಹಾತೆಗೆ ಜನ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿ ಪರಿಷತ್ ಆಗ್ರಹಿಸುತ್ತದೆ ಎಂದರು.

ಹಾಸ್ಟೆಲಗಳಿಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಕೂಡಲೇ ಪೂರ್ಣಗೊಳಿಸಿ ಹಾಸ್ಟೆಲಗಳಿಗೆ ಪ್ರವೇಶಾತಿ ನೀಡಬೇಕು. ರಾಜ್ಯದಲ್ಲಿ ಸಮಾಜ ಕಲ್ಯಾಣ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಇಲಾಖೆಗಳ ಹಾಸ್ಟೆಲ್‌ಗಳ ಸಂಖ್ಯೆಯನ್ನು ಹೆಚ್ಚಳ ಮಾಡಬೇಕು. ಬಾಕಿ ಉಳಿದಿರುವ ಹಿಂದಿನ ವರ್ಷದ ವಿದ್ಯಾರ್ಥಿ ವೇತನವನ್ನು ತಕ್ಷಣವೇ ವಿದ್ಯಾರ್ಥಿಗಳ ಖಾತೆಗೆ ಜಮೆ ಮಾಡಬೇಕು ಎಂಬುದು ನಮ್ಮ ಬೇಡಿಕೆಗಳಾಗಿವೆ ಎಂದರು.
ಸಂಘಟನೆಯು ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರಕಾರಕ್ಕೆ ತಮ್ಮ ಬೇಡಿಕೆಯ ಪತ್ರವನ್ನು ಸಲ್ಲಿಸಿತು.

ಪ್ರತಿಭಟನೆಯ ನೇತೃತ್ವವನ್ನು ಸಂಘಟನೆಯ ಪುನೀತ್‌, ಸಚ್ಚಿನ್‌, ಲೋಹಿತ್‌, ಯಶಸ್ವಿನಿ, ಸಿಂಚನ ಮುಂತಾದವರು ವಹಿಸಿದ್ದರು.

RELATED ARTICLES
- Advertisment -
Google search engine

Most Popular

Recent Comments