ಹಾಡಿನೊಂದಿಗೆ ನಟ ದಿ.ದ್ವಾರಕೀಶ್‌ಗೆ ಗಾನ ನಮನ

ದಾವಣಗೆರೆ: ಚಲನಚಿತ್ರ ನಟ, ನಿರ್ಮಾಪಕ ದಿ.ದ್ವಾರಕೀಶ್ ನೆನಪಿಗಾಗಿ ಜೂನ್‌ 8ರಂದು ಸಂಜೆ 6 ಗಂಟೆಗೆ ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ನಾಡಿನ ಖ್ಯಾತ ಹಾಸ್ಯಚಲನಚಿತ್ರನಟ, ನಿರ್ಮಾಪಕ, ನಿರ್ಧೇಶಕ (ಕೀರ್ತಿಶೇಷ) ದ್ವಾರಕೀಶ್‌ ಅವರಿಗೆ ಅವರದ್ದೇ ಚಲನಚಿತ್ರದ ಗಾಯನದೊಂದಿಗೆ “ಗಾನನಮನ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಚಲನಚಿತ್ರ ಅಭಿಮಾನಿಗಳ ಕ್ರೀಯಾತ್ಮಕ ಸಂಸ್ಥೆ ಹಾಗೂ ಸಿನಿಮಾಸಿರಿಯಿಂದ ನಡೆಸಲಾಗುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷ ಅಂದನೂರು ಮುಪ್ಪಣ್ಣ ಸುದ್ಧಿಗೋಷ್ಠಿಯಲ್ಲಿ ತಿಳಿಸಿದರು.

 ʻಕಾಲವನ್ನು ತಡೆಯೋರು ಯಾರೂ ಇಲ್ಲʼ ಎಂಬ ಹೆಸರಾಂತ ಹಾಡಿನೊಂದಿಗೆ ಆರಂಭವಾಗುವ ಗಾನನಮನ ಸಮಾರಂಭವನ್ನು ಶಾಸಕ ಶಿವಶಂಕರಪ್ಪ ಉದ್ಘಾಟಿಸಲಿದ್ದು, ಖ್ಯಾತ ಚಲನಚಿತ್ರ ನಿರ್ಧೇಶಕ ಹೆಚ್.‌ಆರ್.‌ಭಾರ್ಗವ ಮುಖ್ಯ ಅತಿಥಿಗಳಾಗಿ ಆಗಮಿಸುವರು, ಸಿನಿಮಾಸಿರಿ ನೂತನ ಅಧ್ಯಕ್ಷ ಅಂದನೂರು ಮುಪ್ಪಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು ಎಂದರು.

ಗಾಯಕ ಆರ್.ಟಿ.ಮೃತ್ಯುಂಜಯ ಮಾತನಾಡಿ, ನಾಡಿನ ಸುಪ್ರಸಿದ್ಧ ನಟರಾದ ಡಾ.ರಾಜಕುಮಾರ್‌, ವಿಷ್ಣುವರ್ಧನ್‌, ಅಂಬರೀಶ್‌ ಅವರೊಂದಿಗೆ ಸುಮಾರು 300 ಚಲನಚಿತ್ರಗಳಲ್ಲಿ ನಟಿಸಿ, ತಮ್ಮ ಇಡೀ ಜೀವನವನ್ನು ಚಲನಚಿತ್ರಕ್ಕೆ ಮುಡುಪಾಗಿ ಇಟ್ಟಿದ್ದರು. ʻಪ್ರಚಂಡಕುಳ್ಳʼ ಎಂದೇ ಖ್ಯಾತರಾಗಿ ನಾಡಿನ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದಾರೆ ಎಂದು ಸ್ಮರಿಸಿದರು.

ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಇರಲಿದ್ದು, ಕನ್ನಡ ಚಲನಚಿತ್ರದ ಇಂಪಾದ ಹಾಡುಗಳನ್ನು ಆಲಿಸುವ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಗಾನನಮನ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕೆಂದು ಸುರಭಿ ಶಿವಮೂರ್ತಿ ಮನವಿ ಮಾಡಿದರು.

ಎನ್.ವಿ.ಬಂಡಿವಾಡ, ಹೆಚ್.ವಿ. ಮಂಜುನಾಥಸ್ವಾಮಿ, ಸಾಲಿಗ್ರಾಮ ಗಣೇಶ್ ಶೆಣೈ, ಎಂ.ಜಿ.ಜಗದೀಶ್, ಮಲ್ಲಿಕಾರ್ಜುನ, ಆರ್.ಟಿ. ಮೃತ್ಯುಂಜಯ, ಡಾ.ಬಿ.ಎಸ್. ನಾಗಪ್ರಕಾಶ್ ಇತರರು ಸುದ್ದಿಗೋಷ್ಟಿಯಲ್ಲಿ ಇದ್ದರು.