ಶಿವಮೊಗ್ಗ: ಭದ್ರಾ ಜಲಾಶಯದಲ್ಲಿ ದೊಡ್ಡದೊಂದು ಯಡವಟ್ಟು ನಡೆದಿದ್ದು, ಆ ಯಡವಟ್ಟಿನಿಂದಾಗಿ ಡ್ಯಾಂಗೆ ಹರಿಯುತ್ತಿರುವ ಒಳಹರಿವಿನಷ್ಟೆ ಪ್ರಮಾಣದ ನೀರು ಸಂಗ್ರಹವಾಗದೇ ನದಿಗೆ ಹರಿಯುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.
ಡ್ಯಾಂಗೆ ಸಂಬಂಧಿಸಿದಂತೆ ರಿಪೇರಿಯನ್ನ ಅಧಿಕಾರಿಗಳು ಮಳೆಗಾಲದಲ್ಲಿ ಕೈಗೊಂಡಿದ್ದಾರೆ. ಜಲಾಶಯದಿಂದ ನದಿಗೆ ನೀರು ಬಿಡುವ ಎರಡು ಕ್ರೂಸ್ ಗೇಟ್‌ಗಳಿವೆ. ಈ ಗೇಟ್‌ಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿದೆಯೇ ಇಲ್ಲವೇ ಎಂಬುದನ್ನ ಈಗ ಪರಿಶೀಲನೆ ಮಾಡಿದ್ದಾರೆ.
ಡ್ಯಾಂ ರಿವರ್‍ಸ್ ಗೇಟ್‌ನ್ನು ಎತ್ತಿಕೊಂಡು ಗೇಟಿನ ರಿಪೇರಿ ಕೈಗೊಳ್ಳಲಾಗಿದೆ. ಆದರೆ ರಿಪೇರಿ ಮುಗಿದ ಮೇಲೆ ಒಂದು ಡ್ಯಾಂ ರಿವರ್‍ಸ್ ಗೇಟ್ ಇಳಿಯುತ್ತಿಲ್ಲ. ಇದರಿಂದ ಡ್ಯಾಂಗೆ ಬರುತ್ತಿರುವ ನೀರು ಸರಾಗವಾಗಿ ಹೊರಕ್ಕೆ ಹೋಗುತ್ತಿದೆ ಎನ್ನಲಾಗಿದೆ. ಬರೋಬ್ಬರಿ ನಾಲ್ಕೈದು ಸಾವಿರ ಕ್ಯೂಸೆಕ್ಸ್ ನೀರು ನದಿಗೆ ಹರಿಯುತ್ತಿದೆ. ಅಲ್ಲದೆ ಡ್ಯಾಂನಲ್ಲಿ ನೀರು ಸಂಗ್ರಹ ಹೆಚ್ಚುತ್ತಿಲ್ಲ. ನದಿಯಲ್ಲಿ ಸರಾಗವಾಗಿ ಹರಿಯುತ್ತಿರುವ ನೀರನ್ನ ಗಮನಿಸಿರುವ ರೈತರು ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನೆ ಮಾಡಿ ಪ್ರತಿಭಟನೆಯ ಎಚ್ಚರಿಕೆಯನ್ನ ನೀಡಿದ್ದಾರೆ.
ಇನ್ನೂ ಮೂಲಗಳ ಪ್ರಕಾರ, ಭದ್ರಾ ಡ್ಯಾಂ ನಿರ್ವಹಣೆಯ ದೊಡ್ಡ ಭ್ರಷ್ಟಾಚಾರದ ಅನುಮಾನವೂ ಅಧಿಕಾರಿಗಳ ಯಡವಟ್ಟಿನಿಂದ ಹೊರಕ್ಕೆ ಬರುವ ಸಾದ್ಯತೆ ಇದೆ ಎನ್ನಲಾಗಿದೆ.