ಆನಂದಪುರ: ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಠಾಣೆಯಲ್ಲಿ ಕೆಲ ದಿನಗಳ ಹಿಂದೆ ಯುವತಿ ನಾಪತ್ತೆ ಪ್ರಕರಣವೊಂದು ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರಿಗೆ ಯುವತಿಯ ಕೊಲೆ ಪ್ರಕರಣ ಬಯಲಿಗೆ ಬಂದಿದೆ. ಅನಂದಪುರ ಸಮೀಪ ಕೊಲೆಯಾಗಿದ್ದು, ಆಕೆಯ ಮೃತದೇಹವನ್ನು ಹೂಳಲಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ಯುವತಿಯನ್ನು ಹತ್ಯೆ ಮಾಡಿದ ಆರೋಪಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಸಾಗರ ಮೂಲದ ಯುವಕ ಹಾಗೂ ಕೊಪ್ಪ ತಾಲ್ಲೂಕು ಮೂಲದ ಯುವತಿ ಕಳೆದ ಎರಡೂವರೆ ವರ್ಷದಿಂದ ಪರಸ್ಪರ ಪ್ರೀತಿಸಿದ್ದರು. ಇಬ್ಬರು ಬೇರೆ ಬೇರೆ ಸಮುದಾಯದವರಾಗಿದ್ದು ಯುವತಿ ದಲಿತ ಸಮುದಾಯಕ್ಕೆ ಸೇರಿದವಳು ಎನ್ನಲಾಗಿದೆ.
ತೀರ್ಥಹಳ್ಳಿಯಲ್ಲಿ ಫೈನಾನ್ಸ್ ವೊಂದರಲ್ಲಿ ಕೆಲಸ ಮಾಡ್ತಿದ್ದ ಸೃಜನ್ ಕೊಪ್ಪಗೆ ಹಣ ವಸೂಲಿಗೆ ಹೋಗುತ್ತಿದ್ದ. ಈ ವೇಳೆ ನರ್ಸಿಂಗ್ ವ್ಯಾಸಂಗ ಮಾಡ್ತಿದ್ದ ಸೌಮ್ಯಾಳ ಪರಿಚಯವಾಗಿತು. ಇಬ್ಬರ ನಡುವಿನ ಪರಿಚಯ ಪ್ರೀತಿಗೆ ತಿರುಗಿತ್ತು. ಇಬ್ಬರದ್ದು ಬೇರೆ ಬೇರೆ ಸಮುದಾಯವಾಗಿದ್ದರಿಂದ ಸೃಜನ್ ಮನೆಯಲ್ಲಿ ಮದುವೆಗೆ ನಿರಾಕರಿಸಿದ್ದರು ಎನ್ನಲಾಗಿದೆ.
ಜುಲೈ 2 ರಂದು ಸೌಮ್ಯ ತೀರ್ಥಹಳ್ಳಿಗೆ ಹೋಗುತ್ತೇನೆ ಎಂದು ಮನೆಯಲ್ಲಿ ಹೇಳಿ ಕೊಪ್ಪದಿಂದ ತೀರ್ಥಹಳ್ಳಿಗೆ ಬಂದಿದ್ದಳು. ಬಳಿಕ ತನ್ನ ಪ್ರಿಯತಮನನ್ನು ಭೇಟಿ ಮಾಡಿ ಮನೆಗೆ ಕರೆದುಕೊಂಡು ಹೋಗುವಂತೆ ಒತ್ತಡ ಹಾಕಿದ್ದಾಳೆ.
ಸೃಜನ್ ತೀರ್ಥಹಳ್ಳಿಯಿಂದ ಹೆದ್ದಾರಿಪುರಕ್ಕೆ ಸೌಮ್ಯಳನ್ನು ಕರೆದುಕೊಂಡು ಬಂದು ಸಮಾಧಾನದ ಮಾತುಗಳನ್ನಾಡಿದ್ದಾನೆ. ಈತ ತನಗೆ ಮೋಸ ಮಾಡುತ್ತಿದ್ದಾನೆ ಎಂದು ಭಾವಿಸಿ ಸೌಮ್ಯ ವಾದ ಮಾಡಿದ್ದಾಳೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಸೃಜನ್ ಕತ್ತು ಹಿಸುಕಿ ಹಲ್ಲೆ ಮಾಡಿದ ಪರಿಣಾಮ ಯುವತಿ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾಳೆ. ನಂತರ ಆರೋಪಿ ಸೃಜನ್ ಮುಂಬಾಳು ಬಳಿ ಶವವನ್ನು ಹೂತಿಟ್ಟಿದ್ದಾನೆ.
ಮತ್ತೊಂದೆಡೆ ಸೌಮ್ಯಳ ಪೋಷಕರು ತಮ್ಮ ಮಗಳು ನಾಪತ್ತೆಯಾಗಿದ್ದಾಳೆ ಎಂದು ಕೊಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ನಂತರ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇಂದು ತಹಶೀಲ್ದಾರ್ ಸಮ್ಮುಖದಲ್ಲಿ ಪೊಲೀಸರು ಯುವತಿಯ ಶವವನ್ನು ಮೇಲಕ್ಕೆ ತೆಗೆದು ವಿಚಾರಣೆ ಮುಂದುವರಿಸುವ ಸಾಧ್ಯತೆ ಇದೆ. ಈ ಸಂಬಂಧ ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ನಡೆಸ್ತಿದ್ದಾರೆ. ಸಾಗರ ಉಪವಿಭಾಗದ ಪೊಲೀಸರು ನೆರೆಯ ಜಿಲ್ಲೆ ಪೊಲೀಸರಿಗೆ ಸಹಕಾರ ನೀಡುತ್ತಿದ್ದಾರೆ. ಸ್ಥಳದಲ್ಲಿ ಉನ್ನತ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ.